ನವದೆಹಲಿ/ವಾಷಿಂಗ್ಟನ್: ಅಮೆರಿಕದ ಹಿಂಡೆನ್ ಬರ್ಗ್ ಸಂಸ್ಥೆ ನೀಡಿರುವ ವರದಿ ಸುಳ್ಳಿನಿಂದ ಕೂಡಿದೆ. ನಮ್ಮ ಸಮೂಹ ಸಂಸ್ಥೆಯ ವಹಿವಾಟಿನಲ್ಲಿ ವಂಚನೆ ನಡೆದಿದೆ ಎಂಬ ಯಾವುದೇ ಅಂಶವನ್ನು ಅದು ಪತ್ತೆಹಚ್ಚಿಲ್ಲ ಎಂದು ಅದಾನಿ ಗ್ರೂಪ್ಸ್ ನ ಮುಖ್ಯ ಹಣಕಾಸು ಅಧಿಕಾರಿ ಜುಗೆಶೀಂದರ್ ಸಿಂಗ್ ಬ್ಯುಸಿನೆಟ್ ಟುಡೇಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಆರೆಸ್ಸೆಸ್ ಆಡಳಿತ ಸಾಂವಿಧಾನಿಕ ಮೌಲ್ಯಗಳಿಗೆ ಕಿಂಚಿತ್ತೂ ಗೌರವ ಕೊಡುತ್ತಿಲ್ಲ: ಪಿಣರಾಯಿ ವಿಜಯನ್
ಸುಳ್ಳು ಮತ್ತು ತಪ್ಪು ಮಾಹಿತಿಯನ್ನ ಆಧರಿಸಿರುವ ಈ ನಕಲಿ ವರದಿಯಲ್ಲಿ ನಮ್ಮ ವ್ಯವಹಾರಗಳ ಬಗ್ಗೆ ಏನನ್ನೂ ಪತ್ತೆ ಹಚ್ಚಿಲ್ಲ. ವರದಿಯು ನಮ್ಮ ಮೂಲಭೂತ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಹಿಂಡೆನ್ ಬರ್ಗ್ ವರದಿಯನ್ನು ತಳ್ಳಿಹಾಕಿರುವ ಅದಾನಿ ಗ್ರೂಪ್ಸ್, ಬರೋಬ್ಬರಿ 413 ಪುಟಗಳ ಸುದೀರ್ಘ ಪ್ರತಿಕ್ರಿಯೆಯನ್ನು ನೀಡಿದೆ. ಹಿಂಡನ್ ಬರ್ಗ್ ವರದಿಯು ಅಮೆರಿಕ ಸಂಸ್ಥೆಗೆ ಆರ್ಥಿಕ ಲಾಭ ಮಾಡಿಕೊಡಲು, ಸುಳ್ಳು ಮಾರುಕಟ್ಟೆಯನ್ನು ಸೃಷ್ಟಿಸಿ ಆರ್ಥಿಕ ಲಾಭ ಮಾಡಿಸಲು ಹಿಂಡೆನ್ ಬರ್ಗ್ ಸಂಸ್ಥೆ ಅವಕಾಶ ಮಾಡಿಕೊಟ್ಟಿರುವುದಾಗಿ ಅದಾನಿ ಗ್ರೂಪ್ಸ್ ಪ್ರತಿಕ್ರಿಯೆಯಲ್ಲಿ ತಿರುಗೇಟು ನೀಡಿದೆ.
ನಾವು ಎಲ್ಲಾ 88 ಪ್ರಶ್ನೆಗಳಿಗೂ ಉತ್ತರಿಸಿದ್ದೇವೆ. ಒಂದು ವೇಳೆ ನಾವು ಎಲ್ಲಾ 88 ಪ್ರಶ್ನೆಗಳಿಗೆ ಉತ್ತರಿಸದಿದ್ದರೂ ಹಿಂಡೆನ್ ಬರ್ಗ್ ನಮ್ಮ ಮಾಹಿತಿಯನ್ನು ಬಳಸಿಕೊಂಡಿದೆಯೇ ವಿನಃ ಯಾವುದೇ ಸಂಶೋಧನೆ ನಡೆಸಲಿಲ್ಲ. ಇದರಲ್ಲಿನ 68 ಪ್ರಶ್ನೆಗಳು ನಕಲಿಯಾಗಿದ್ದು, ಅದನ್ನು ತಪ್ಪಾಗಿ ಬಳಸಿಕೊಂಡಿರುವುದಾಗಿ ಅದಾನಿ ಗ್ರೂಪ್ ಸಿಎಫ್ ಒ ತಿಳಿಸಿದ್ದಾರೆ.
ಹಿಂಡೆನ್ ಬರ್ಗ್ ಹೇಳೋದೇನು?
ಹಿಂಡೆನ್ ಬರ್ಗ್ ವರದಿಯ ಬಗ್ಗೆ ಅದಾನಿ ಗ್ರೂಪ್ ಸೋಮವಾರ (ಜನವರಿ 30) ಬಿಡುಗಡೆಗೊಳಿಸಿರುವ 413 ಪುಟಗಳ ಪ್ರತಿಕ್ರಿಯೆಗೆ ಹಿಂಡೆನ್ ಬರ್ಗ್ ಪ್ರತ್ಯುತ್ತರ ನೀಡಿದ್ದು, ರಾಷ್ಟ್ರೀಯತೆಯಿಂದ ವಂಚನೆಯನ್ನು ಸಂದಿಗ್ಧಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
“ಅದಾನಿ ಗ್ರೂಪ್ ತನ್ನ ಜಂಬದ ಪ್ರತಿಕ್ರಿಯೆ ಮೂಲಕ ನಾವು ಎತ್ತಿರುವ ಪ್ರಮುಖ ಆರೋಪವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದೆ. ಅದಾನಿ ಗ್ರೂಪ್ ನಿರೀಕ್ಷೆಯಂತೆ ಪ್ರಮುಖ ವಿಷಯವನ್ನು ಮರೆಮಾಚಲು ರಾಷ್ಟ್ರೀಯವಾದವನ್ನು ಮುಂಚೂಣಿಗೆ ತಂದಿದೆ ಎಂದು ತಿಳಿಸಿದೆ.
ಅದಾನಿ ಗ್ರೂಪ್ ನ ರಾಷ್ಟ್ರೀಯವಾದವನ್ನು ನಾವು ಒಪ್ಪುವುದಿಲ್ಲ. ಭಾರತ ಶಕ್ತಿಶಾಲಿ ಪ್ರಜಾಪ್ರಭುತ್ವ ದೇಶ ಎಂಬುದನ್ನು ನಾವು ಒಪ್ಪುತ್ತೇವೆ. ಭಾರತ ಭವಿಷ್ಯದ ಉತ್ತೇಜನಕಾರಿ ಸೂಪರ್ ಪವರ್ ಎಂಬುದನ್ನು ಅಲ್ಲಗಳೆಯಲಾರೆವು. ಆದರೆ ವ್ಯವಸ್ಥಿತವಾಗಿ ರಾಷ್ಟ್ರದ ಆರ್ಥಿಕ ಸ್ಥಿತಿಯನ್ನು ಬುಡಮೇಲು ಮಾಡುತ್ತಿರುವ ಅದಾನಿ ಗ್ರೂಪ್ ನಿಂದ ಭಾರತದ ಅಭಿವೃದ್ಧಿಯ ಭವಿಷ್ಯವನ್ನು ತಡೆಹಿಡಿಯಲಾಗಿದೆ ಎಂದು ನಾವು ನಂಬುತ್ತೇವೆ ಎಂಬುದಾಗಿ ಹಿಂಡೆನ್ ಬರ್ಗ್ ಹೇಳಿದೆ.