ಸುರಪುರ: ಸನಾತನ ಪರಂಪರೆ ಉಳ್ಳ ಹಿಂದೂ ಧರ್ಮವನ್ನು ಪುನರ್ ಸ್ಥಾಪಿಸುವಲ್ಲಿ ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ. 72 ಪಂಗಡಗಳಾಗಿ ಹಂಚಿ ಹೋಗಿದ್ದ ಧರ್ಮವನ್ನು ಒಟ್ಟೂಗೂಡಿಸುವ ಮೂಲಕ ಹಿಂದೂ ಧರ್ಮದ ಪುನರುಸ್ಥಾಪಕರು ಎನಿಸಿಕೊಂಡಿದ್ದಾರೆ ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಸ್ವಾಮೀಜಿ ವಿಧುಶೇಖರ ಭಾರತಿ ಸ್ವಾಮೀಜಿ ಪ್ರತಿಪಾದಿಸಿದರು.
ವಿಜಯ ಯಾತ್ರೆ ಹಿನ್ನೆಲೆಯಲ್ಲಿ ರವಿವಾರ ನಗರ ಅರಮನೆಗೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಸನಾತನ ಪರಂಪರೆಯಳ್ಳ ಹಿಂದೂ ಧರ್ಮ ವಿಶ್ವದ ಇತರೆ ಧರ್ಮಗಳಲ್ಲಿ ಅತ್ಯಂತ ಶ್ರೇಷ್ಠವಾಗಿದೆ ಎಂದು ತಿಳಿಸಿದರು. 8ನೇ ಶತಮಾನದಲ್ಲಿ ಕೆಲ ಧರ್ಮಗಳ ಪ್ರಭಾವದಿಂದ ಹಿಂದೂ ಧರ್ಮ ಅಳವಿನ ಅಂಚಿನಲ್ಲಿತ್ತು. ಆ ಸಂದರ್ಭದಲ್ಲಿ ಶಂಕರಾಚಾರ್ಯರು ಧರ್ಮ ಸಂಘಟನೆ ಮಾಡದೆ ಹೋಗಿದ್ದರೆ ಭೂಮಿ ಮೇಲೆ ಹಿಂದೂ ಧರ್ಮ ಉಳಿಯುತ್ತಿರಲಿಲ್ಲ ಎಂದು ತಿಳಿಸಿದರು.
ಧರ್ಮೋ ರಕ್ಷತಿ ರಕ್ಷತ ಎನ್ನುವಂತೆ ಎಲ್ಲರೂ ಧರ್ಮ ರಕ್ಷಣೆ ಮಾಡಬೇಕು. ಧರ್ಮ ಮಾರ್ಗದ ಮೇಲೆ ನಡೆದು ಪರೋಪಕಾರ ಭಾವ ರೂಡಿಸಿಕೊಳ್ಳಬೇಕು. ನಮ್ಮ ಧರ್ಮ ಪರಿಪಾಲನೆಯೊಂದಿಗೆ ಇತರೆ ಧರ್ಮವನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ 2007ರಲ್ಲಿ ಮಠದ ಜಗದ್ಗುರುಗಳು ಭೇಟಿ ನೀಡಿದ್ದಾಗ ಇಲಿಯ ಅರಸು ಮನೆತನದ ರಾಜಾ ವೆಂಕಟಪ್ಪ ನಾಯಕ ತಾತಾ ಶ್ರೀಗಳಿಗೆ ಸತ್ಕರಿಸುವ ಮೂಲಕ ರಾಜ ಪರಂಪರೆ ಉಳಿಸಿಕೊಂಡಿದ್ದರು. ಇಂದು ಪುನಃ ಯುವ ರಾಜರು ನಮಗೆ ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡಿದ್ದಾರೆ. ಮಠಕ್ಕೂ ಮತ್ತು ಸಂಸ್ಥನಕ್ಕೂ ಇರುವ ಅವಿನಾಭಾವ ಸಂಭಂದವನ್ನು ಉಳಿಸಿಕೊಂಡಿರುವುದು ಶ್ರೇಯಸ್ಕರ ಎಂದು ಸಂಸ್ಥನದ ಆದರಾತಿಥ್ಯದ ಬಗ್ಗೆ ಶ್ರೀಗಳು ಮೆಚ್ಚುಗೆ ವ್ಯಕ್ತ ಪಡಿಸಿ ಆಶೀರ್ವದಿಸಿದ್ದರು ಎಂದು ತಿಳಿಸಿದರು.
ಕಲಬುರಗಿ ಗಂಗೋತ್ರಿ ವೇಧ ಪಠಶಾಲೆಯ ಮುಖ್ಯಸ್ಥ ಡಾ| ಯೋಗೇಶ ಭಟ್ ಜ್ಯೋಶಿ ಮಾತನಾಡಿದರು. ಶಂಕರ ಸೇವಾ ಸಮಿತಿ ಜಿಲ್ಲಾ ಸಂಚಾಲಕ ರತ್ನಾಕರ್ ಭಟ್ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮೊದಲು ಸ್ವಾಮೀಜಿಗಳ ಪುರ ಪ್ರವೇಶ ಅದ್ಧೂರಿಯಾಗಿ ನಡೆಯಿತು. ರಾಜಾ ಕೃಷ್ಟಪ್ಪ ನಾಯಕ ನೇತೃತ್ವದಲ್ಲಿ ವಿಪ್ರ ಸಮಾಜ ಬಾಂಧವರು ನಗರದ ವೇಣೂಗೋಪಾಲ ಸ್ವಾಮಿ ದೇವಸ್ಥಾನದ ಬಳಿ ಪೂರ್ಣ ಕುಂಬದೊಂದಿಗೆ ಶ್ರೀಗಳಿಗೆ ಶ್ರದ್ಧಾ ಭಕ್ತಿಯಿಂದ ಸ್ವಾಗತ ನೀಡಿದರು.
ನಂತರ ಅರಮನೆಯಲ್ಲಿ ಅರಸು ಮನೆತನದ ರಾಜಾ ಕೃಷ್ಟಪ್ಪ ನಾಯಕ ದಂಪತಿಗಳು ಶ್ರೀಗಳ ಪಾದ ಪೂಜೆ ನೆರವೇರಿಸಿದರು. ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗವಾಯಿತು. ರಾಘವೇಂದ್ರಾಚಾರ್ಯ ಜಹಾಗೀರದಾರ ಪೌರೋತ್ಯದಲ್ಲಿ ನೆರವಾದರು.
ಅರಸು ಮನೆತನದ ರಾಜಾ ವಾಸುದೇವ ನಾಯಕ, ರಾಜಾ ಲಕ್ಷ್ಮೀನಾರಾಯಣ, ರಾಜಾ ಸೀತಾರಾಮ ನಾಯಕ ರಾಜಾ ಕೃಷ್ಟಪ್ಪ ನಾಯಕ, ರಾಜಾ ವಾಸುದೇವ ನಾಯಕ, ರಾಜಾ ಪಿಡ್ಡ ನಾಯಕ, ರಾಜಾ ಎಸ್. ಗೋಪಾಲ ನಾಯಕ, ವೇಣುಮಾಧವ ನಾಯಕ.
ಶಂಕರ ಸೇವಾ ಸಮಿತಿ ತಾಲೂಕು ಅಧ್ಯಕ್ಷ ದೇವಿದಾಸ್ ಭಟ್, ಕೇದಾರನಾಥ ಶಾಸ್ತ್ರಿ, ನಾಗರಾಜ ಹಾಲಗೇರಿ, ಕೃಷ್ಣ ಬಟ್ ಜ್ಯೋಶಿ, ರಾಮಭಟ್ ರಾಜಜ್ಯೋಶಿ, ಯಜ್ಞೆಶ್ವರ ಭಟ್ ರಾಜಜ್ಯೋಶಿ, ಶ್ರೀಹರಿ ಆದೋನಿ ಇದ್ದರು.