ರಾಜಸ್ಥಾನ್: ರಾಜಸ್ಥಾನದ ಅಜ್ಮೀರ್ ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ದರ್ಗಾ ಒಂದು ಕಾಲದಲ್ಲಿ ಹಿಂದು ದೇವಾಲಯವಾಗಿತ್ತು ಎಂದು ಹಿಂದೂ ಸಂಘಟನೆಯೊಂದು ಪ್ರತಿಪಾದಿಸಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯಿಂದ ಸಮೀಕ್ಷೆ ನಡೆಯಲಿ ಎಂದು ಒತ್ತಾಯಿಸಿದೆ.
ಇದನ್ನೂ ಓದಿ:ದಾವೋಸ್ ಪ್ರವಾಸ ಯಶಸ್ವಿ, ರಾಜ್ಯದಲ್ಲಿ 5 ಲಕ್ಷ ಕೋಟಿ ರೂ ಬಂಡವಾಳ ಹೂಡಿಕೆ ನಿರೀಕ್ಷೆ: ನಿರಾಣಿ
ಮಹಾರಾಣಾ ಪ್ರತಾಪ ಸೇನಾ ಸಂಘಟನೆಯ ರಾಜ್ ವರ್ಧನ್ ಸಿಂಗ್ ಪರ್ಮಾರ್, ಸೂಫಿ ಸಂತ ಮೊಯಿನುದ್ದೀನ್ ದರ್ಗಾದ ಗೋಡೆಗಳಲ್ಲಿ ಮತ್ತು ಕಿಟಕಿಗಳಲ್ಲಿ ಹಿಂದೂ ಧರ್ಮದ ಚಿಹ್ನೆಗಳಿರುವುದಾಗಿ ಹೇಳಿದ್ದಾರೆ.
“ ಖ್ವಾಜಾ ಗರೀಬ್ ನವಾಜ್ ದರ್ಗಾ ಹಿಂದೆ ಪುರಾತನ ಹಿಂದೂ ದೇಗುಲವಾಗಿತ್ತು. ದರ್ಗಾದೊಳಗಿನ ಗೋಡೆಗಳು ಮತ್ತು ಕಿಟಕಿಯಲ್ಲಿ ಸ್ವಸ್ತಿಕ್ ಚಿಹ್ನೆಗಳಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಬೇಕು” ಎಂದು ಆಗ್ರಹಿಸುವುದಾಗಿ ಪರ್ಮಾರ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೊಯಿನುದ್ದೀನ್ ಚಿಸ್ತಿಯ ಖಾದೀಮ್ಸ್ ಮಂಡಳಿಯ ಅಧ್ಯಕ್ಷ ಅಂಜುಮಾನ್ ಸೈಯದ್ ಝಡ್ಗಾನ್, ದರ್ಗಾದೊಳಗೆ ಅಂತಹ ಯಾವುದೇ ಚಿಹ್ನೆ ಇಲ್ಲ, ಇದು ಆಧಾರರಹಿತ ಆರೋಪವಾಗಿದೆ. ಪ್ರತಿವರ್ಷ ದರ್ಗಾಕ್ಕೆ ಹಿಂದೂ, ಮುಸ್ಲಿಮರು ಸೇರಿದಂತೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ ಎಂದು ಹೇಳಿದರು.
ನಾನು ಸಂಪೂರ್ಣ ಹೊಣೆಗಾರಿಕೆಯಿಂದ ಹೇಳುತ್ತಿದ್ದೇನೆ, ದರ್ಗಾದೊಳಗೆ ಎಲ್ಲಿಯೂ ಸ್ವಸ್ತಿಕ್ ಚಿಹ್ನೆ ಇಲ್ಲ. ಕಳೆದ 850ವರ್ಷಗಳಿಂದ ದರ್ಗಾ ಅಸ್ತಿತ್ವದಲ್ಲಿದೆ. ಈವರೆಗೂ ಅಂತಹ ಯಾವುದೇ ಪ್ರಶ್ನೆ ಉದ್ಭವವಾಗಿರಲಿಲ್ಲ. ಇತ್ತೀಚೆಗೆ ದೇಶದಲ್ಲಿ ಇಂತಹ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಸೈಯದ್ ತಿಳಿಸಿದ್ದಾರೆ.