Advertisement

“ಮೆಟ್ರೋದಲ್ಲಿ ಹಿಂದಿ ಬಳಸಲಾಗದು’

11:51 AM Jul 29, 2017 | |

ಬೆಂಗಳೂರು: ಮೆಟ್ರೋ ರೈಲು  ನಿಲ್ದಾಣಗಳಲ್ಲಿ ಹಿಂದಿ ಬಳಕೆ ಬಳಸದಿರುವ ಸಂಬಂಧ ರಾಜ್ಯ ಸರ್ಕಾರ ಮತ್ತೂಂದು ಹೆಜ್ಜೆ ಮುಂದಿಟ್ಟಿದ್ದು, ಹಿಂದಿ ಬಳಸಲು ಸಾಧ್ಯವಿಲ್ಲ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ.

Advertisement

ತಾತ್ಕಾಲಿಕವಾಗಿ ಮೆಟ್ರೋ ನಿಲ್ದಾಣಗಳಲ್ಲಿರುವ ಹಿಂದಿ ನಾಮಫ‌ಲಕ ತೆರವುಗಳಿಸುವಂತೆ ಹಾಗೂ ನಾಮಫ‌ಲಕಗಳನ್ನು ಹಿಂದಿ ರಹಿತವಾಗಿ ಮರುವಿನ್ಯಾಸಗೊಳಿಸುವಂತೆಯೂ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಸೂಚನೆ ನೀಡಿರುವುದರ ಜತೆಗೆ ಪ್ರಧಾನಿ ನರೇಂದ್ರಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಸಹ ಬರೆದಿದ್ದಾರೆ. 

ಎರಡು ಪುಟಗಳ ಸುದೀರ್ಘ‌ ಪತ್ರದಲ್ಲಿ ಮೆಟ್ರೋ ಹಂತ-1 ಪೂರ್ಣಪ್ರಮಾಣದ ಸಂಚಾರಕ್ಕೆ ಮುಕ್ತವಾಗಿ ಎರಡನೇ ಹಂತದ ಕಾಮಗಾರಿ ಮುಂದುವರಿದಿರುವುದು ಹಾಗೂ ಪ್ರತಿ ದಿನ ಪ್ರಯಾಣಿಸುತ್ತಿರುವ ಪ್ರಯಾಣಿಕರ ಸಂಖ್ಯೆ, ಜನರ ಭಾವನೆ, ರಾಜ್ಯ ಸರ್ಕಾರದ ನಿಲುವು ಮತ್ತು ಕ್ರಮ ಎಲ್ಲವನ್ನೂ ವಿವರಿಸಿದ್ದಾರೆ.

ಪತ್ರದ ಸಾರಾಂಶ: ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಬಳಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು. ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರದ ಅನುದಾನದ ಪಾಲು ಶೇ.50 ರಷ್ಟಿದ್ದರೂ ಅದು ರಾಜ್ಯ ಸರ್ಕಾರದ ಸುಪರ್ದಿ ಮತ್ತು ವ್ಯಾಪ್ತಿಯಲ್ಲಿರುವುದರಿಂದ ಹೆಚ್ಚಿನ ಜವಾಬ್ದಾರಿ ನಮ್ಮ ಮೇಲಿದೆ. 

ರಾಜ್ಯದ ಭಾಷಾ ನೀತಿಯನ್ನೇ ನಾವು ಅನುಸರಿಸುತ್ತಿದ್ದೇವೆ. ಭಾಷೆ, ಸಂಸ್ಕೃತಿ ಉಳಿಸಿಕೊಳ್ಳುವುದು ನಮ್ಮ ಹಕ್ಕು, ನಾಡಿನ ಜನರ ಆಶಯಗಳಿಗೆ ವಿರುದ್ಧವಾಗಿ ನಾವು ತೀರ್ಮಾನ ಕೈಗೊಳ್ಳಲಾಗದು. ಇಲ್ಲಿನ ಜನತೆ ತ್ರಿಭಾಷಾ ಸೂತ್ರದಡಿ ಕನ್ನಡ , ಇಂಗ್ಲೀಷ್‌ ಹಾಗೂ ಹಿಂದಿ ಬಳಕೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವು ಘಟನೆಗಳೂ ಇದು ಕಾರಣವಾಗಿದೆ. ಆದರೂ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ ಕ್ರಮ ಕೈಗೊಂಡಿದೆ.

Advertisement

ಬಿಎಂಆರ್‌ಸಿಎಲ್‌ಗೆ ಹಿಂದಿ ರಹಿತ ನಾಮಫ‌ಲಕ ಮರುವಿನ್ಯಾಸ ಮಾಡುವಂತೆಯೂ ಒತ್ತಾಯಪೂರ್ವಕವಾಗಿಯೇ ರಾಜ್ಯ ಸರ್ಕಾರದ ವತಿಯಿಂದ ಸೂಚಿಸಲಾಗಿದೆ.
ರಾಜ್ಯದ ಜನರ ಭಾವನೆಗಳಿಗೆ ಗೌರವ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ.

ಜನರ ಭಾವನೆಗಳನ್ನು ನೀವೂ ಅರ್ಥ ಮಾಡಿಕೊಳ್ಳುತ್ತೀರಿ ಹಾಗೂ ರಾಜ್ಯ ಸರ್ಕಾರದ ಕ್ರಮ ಒಪ್ಪುತ್ತೀರಿ ಎಂದು ಭಾವಿಸಿದ್ದೇನೆ. ಕೇಂದ್ರ ಸರ್ಕಾರದ ವತಿಯಿಂದಲೂ ಕನ್ನಡ ಮತ್ತು ಇಂಗ್ಲೀಷ್‌ ಮಾತ್ರ ಬಳಕೆಗೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಹಿಂದಿ ಬಳಕೆ ವಿರೋಧಿಸಿ ನಡೆದ ಪ್ರತಿಭಟನೆ, ಸಾಮಾಜಿಕ ಜಾಲತಾಣಗಳಲ್ಲಿನ ಅಭಿಯಾನವನ್ನು ಪತ್ರದಲ್ಲಿ ಮುಖ್ಯಮಂತ್ರಿಯವರು ಉಲ್ಲೇಖೀಸಿದ್ದಾರೆ.

ಹಿಂದಿ ಬಲವಂತ ಹೇರಿಕೆ ವಿರುದ್ಧ ಪ್ರಾರಂಭವಾದ ಚಳವಳಿಗೆ ಮೊದಲ ಹಂತದ ಗೆಲುವು ದೊರೆತಿದೆ. ಹಿಂದಿ ಬಳಕೆ ಸಾಧ್ಯವಿಲ್ಲ ಎಂದು ಧೈರ್ಯವಾಗಿ ಕೇಂದ್ರ ಸರ್ಕಾರಕ್ಕೆ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕನ್ನಡ ಹೋರಾಟಗಾರರ ಪರವಾಗಿ ಅಭಿನಂದನೆ. ಹಿಂದಿ ಹೇರಿಕೆ, ಕನ್ನಡ ಧ್ವಜ ವಿಚಾರದಲ್ಲಿ ರಾಜ್ಯದ ಜನತೆ  ಕನ್ನಡಪರ ಸಂಘಟನೆಗಳ ಜತೆಗೆ ನಿಂತಿದ್ದು ಉತ್ತಮ ಬೆಳವಣಿಗೆ.
-ಎಸ್‌.ಸಿ.ದಿನೇಶ್‌ಕುಮಾರ್‌, ಕನ್ನಡಪರ ಹೋರಾಟಗಾರ. 

ಮೆಟ್ರೋದಲ್ಲಿ ಹಿಂದಿ ಬಳಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಮೆಟ್ರೋ ಒಂದೇ ಅಲ್ಲ, ಬ್ಯಾಂಕ್‌ ಹಾಗೂ ಸಾಮಾನ್ಯ ರೈಲ್ವೆಯಲ್ಲೂ ಹಿಂದಿ ಬಳಕೆ ಇದೆ.  ಈ ಬಗ್ಗೆಯೂ ಕ್ರಮ ಅಗತ್ಯ. ರಾಜ್ಯದ ಸಂಸದರು  ಈ ಬಗ್ಗೆ ಮೌನವಾಗಿರುವುದು ಸರಿಯಲ್ಲ.  ಸಂಸತ್‌ನಲ್ಲಿ  ಈ ಬಗ್ಗೆ ಧ್ವನಿ ಎತ್ತಿದರೆ ಬೆಲೆ ಇರುತ್ತದೆ. ಏಕೆಂದರೆ ರಾಜ್ಯ ಪ್ರತಿನಿಧಿಸುವ ಬಿಜೆಪಿ ಸಂಸದರ ಸಂಖ್ಯೆ ಹೆಚ್ಚಾಗಿದೆ. ಅವರದೇ ಸರ್ಕಾರ ಅಲ್ಲಿ ಅಸ್ತಿತ್ವದಲ್ಲಿದೆ. ಹಿಂದಿ ಬಲವಂತವಾಗಿ ಹೇರುವುದು ನಿಲ್ಲುವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ.
-ವಾಟಾಳ್‌ ನಾಗರಾಜ್‌, ಕನ್ನಡ ಚಳವಳಿ ಮುಖಂಡ   

ಹಿಂದಿ ಭಾಷೆ ಬಳಕೆ ಮಾಡುವುದಿಲ್ಲ, ರಾಜ್ಯದ ಜನರ ಭಾವನೆಗೆ ವಿರುದ್ಧ ನಡೆಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿರುವುದು ಹಾಗೂ ಕೇಂದ್ರ ಸಚಿವರಿಗೆ ಪತ್ರ ಬರೆದಿರುವುದು  ಉತ್ತಮ ಬೆಳೆವಣಿಗೆ. ಹಿಂದಿ ಪರ ಇದ್ದವರು  ಈಗಲಾದರೂ ಅರ್ಥ ಮಾಡಿಕೊಳ್ಳಲಿ. ಸಿದ್ದರಾಮಯ್ಯ ಅವರು ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಸಂದೇಶ ರವಾನಿಸಿದ್ದಾರೆ. ಆದರೆ, ಪತ್ರ ಬರೆದಿದ್ದಕ್ಕೆ ಜವಾಬ್ದಾರಿ ಮುಗಿಯುವುದಿಲ್ಲ. ತಕ್ಷಣವೇ ಮೆಟ್ರೋ ಅಧಿಕಾರಿಗಳಿಗೆ ಸೂಚನೆ ನೀಡಿ ಎಲ್ಲೆಡೆ ಹಿಂದಿ ನಾಮಫ‌ಲಕ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.
-ಟಿ.ಎ.ನಾರಾಯಣಗೌಡ, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ  

ಕನ್ನಡದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿರುವ ಕಾಳಜಿ ಪ್ರಶಂಸನೀಯ. ಅವರು ಕೈಗೊಂಡಿರುವ ಕ್ರಮ ಸ್ವಾಗತಾರ್ಹ ಮತ್ತು ಇಡೀ ಕನ್ನಡ ಚಿತ್ರೋದ್ಯಮ ಹಾಗೂ ಕನ್ನಡಿಗರ ಸಂಪೂರ್ಣ ಬೆಂಬಲ ನೀಡುತ್ತದೆ.
-ಸಾ.ರಾ.ಗೋವಿಂದ್‌, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.  

ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಸಿಗಬೇಕು. ಮುಖ್ಯಮಂತ್ರಿಗಳು ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಇದು ರಾಜಕೀಯ ಗಿಮಿಕ್‌ ಆಗಿರಬಾರದು. ಅವರು ಈಗಿನ ನಿರ್ಧಾರಕ್ಕೆ ಬದ್ಧವಾಗಿರಬೇಕು. ಕೇಂದ್ರ ಸರ್ಕಾರ ಹಿಂದಿ ಹೇರಿಕೆಗೆ ಯಾವುದೇ ಒತ್ತಡ ಹೇರಬಾರದು. ಈ ಕುರಿತು ಇಲ್ಲಿನ ಬಿಜೆಪಿ ಸಂಸದರು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು. ಇಲ್ಲಿದ್ದರೆ, ಬಿಜೆಪಿ ಸಂಸದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸಲಿದೆ.
-ಪ್ರವೀಣ್‌ಶೆಟ್ಟಿ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ. (ಪ್ರತ್ಯೇಕ ಬಣ)     

Advertisement

Udayavani is now on Telegram. Click here to join our channel and stay updated with the latest news.

Next