Advertisement

ಹಿಂದೂ ದೇವತೆಗಳಿಗೆ ಅವಮಾನ ಖಂಡನಾರ್ಹ

11:48 PM Jul 04, 2022 | Team Udayavani |

ಯಾವುದೇ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಶಿಕ್ಷಾರ್ಹ. ಇದು ನಮ್ಮ ಸಂವಿಧಾನದಲ್ಲಿಯೇ ಅಡಕವಾಗಿದೆ. ಆದರೂ ಈ ಕಾನೂನನ್ನು ಮೀರಿ ದೇಶ ಮತ್ತು ವಿದೇಶಗಳಲ್ಲಿ ಹಿಂದೂ ದೇವತೆಗಳಿಗೆ ಅವಮಾನ ಮಾಡುವ ಪ್ರಕ್ರಿಯೆ ಮುಂದುವರಿದೇ ಇರುವುದು ದುರದೃಷ್ಟಕರ.

Advertisement

ತಮಿಳುನಾಡಿನ ನಿರ್ದೇಶಕಿ ಲೀನಾ ಮಣಿಮೆಕಲೈ ಎಂಬವರು, ಕಾಳಿ ಎಂಬ ಡಾಕ್ಯುಮೆಂಟರಿ ಚಿತ್ರಿಸಿದ್ದು, ಇದರಲ್ಲಿ ಕಾಳಿ ದೇವತೆಯನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ. ಅಂದರೆ ಕಾಳಿ ಸಿಗರೇಟು ಸೇದುವಂತೆ ಚಿತ್ರಿಸಿರುವುದು, ಸಲಿಂಗ ಕಾಮದ ಧ್ವಜವನ್ನು ಒಂದು ಕೈಗೆ ನೀಡಿರುವ ಈ ಕ್ರಮ ಭಾರತದಲ್ಲಿ ತೀವ್ರ ಆಕ್ರೋಶವನ್ನಂತೂ ಹುಟ್ಟುಹಾಕಿದೆ.

ಸದ್ಯ ಲೀನಾ ಲೀನಾ ಮಣಿಮೆಕಲೈ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಾಗೆಯೇ ಸಾಮಾಜಿಕ ಜಾಲ ತಾಣ ಗಳಲ್ಲಿಯೂ ಕಾಳಿ ಚಿತ್ರದ ನಿರ್ದೇಶಕಿ ವಿರುದ್ಧ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ. ಅಲ್ಲದೆ ಈ ಡಾಕ್ಯುಮೆಂಟರಿ ನಿಷೇಧಕ್ಕೂ ಆಗ್ರಹ ಕೇಳಿ ಬಂದಿದೆ. ವಿಚಿತ್ರವೆಂದರೆ ಈ ಡಾಕ್ಯುಮೆಂಟರಿ ಕೆನಡಾದಲ್ಲಿ ಬಿಡುಗಡೆ ಯಾಗುತ್ತಿದ್ದು, ಅಲ್ಲಿನ ಸರಕಾರದ ಮೇಲೂ ಒತ್ತಡ ತಂದು ಚಿತ್ರ ಬಿಡುಗಡೆಯಾಗದಂತೆ ನೋಡಿಕೊಳ್ಳಬೇಕಾಗಿದೆ.

ಇದೊಂದೇ ಪ್ರಕರಣವಲ್ಲ. ಈ ಹಿಂದೆಯೂ ವಿದೇಶಗಳಲ್ಲಿ ಹಿಂದೂ ದೇವತೆಗಳನ್ನು ಕೆಟ್ಟದಾಗಿ ಬಿಂಬಿಸಿರುವ ಹಲವಾರು ಘಟನೆಗಳು ನಡೆದಿವೆ. ಚಪ್ಪಲಿ ಮೇಲೆ, ಟೀಶರ್ಟ್‌ ಮೇಲೆ, ಒಳಉಡುಪುಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಚಿತ್ರಿಸಿ ಅವಮಾನಿಸಲಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತವಾದ ಬಳಿಕ ಅವುಗಳನ್ನು ವಾಪಸು ತೆಗೆದುಕೊಳ್ಳಲಾಗಿದೆ.
ಆದರೆ ಇಲ್ಲಿ ನಿಜವಾಗಿಯೂ ಚಿಂತಿಸಬೇಕಾಗಿರುವುದು ವಿವಾದಿತ ವಸ್ತುಗಳನ್ನು ವಾಪಸು ತೆಗೆದುಕೊಳ್ಳುವುದೋ ಅಥವಾ ಚಿತ್ರವೊಂದು ಪ್ರದರ್ಶನವಾಗದಂತೆ ತಡೆಯುವುದೋ ಅಲ್ಲ. ಇದಕ್ಕೆ ಬದಲಾಗಿ, ಇಂಥ ಮನಃಸ್ಥಿತಿಯೇ ಬದಲಾಗಬೇಕು ಎಂಬುದು.

ಕೆಲವೊಂದು ಬಾರಿ ಇಂಥ ಚಿತ್ರಗಳನ್ನು ರೂಪಿಸಿದವರು ಅಭಿವ್ಯಕ್ತಿ ಸ್ವಾತಂತ್ರ್ಯದ ರೂಪವೆಂದು ಕರೆಯುತ್ತಾರೆ. ಆದರೆ ಎಷ್ಟೋ ಬಾರಿ ಇವರಿಗೆ ಇನ್ನೊಬ್ಬರ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡಿದಂತೆ ಎಂಬುವುದರ ಅರಿವೇ ಇರುವುದಿಲ್ಲ. ಜತೆಗೆ ಅವರು ಆರಾಧಿಸುವ ದೇವತೆಗಳನ್ನು ಅವ ಮಾನಿಸಿದರೆ, ಆ ಸಮುದಾಯದವರನ್ನೇ ಅವಮಾನಿಸಿದಂತೆ ಎಂಬುದು ಅರ್ಥವಾಗುವುದಿಲ್ಲ. ಅದಷ್ಟೇ ಅಲ್ಲ ಇವು ತೀರಾ ಸೂಕ್ಷ್ಮ ವಿಚಾರಗಳು, ಸಮಾಜದಲ್ಲಿ ಹಿಂಸೆ, ಘರ್ಷಣೆಗೂ ಆಸ್ಪದ ನೀಡಬಹುದು ಎಂಬ ಚಿಂತನೆಯೂ ಇವರಿಗೆ ಇರುವುದಿಲ್ಲ ಎಂಬುದು ತೋರುತ್ತದೆ.

Advertisement

ಇತ್ತೀಚೆಗಷ್ಟೇ ಭಾರತದಲ್ಲಿ ನಾವು ಧಾರ್ಮಿಕ ಸಂಘರ್ಷಕ್ಕೆ ಸಾಕ್ಷಿಯಾಗಿದ್ದೇವೆ. ಈಗಷ್ಟೇ ಅದರಿಂದ ಆಚೆಗೆ ಬರುವ ಪ್ರಯತ್ನಗಳೂ ಆಗುತ್ತಿವೆ. ಸಮಾಜದಲ್ಲಿ ಶಾಂತಿ ಮೂಡಿಸುವ ಕೆಲಸವೂ ನಡೆಯುತ್ತಿದೆ. ಇಂಥ ಹೊತ್ತಿನಲ್ಲೇ ಮತ್ತೆ ಧರ್ಮದ ಹೆಸರಿನಲ್ಲಿ ಯಾರೊಬ್ಬರೂ ಕಿಚ್ಚು ಹತ್ತಿಸುವ ಕೆಲಸ ಮಾಡಬಾರದು. ಇಂಥವರ ವಿರುದ್ಧ ಸರಕಾರಗಳೂ ಮುಲಾಜಿಲ್ಲದೆ ಕ್ರಮಕ್ಕೆ ಮುಂದಾಗಬೇಕು. ಜತೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಂಥ ಘಟನೆಗಳು ಆಗದಂತೆ ಕಟ್ಟುನಿಟ್ಟಾದ ಕಾನೂನೊಂದನ್ನು ಜಾರಿಗೆ ತರುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಇಂಥ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಸಮಾಜದಲ್ಲಿ ಶಾಂತಿ ಕೆಡಿಸುವ ಹುನ್ನಾರಗಳೂ ಮುಂದುವರಿಯುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಸರಕಾರಗಳು ಯೋಚನೆ ಮಾಡಲಿ.

Advertisement

Udayavani is now on Telegram. Click here to join our channel and stay updated with the latest news.

Next