Advertisement

ಹಿರ್ಗಾನ ಕುಕ್ಕುದಕಟ್ಟೆ –ಕಾನಂಗಿ ರಸ್ತೆ ಗೋಳು ಕೇಳುವವರಿಲ್ಲ

12:30 AM Feb 10, 2019 | Team Udayavani |

ಅಜೆಕಾರು: ಹಿರ್ಗಾನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಕ್ಕುದಕಟ್ಟೆಯಿಂದ ಕಾನಂಗಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಿಲ್ಲಾ ಪಂಚಾಯತ್‌ ರಸ್ತೆ ಸಂಪೂರ್ಣ ಹಾಳಾಗಿದ್ದು, ಹೊಂಡಮಯವಾಗಿದೆ.

Advertisement

ಸುಮಾರು 20 ವರ್ಷಗಳ ಹಿಂದೆ ಈ ರಸ್ತೆಯು ಡಾಮರೀಕರಣಗೊಂಡಿತ್ತು. ಕಳೆದ ಐದಾರು ವರ್ಷಗಳಿಂದ ಇಲ್ಲಿ ತೇಪೆ ಕಾರ್ಯವೂ ನಡೆದಿಲ್ಲ.

ಪ್ರಮುಖ ಸಂಪರ್ಕ ರಸ್ತೆ
ಪೆಲತ್ತಿಜೆ, ಕಾನಂಗಿ, ಪಾಲಿಜೆ, ಎಲ್ಲಿಬೆಟ್ಟು, ಬೆಂಗಾಲ್‌ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು ಹಾಳಾದ್ದರಿಮದ ಸಂಚಾರ ಕಷ್ಟವಾಗಿದೆ. ಪಾಲಿಜೆ ಭಾಗದಲ್ಲಿ ಪರಿಶಿಷ್ಠ ಜಾತಿಯ ಕಾಲನಿ ಇದ್ದು ಅಲ್ಲಿಗೂ ಸಂಪರ್ಕಿಸುತ್ತದೆ. 4 ಕಿ.ಮೀ.ನಷ್ಟು ಉದ್ದವಿರುವ ಈ ರಸ್ತೆ ಮೂಲಕ ಕಾನಂಗಿ ಭಾಗದ ಜನತೆ ತಮ್ಮ ನಿತ್ಯ ವ್ಯವಹಾರಕ್ಕಾಗಿ ಕಾರ್ಕಳ, ಹಿರ್ಗಾನ ಪೇಟೆಗೆ ತೆರಳಬೇಕಾಗಿದೆ. ಈ ಭಾಗದಲ್ಲಿ ಸುಮಾರು 300 ಕುಟುಂಬಗಳು ವಾಸಿಸು ತ್ತಿವೆ. ಕಾನಂಗಿ ಪ್ರದೇಶಕ್ಕೆ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಮಾತ್ರ ಬಸ್‌ ಸೌಲಭ್ಯವಿದ್ದು ಇತರ ಸಮಯದಲ್ಲಿ ಅಟೋ ರಿಕ್ಷಾವನ್ನೇ ಅವಲಂಬಿಸ ಬೇಕಾಗಿದೆ. ಆದರೆ ರಸ್ತೆ ಹದಗೆಟ್ಟಿರುವುದರಿಂದ ಅಟೋ ಚಾಲಕರು ಹಿಂದೇಟು ಹಾಕುತ್ತಿದ್ದಾರೆ.

ಮನವಿ ಕೇಳುವವರಿಲ್ಲ
ದಶಕಗಳಿಂದ ರಸ್ತೆಗೆ ಮರುಡಾಮರೀಕರಣಗೊಳಿಸಿ ಅಭಿವೃದ್ಧಿ ಪಡಿಸುಂತೆ ಜನಪ್ರತಿನಿಧಿಗಳಿಗೆ, ಇಲಾಖಾ ಅಧಿಕಾರಿಗಳಿಗೆ ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಪಂಚಾಯತ್‌ ಆಡಳಿತವು ತನ್ನ ಅಲ್ಪ ಅನುದಾನದಲ್ಲಿ ಪ್ರತೀ ವರ್ಷ ಹೊಂಡಗಳಿಗೆ ಮಣ್ಣು ಹಾಕುವ ಕಾರ್ಯ ಮಾಡುತ್ತಿದೆ. ಆದರೆ ಈ ಮಣ್ಣು ಮಳೆ ನೀರಿಗೆ ಕೊಚ್ಚಿಹೋಗುತ್ತಿದ್ದು ರಸ್ತೆ ಹೊಂಡ ಮತ್ತೆ ಸಂಚಾರಕ್ಕೆ ಸಮಸ್ಯೆ ತಂದೊಡ್ಡುತ್ತಿದೆ.

ಸಿಆರ್‌ಎಫ್ನಿಂದ ಅನುದಾನ?
ಕೇಂದ್ರೀಯ ರಸ್ತೆ ನಿಧಿಯಿಂದ 2 ಕೋಟಿ ಅನುದಾನ ಮಂಜೂರಾಗಿದೆ ಎಂದು ಕಳೆದ ಎರಡು ವರ್ಷಗಳಿಂದ ಭರವಸೆ ನೀಡಲಾಗುತ್ತಿದೆಯಾದರೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಅದಕ್ಕೂ ಮುನ್ನ ಮುತುವರ್ಜಿ ವಹಿಸಬೇಕೆನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

Advertisement

ತುರ್ತು ಅಗತ್ಯ
ಪಂಚಾಯತ್‌ ವ್ಯಾಪ್ತಿಯ ಅತ್ಯಂತ ಪ್ರಮುಖ ರಸ್ತೆಯಾಗಿರುವ ಕುಕ್ಕುದಕಟ್ಟೆ ಕಾನಂಗಿ ರಸ್ತೆಯನ್ನು ಸರಕಾರದ ಯಾವುದಾದರೂ ಯೋಜನೆಯ ವ್ಯಾಪ್ತಿಯಲ್ಲಿ ಅಳವಡಿಸಿ ತುರ್ತಾಗಿ ಅಭಿವೃದ್ಧಿಪಡಿಸಿ ಸ್ಥಳೀಯರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ.
– ಸಂತೋಷ್‌ ಕುಮಾರ್‌ ಶೆಟ್ಟಿ, ಅಧ್ಯಕ್ಷರು, ಗ್ರಾ.ಪಂ.ಹಿರ್ಗಾನ

– ಜಗದೀಶ್‌ರಾವ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next