ಗುವಾಹಟಿ: “ಶಾರುಖ್ ಖಾನ್ ಯಾರು? ನನಗೆ ಆತನ ಬಗೆಗಾಗಲಿ ಅಥವಾ ಆತನ ಸಿನಿಮಾ ಪಠಾಣ್ ಬಗೆಗಾಗಲಿ ಗೊತ್ತಿಲ್ಲ” ಎಂದು ಸುದ್ದಿಯಾಗಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರಿಗೆ ಇಂದು ಸ್ವತಃ ಶಾರುಖ್ ಖಾನ್ ಅವರು ಕರೆ ಮಾಡಿ ಮಾತನಾಡಿದ್ದಾರೆ.
ಈ ಬಗ್ಗೆ ಸ್ವತಃ ಹಿಮಂತ್ ಬಿಸ್ವಾ ಶರ್ಮಾ ಅವರೇ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
“ಬಾಲಿವುಡ್ ನಟ ಶಾರುಖ್ ಖಾನ್ ಅವರು ನನಗೆ ಕರೆ ಮಾಡಿದರು. ನಾವು ಇಂದು ಬೆಳಗಿನ ಜಾವ ಎರಡು ಗಂಟೆಗೆ ಮಾತನಾಡಿದೆವು. ಅವರು ತಮ್ಮ ಚಿತ್ರದ ಪ್ರದರ್ಶನದ ಸಂದರ್ಭದಲ್ಲಿ ಗುವಾಹಟಿಯಲ್ಲಿ ನಡೆದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ಇಂತಹ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ: ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಟ್ವೀಟ್ ಮಾಡಿದ್ದಾರೆ.
ಅಸ್ಸಾಂನಲ್ಲಿ ಪಠಾಣ್ ಸಿನಿಮಾ ಪ್ರದರ್ಶನದ ವಿರುದ್ಧ ಕೆಲ ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿ, ಸಿನಿಮಾ ಪೋಸ್ಟರ್ ಗಳಿಗೆ ಬೆಂಕಿ ಹಚ್ಚಿದ ಘಟನೆಯ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ:ರಾಯ್ಪುರದಲ್ಲಿ ಹೀನಾಯ ಸೋಲು: ಐಸಿಸಿ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನ ಕಳೆದುಕೊಂಡ ಕಿವೀಸ್
ಇದಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಸಿಎಂ ಹಿಮಂತ್ ಅವರನ್ನು ಶನಿವಾರ ಪ್ರಶ್ನಿಸಿದಾಗ, ಶಾರುಖ್ ಖಾನ್ ಯಾರು? ನನಗೆ ಆತನ ಬಗೆಗಾಗಲಿ ಅಥವಾ ಆತನ ಸಿನಿಮಾ ಪಠಾಣ್ ಬಗೆಗಾಗಲಿ ಗೊತ್ತಿಲ್ಲ ಎಂದು ಉತ್ತರಿಸಿದ್ದರು. ಕಾನೂನು ಸುವ್ಯವಸ್ಥೆಗೆ ಅಡ್ಡಿಯಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದರು. ಇನ್ನು ಖಾನ್ ಬಾಲಿವುಡ್ ಸ್ಟಾರ್ ಎನ್ನುತ್ತಿದ್ದಂತೆ ಪ್ರತಿಕ್ರಿಯಿಸಿರುವ ಶರ್ಮಾ, ರಾಜ್ಯದ ಜನತೆ ಅಸ್ಸಾಮಿಗಳ ಬಗ್ಗೆ ಯೋಚಿಸ್ಬೇಕು ಹಿಂದಿ ಸಿನಿಮಾಗಳ ಬಗ್ಗೆ ಅಲ್ಲ ಎಂದು ಚಾಟಿ ಬೀಸಿದ್ದರು.