ಹುಬ್ಬಳ್ಳಿ: ಹಿಂದೂ ಜನಜಾಗೃತಿ ಸಮಿತಿಯಿಂದ 10ನೇ ಅಖೀಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಜೂ. 12ರಿಂದ 18ರವರೆಗೆ ಗೋವಾ ಫೋಂಡಾದ ಶ್ರೀ ರಾಮಾನಾಥ ದೇವಾಸ್ಥಾನದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಜನಜಾಗೃತಿ ಸಮಿತಿ ವಕ್ತಾರ ಮೋಹನಗೌಡ ಮಾತನಾಡಿ, ಅಧಿವೇಶನದಲ್ಲಿ ಹಿಂದೂ ರಾಷ್ಟ್ರದ ಕಾರ್ಯಪದ್ಧತಿ, ಹಿಂದೂ ರಾಷ್ಟ್ರದಲ್ಲಿ ಆದರ್ಶ ರಾಜ್ಯ ವ್ಯವಹಾರ ಕುರಿತು ಹಿಂದೂ ರಾಷ್ಟ್ರ ಸಂಸತ್ತು ನಡೆಯಲಿದೆ. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂಸದೀಯ ಮತ್ತು ಸಂವಿಧಾನಿಕ ಮಾರ್ಗ, ದೇವಸ್ಥಾನಗಳ ಸುವ್ಯವಸ್ಥಾಪನ, ಹಿಂದೂ ಶೈಕ್ಷಣಿಕ ಧೋರಣೆಗಳ ಕುರಿತು ಚರ್ಚೆಯಾಗಲಿದೆ. ಪ್ರಮುಖವಾಗಿ ಕಾಶಿ ಜ್ಞಾನವ್ಯಾಪಿ ಮಸೀದಿ, ಮಥುರಾ ಮುಕ್ತಿ ಆಂದೋಲನಾ, ಕಾಶ್ಮೀರಿ ಹಿಂದೂಗಳ ನರಮೇಧ, ಮಸೀದಿಗಳಲ್ಲಿ ಧ್ವನಿವರ್ಧಕದಿಂದ ಆಗುವ ಶಬ್ದಮಾಲಿನ್ಯ, ಹಿಜಾಬ್, ಹಲಾಲ್ ಸರ್ಟೀಫಿಕೇಟ್ ಕುರಿತು ಚರ್ಚೆಯಾಗಲಿದೆ ಎಂದು ತಿಳಿಸಿದರು.
ಆರೆಸ್ಸೆಸ್ ಪ್ರಮುಖರಾದ ಮೋಹನ ಭಾಗವತ ಅವರು ಎಲ್ಲಾ ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದು ಸರಿಯಲ್ಲ. ಈ ಹೋರಾಟದಲ್ಲಿ ಆರೆಸ್ಸೆಸ್ ಪಾಲ್ಗೊಳ್ಳುವುದಿಲ್ಲ ಎನ್ನುವ ಹೇಳಿಕೆ ಅವರ ವೈಯಕ್ತಿಕವಾಗಿದೆ. ಅವರು ಹೇಳಿದಾಕ್ಷಣ ಇತರೆ ಸಂಘಟನೆಗಳು ಹಿಂದೆ ಸರಿಬೇಕು ಎನ್ನುವ ನಿಯಮವಿಲ್ಲ ಎಂದರು.
ಸನಾತನ ಸಂಸ್ಥೆಯ ಸೌ.ವಿದುಲಾ ಮಾತನಾಡಿ, ಅಧಿವೇಶನದಲ್ಲಿ ಸಿಬಿಐ ಮಾಜಿ ನಿರ್ದೇಶಕ ನಾಗೇಶ್ವರ ರಾವ್, ನ್ಯಾಯವಾದಿ ಹರಿಶಂಕರ ಜೈನ್, ವಿಷ್ಣು ಶಂಕರ ಜೈನ್, ಶಾಸಕ ಟಿ.ರಾಜಾಸಿಂಹ, ಯುವ ಬ್ರಿಗೆಡ್‌ನ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ದೇಶದ ವಿವಿಧ ಭಾಗಗಳಿಂದ 350ಕ್ಕೂ ಹೆಚ್ಚು ಹಿಂದೂ ಪರ ಸಂಘಟನೆಗಳ 1000 ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಅಮೆರಿಕ, ಇಂಗ್ಲೆಂಡ್, ಸಿಂಗಾಪುರ, ನೇಪಾಳ ದೇಶದಿಂದಲೂ ಆಗಮಿಸಲಿದ್ದಾರೆ. ಸಾಂವಿಧಾನಿಕ ಅಧಿಕಾರಗಳಿಗಾಗಿ ಹಿಂದೂಗಳು ಒಗ್ಗೂಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿವೇಶನ ಎಂದು ಹೇಳಿದರು.
ಶ್ರೀರಾಮ ಸೇನೆಯ ಗಂಗಾಧರ ಕುಲಕರ್ಣಿ ಮಾತನಾಡಿ, ಜನಜಾಗೃತಿ ಸಮಿತಿ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿ ಒಂದು ವೇದಿಕೆ ಕಲ್ಪಿಸಿದೆ. ಇದೀಗ 350 ಸಂಘಟನೆಗಳು ಒಗ್ಗೂಡಿವೆ. ಇಷ್ಟೆಲ್ಲಾ ಹೋರಾಟಗಳು ನಡೆಯುತ್ತಿದ್ದರೂ ಇಂದಿನ ಬಿಜೆಪಿ ಸರಕಾರ ಮೌನ ವಹಿಸಿದೆ. ನಮ್ಮ ಹೋರಾಟಗಳಿಂದ ಅಧಿಕಾರಕ್ಕೆ ಬಂದು ನಮ್ಮ ಬಗ್ಗೆಯೇ ಕನಿಷ್ಟವಾಗಿ ಮಾತನಾಡುತ್ತಿದ್ದಾರೆ. ಹತ್ತಿದ ಏಣಿಯನ್ನು ಒದೆಯುವ ಕೆಲಸ ಮಾಡಬಾರದು. ಬಿಜೆಪಿ ನಾಯಕರು ತಮ್ಮ ನಡೆ ಸರಿಪಡಿಸಿಕೊಳ್ಳದಿದ್ದರೆ ಅವರಿಗೆ ಚುನಾವಣೆ ಸಂದರ್ಭದಲ್ಲಿ ಹಿಂದೂಗಳು ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.