ಟೊರೊಂಟೊ: ಕೆನಡಾದ ಬ್ರಾಂಪ್ಟನ್ ನಲ್ಲಿರುವ ಹಿಂದೂ ದೇವಾಲಯವನ್ನು ಭಾರತ ವಿರೋಧಿ ಬರಹದಿಂದ ವಿರೂಪಗೊಳಿಸಲಾಗಿದ್ದು, ಭಾರತೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಸೋಮವಾರ (ಸ್ಥಳೀಯ ಕಾಲಮಾನ) ಗೌರಿ ಶಂಕರ ಮಂದಿರದಲ್ಲಿ ನಡೆದ ವಿಧ್ವಂಸಕ ಕೃತ್ಯವನ್ನು ಖಂಡಿಸಿದ್ದು, ಈ ಕೃತ್ಯವು ಕೆನಡಾದಲ್ಲಿರುವ ಭಾರತೀಯ ಸಮುದಾಯದ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಭಾರತೀಯ ಪರಂಪರೆಯ ಪ್ರತೀಕವಾದ ಬ್ರಾಂಪ್ಟನ್ ನಲ್ಲಿರುವ ಗೌರಿ ಶಂಕರ ಮಂದಿರವನ್ನು ಭಾರತ ವಿರೋಧಿ ಗೀಚುಬರಹದಿಂದ ವಿರೂಪಗೊಳಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ವಿಧ್ವಂಸಕ ಕೃತ್ಯವು ಕೆನಡಾದಲ್ಲಿರುವ ಭಾರತೀಯ ಸಮುದಾಯದ ಭಾವನೆಗಳನ್ನು ಆಳವಾಗಿ ಘಾಸಿಗೊಳಿಸಿದೆ. ಕೆನಡಾದ ಅಧಿಕಾರಿಗಳೊಂದಿಗೆ ನಾವು ಈ ವಿಷಯದ ಬಗ್ಗೆ ನಮ್ಮ ಕಳವಳವನ್ನು ವ್ಯಕ್ತಪಡಿಸಿದ್ದೇವೆ ಎಂದು ಕಾನ್ಸುಲೇಟ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಕಾರ್ಕಳ: ಗದ್ದಲ-ಗೊಂದಲಗಳಿಲ್ಲದೆ ಸುಸೂತ್ರವಾಗಿ ನಡೆದ ಲೋಕಾರ್ಪಣೆ
ಬ್ರಾಂಪ್ಟನ್ ಮೇಯರ್ ಕೂಡಾ ಈ ಘಟನೆಯನ್ನು ಖಂಡಿಸಿದ್ದು “ಪ್ರತಿಯೊಬ್ಬರೂ ತಮ್ಮ ಪೂಜಾ ಸ್ಥಳದಲ್ಲಿ ಸುರಕ್ಷಿತವಾಗಿರಲು ಅರ್ಹರಾಗಿರುತ್ತಾರೆ” ಎಂದು ಹೇಳಿದರು.
ಕೆನಡಾದಲ್ಲಿ ದೇವಸ್ಥಾನವನ್ನು ಧ್ವಂಸಗೊಳಿಸಿರುವುದು ಇದೇ ಮೊದಲಲ್ಲ. 2022ರ ಸೆಪ್ಟೆಂಬರ್ ನಲ್ಲಿ, ಕೆನಡಾದ ಸ್ವಾಮಿನಾರಾಯಣ ಮಂದಿರವನ್ನು ಭಾರತ ವಿರೋಧಿ ಗೀಚುಬರಹದ ಮೂಲಕ ಕೆನಡಿಯನ್ ಖಲಿಸ್ತಾನಿ ಉಗ್ರಗಾಮಿಗಳು ವಿರೂಪಗೊಳಿಸಿದ್ದರು.