ನವದೆಹಲಿ: ಬಜೆಟ್ ಕಲಾಪದಲ್ಲಿ ಹಣಕಾಸು ಮಸೂದೆಗೆ ಸರ್ಕಾರದ ಪರವಾಗಿ ಮತ ಹಾಕದೆ ವಿಪ್ ಉಲ್ಲಂಘಿಸಿದ ಕಾಂಗ್ರೆಸ್ ಪಕ್ಷದ ಆರು ಮಂದಿ ಬಂಡಾಯ ಶಾಸಕರನ್ನು ಹಿಮಾಚಲ್ ಪ್ರದೇಶ ವಿಧಾನಸಭೆ ಸ್ಪೀಕರ್ ಕುಲ್ ದೀಪ್ ಸಿಂಗ್ ಪಠಾನಿಯಾ ಅನರ್ಹಗೊಳಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:Tragedy: ಸೇನೆ ಪರೀಕ್ಷೆಯಲ್ಲಿ ಫೇಲ್… ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವಕ
ಶಾಸಕರಾದ ರಾಜೀಂದರ್ ರಾಣಾ, ಸುಧೀರ್ ಶರ್ಮಾ, ಇಂದರ್ ದತ್ತ ಲಖನ್ ಪಾಲ್, ದೇವಿಂದರ್ ಕುಮಾರ್ ಭುಟೋ, ರವಿ ಠಾಕೂರ್ ಮತ್ತು ಚೇತನ್ಯಾ ಶರ್ಮಾ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ ಎಂದು ವರದಿ ವಿವರಿಸಿದೆ.
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸ್ಪೀಕರ್ ಸಿಂಗ್, ಬುಧವಾರ ಅನರ್ಹಗೊಂಡಿದ್ದ ಶಾಸಕರ ಆದೇಶವನ್ನು ಕಾಯ್ದಿರಿಸಿರುವುದಾಗಿ ಹೇಳಿದರು. ಪಕ್ಷದ ಟಿಕೆಟ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಶಾಸಕರು ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿದ್ದರಿಂದ ಅವರು ಪಕ್ಷಾಂತರ ನಿಷೇಧ ಕಾಯ್ದೆಯಡಿ ತಪ್ಪಿತಸ್ಥರಾಗಿರುವುದಾಗಿ ತಿಳಿಸಿದರು.
ಆರು ಮಂದಿ ಶಾಸಕರನ್ನು ಅನರ್ಹಗೊಳಿಸಲಾಗಿದ್ದು, ತಕ್ಷಣವೇ ಜಾರಿಯಾಗುವಂತೆ ಅವರು ಹಿಮಾಚಲ ಪ್ರದೇಶ ವಿಧಾನಸಭೆ ಸದಸ್ಯತ್ವ ಸ್ಥಾನದಿಂದ ಅನರ್ಹಗೊಂಡಿರುತ್ತಾರೆ ಎಂದು ಸ್ಪೀಕರ್ ತಿಳಿಸಿದರು.
ಮಂಗಳವಾರ ರಾಜ್ಯಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಆರು ಮಂದಿ ಕಾಂಗ್ರೆಸ್ ಶಾಸಕರು ಅಡ್ಡಮತದಾನ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ಜಯ ಸಾಧಿಸಲು ಕಾರಣರಾಗಿದ್ದರು. ಅಲ್ಲದೇ ಬಜೆಟ್ ಅಧಿವೇಶನದಲ್ಲಿ ಆರ್ಥಿಕ ಮಸೂದೆ ಪರ ಮತ ಚಲಾಯಿಸದೇ ದೂರ ಉಳಿದಿದ್ದರು ಎಂದು ವರದಿ ವಿವರಿಸಿದೆ.