Advertisement

Himachal: ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಾಗ ಅವಘಡ: ವಿದೇಶಿ ಪ್ಯಾರಾಗ್ಲೈಡರ್ ಮೃ*ತ್ಯು

02:10 PM Oct 30, 2024 | Team Udayavani |

ಶಿಮ್ಲಾ: ಹಿಮಾಚಲದ ಬಿರ್-ಬಿಲ್ಲಿಂಗ್‌ನಲ್ಲಿ ನಡೆಯಲಿರುವ 2024 ರ ಪ್ಯಾರಾಗ್ಲೈಡಿಂಗ್ ವಿಶ್ವಕಪ್‌ಗೆ ಐದು ದಿನಗಳ ಮೊದಲು ಹಿಮಾಚಲದ ಕಂಗ್ರಾ ಜಿಲ್ಲೆಯಲ್ಲಿ ಗಗನದಲ್ಲಿ ಪ್ಯಾರಾಗ್ಲೈಡರ್‌ಗಳಿಬ್ಬರು ಡಿಕ್ಕಿ ಹೊಡೆದ ಪರಿಣಾಮ ಬೆಲ್ಜಿಯಂ ಮೂಲದ ಪ್ಯಾರಾಗ್ಲೈಡರ್ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ(ಅ30) ತಿಳಿಸಿದ್ದಾರೆ.

Advertisement

ಫ್ರೀ-ಫ್ಲೈಯಿಂಗ್ ಪ್ಯಾರಾಗ್ಲೈಡರ್ ಆಗಿದ್ದ ಫೆಯರೆಟ್ಸ್, ವಿಶ್ವಕಪ್‌ಗೆ ಮುನ್ನ ಅಭ್ಯಾಸಕ್ಕಾಗಿ ಬಿರ್-ಬಿಲಿಂಗ್‌ಗೆ ಬಂದಿದ್ದರು. ಇಬ್ಬರು ಪ್ಯಾರಾಗ್ಲೈಡರ್‌ಗಳು ಪ್ರತ್ಯೇಕವಾಗಿ ಟೇಕಾಫ್ ಆಗಿದ್ದರೂ, ಮಂಗಳವಾರ ಗಾಳಿಯಲ್ಲಿ ಪರಸ್ಪರ ಢಿಕ್ಕಿ ಹೊಡೆದಿದ್ದಾರೆ. ಫೆಯರೆಟ್ಸ್ ಅವರು ಕೆಳಗಿದ್ದ ಅರಣ್ಯಕ್ಕೆ ಅಪ್ಪಳಿಸಿದರೆ, ಇನ್ನೋರ್ವ ಪ್ಯಾರಾಗ್ಲೈಡರ್ ಮರಗಳಿಗೆ ಸಿಕ್ಕಿಹಾಕಿಕೊಂಡು ಗಾಯಗೊಂಡಿದ್ದು, ಅವರನ್ನು ರಕ್ಷಿಸಲಾಗಿದೆ. ಫೆಯರೆಟ್‌ ಅವರ ಶವವನ್ನು ಇನ್ನಷ್ಟೇ ಅರಣ್ಯದಿಂದ ಮೇಲಕ್ಕೆತ್ತಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 23 ರಂದು ಬಿರ್-ಬಿಲ್ಲಿಂಗ್‌ನಲ್ಲಿ ಏಕವ್ಯಕ್ತಿ ಹಾರಾಟದ ಸಮಯದಲ್ಲಿ ಪೋಲಿಷ್ ಪ್ಯಾರಾಗ್ಲೈಡರ್ ಆಂಡ್ರೆಜ್ ಎಂಬವರು ಸಾವನ್ನಪ್ಪಿದ ಬೆನ್ನಲ್ಲೇ ಮತ್ತೊಂದು ಅವಘಡವಾಗಿದೆ.

ಮನಾಲಿಯ ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಅಂಡ್ ಅಲೈಡ್ ಸ್ಪೋರ್ಟ್ಸ್ (ABVIMAS) ನ ನಿರ್ದೇಶಕ ಅವಿನಾಶ್ ನೇಗಿ, ಸಾಹಸ ಕ್ರೀಡೆಗಳಲ್ಲಿ ವಿಶೇಷವಾಗಿ ಪ್ಯಾರಾಗ್ಲೈಡಿಂಗ್‌ನಲ್ಲಿ ವರ್ಧಿತ ಸುರಕ್ಷತಾ ಕ್ರಮಗಳ ಅಗತ್ಯವನ್ನು ಒತ್ತಿಹೇಳಿದ್ದಾರೆ.

ನವೆಂಬರ್ 2 ರಿಂದ 9 ರವರೆಗೆ ಬಿರ್-ಬಿಲ್ಲಿಂಗ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ 50 ದೇಶಗಳ ಒಟ್ಟು 130 ಪ್ಯಾರಾಗ್ಲೈಡರ್‌ಗಳು ಸ್ಪರ್ಧಿಸುವ ನಿರೀಕ್ಷೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next