ಬೆಂಗಳೂರು: ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿಲಂಕೇಶ್ ಹತ್ಯೆ ನಡೆದು ಬುಧವಾರಕ್ಕೆ ಒಂದು ತಿಂಗಳು ಕಳೆದಿದೆ. ಗೌರಿ ಹಂತಕರ ಜಾಡು ಹಿಡಿದು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಹಂತಕರ ನಿಖರ ಸುಳಿವು ಇದುವೆರೆಗೂ ಲಭ್ಯವಾಗಿಲ್ಲ.
ಗೌರಿಹಂತಕರನ್ನು ಶೀಘ್ರವಾಗಿ ಬಂಧಿಸಬೇಕು ಎಂದು 100 ಸಿಬ್ಬಂದಿಯನ್ನೊಳಗೊಂಡ ಎಸ್‌ಐಟಿ ತನಿಖಾ ತಂಡ, ಕಳೆದ ಒಂದು ತಿಂಗಳಲ್ಲಿ ಹಲವು ದೃಷ್ಟಿಕೋನಗಳಲ್ಲಿ ಗೌರಿ ಹಂತಕರ ತನಿಖೆ ಕೈಗೊಂಡಿದೆ. ಹತ್ಯೆಗೆ ಬಳಸಿದ್ದು 7.65 ಎಂ.ಎಂ ನಾಡಪಿಸ್ತೂಲ್ ಎಂದು ಪತ್ತೆಹಚ್ಚುವಲ್ಲಿ ತಂಡ ಯಶಸ್ವಿಯಾಗಿದೆ. ಅದರಂತೆ, ನಾಡಪಿಸ್ತೂಲ್ ಸರಬರಾಜಾಗಿರುವ ಮೂಲ ಪತ್ತೆಹಚ್ಚಲು ವಿಜಯಪುರ, ಕಲಬುರಗಿ, ನಕ್ಸಲೈಟ್ಸ್ ಸಂಪರ್ಕಗಳನ್ನು ಜಾಲಾಡಿ ಕೆಲವರನ್ನು ವಿಚಾರಣೆಗೊಳಪಡಿಸಿದೆ.
500 ಮಂದಿ ವಿಚಾರಣೆ: ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಗೌರಿ ಲಂಕೇಶ್ ಹತ್ಯೆಯನ್ನು ಬೇಧಿಸಲು ತೊಡಗಿಸಿಕೊಂಡ ತನಿಖಾ ತಂಡ, ಇದುವರೆಗೂ 500ಕ್ಕೂ ಹೆಚ್ಚುಮಂದಿಯನ್ನು ವಿಚಾರಣೆಗೊಳಪಡಿಸಿ ಮಾಹಿತಿ ಕಲೆಹಾಕಿದೆ. ಗೌರಿ ಲಂಕೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದವರು, ಭೂಗತ ಲೋಕದ ಹಳೇ ಡಾನ್‌ಗಳು, ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಹಿರಿಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ,
ಪತ್ರಕರ್ತ ಚಕ್ರವರ್ತಿ ಚಂದ್ರಚೂಡ, ಮಾಜಿ ನಕ್ಸಲೈಟ್‌ಗಳಾದ ಸಿರಿಮನೆ ನಾಗರಾಜು, ನೂರ್ ಶ್ರೀಧರ್, ಗೌರಿ ಸಂಬಂಧಿಕರು ಅವರ ಜತೆ ಕೆಲಸ ಮಾಡಿದ ಸಿಬ್ಬಂದಿ, ಗೌರಿ ಮನೆ ಕೆಲಸದವರು, ಫೇಸ್‌ಬುಕ್, ಟ್ವೀಟರ್‌ನಲ್ಲಿ ಗೌರಿಯನ್ನು ಟೀಕಿಸಿದವರೂ ಸೇರಿದಂತೆ ಇದುವರೆಗೂ 500ಕ್ಕೂ ಹೆಚ್ಚು ಮಂದಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
600 ಸಿಸಿಟಿವಿ ಫೂಟೇಜ್ ಪರಿಶೀಲನೆ: ಗೌರಿಹತ್ಯೆ ನಡೆದ ದಿನದಿಂದಲೇ ಗೌರಿನಿವಾಸದ ಸುತ್ತಮುತ್ತಲೂ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳು, ಗೌರಿ ಅವರ ಮನೆ, ಕಚೇರಿ ಸುತ್ತಮುತ್ತಲ ಪ್ರದೇಶಗಳು ಸೇರಿದಂತೆ ಇತರೆಡೆ ಅಳವಡಿಸಿದ್ದ 600ಕ್ಕೂ ಹೆಚ್ಚುಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿ, ಅದರಲ್ಲಿ ಅನುಮಾನಸ್ಪದ ಬೈಕ್ ಮತ್ತು ಕಾರುಗಳನ್ನು ಪತ್ತೆಹಚ್ಚಲಾಗಿದೆ. ದೃಶ್ಯಾವಳಿಗಳಲ್ಲಿ ಕಂಡುಬಂದ ಶಂಕಾಸ್ಪದರ ರೇಖಾಚಿತ್ರಗಳನ್ನು ಬಿಡಿಸಿ ಹಂತಕರ ಬಂಧನಕ್ಕೆ ಎಸ್‌ಐಟಿ ಬಲೆಬೀಸಿದೆ.
ಪ್ರಕರಣದ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ಅವರ ಕಚೇರಿ, ವೈಯಕ್ತಿಕ ನಂಬರ್‌ಗಳಿಗೆ ಬಂದ ದೂರವಾಣಿ ಕರೆಗಳು, ಹತ್ಯೆ ನಡೆದ ಎರಡು ಮೂರು ದಿನಗಳ ಹಿಂದೆ ಕಾನ್‌ರೆನ್ಸ್ ಕಾಲ್‌ಗಳ ಮಾಹಿತಿಯನ್ನು ಒಳಗೊಂಡು ಲಕ್ಷಾನುಗಟ್ಟಲೆ ಕರೆ ವಿವರಗಳನ್ನು ಪರಿಶೀಲಿಸಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸವಿದೆ. ತನಿಖಾ ಹಂತದಲ್ಲಿ ಇತರೆ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಎಸ್‌ಐಟಿಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಬೇಧಿಸಲು ನಿಯೋಜನೆಗೊಂಡಿರುವ ಎಸ್‌ಐಟಿ, ಹಂತಕರ ಪತ್ತೆಗೆ ಹಗಲಿರುಳು ಶ್ರಮಿಸುತ್ತಿದೆ. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ದೊರೆತಿದೆ. ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವಿದೆ.
-ರಾಮಲಿಂಗಾರೆಡ್ಡಿ, ಗೃಹಸಚಿವ