Advertisement

ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಪಾದಯಾತ್ರೆ

04:02 PM Feb 08, 2021 | Team Udayavani |

ಕಲಬುರಗಿ: ಮಾದಿಗ ಸಮುದಾಯದ ಬಹುದಿನದ ಬೇಡಿಕೆಯಾದ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ನ್ಯಾ| ಎ.ಜಿ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಸರ್ಕಾರಕ್ಕೆ ಒತ್ತಡ ಹೇರಲು ಅಸ್ಪೃಶ್ಯ ಮಠಾಧೀಶರು ರಾಜ್ಯಾದ್ಯಂತ ಹೋರಾಟಕ್ಕೆ ಧುಮುಕಲು ಸಜ್ಜಾಗಿದ್ದು, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮುಂದಾಳತ್ವ ವಹಿಸಬೇಕೆಂದು ಮಹಾ ಶಿವಶರಣ ಹರಳಯ್ಯ ಗುರು ಪೀಠದ ಪೀಠಾಧ್ಯಕ್ಷ ಬಸವ ಹರಳಯ್ಯ ಸ್ವಾಮೀಜಿ ಆಗ್ರಹಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಗೆ ಸಮುದಾಯದ ಜನರು, ನಾಯಕರು ಎರಡ್ಮೂರು ದಶಕಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. ಅರೆ ಬೆತ್ತಲೆ ಮೆರವಣಿಗೆ, ತಲೆ ಬೋಳಿಸಿಕೊಳ್ಳುವುದು ಸೇರಿದಂತೆ ವಿವಿಧ ರೀತಿಯಲ್ಲಿ ಹೋರಾಟ ಕೈಗೊಂಡರೂ ಯಾವುದೇ ಸರ್ಕಾರಗಳು ಬೇಡಿಕೆ ಈಡೇರಿಸುವ ಕೆಲಸ ಮಾಡಿಲ್ಲ. ಸದಾಶಿವ ಆಯೋಗ ವರದಿ ಕಸದ ಬುಟ್ಟಿಗೆ ಎಸೆಯಲಾಗಿದೆ. ಯಾರಿಗಾಗಿ ಮೀಸಲಾತಿ ವ್ಯಸಸ್ಥೆ ಜಾರಿಗೆ ತರಲಾಗಿತ್ತೋ, ಅದು ಅವರಿಗೆ ದಕ್ಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ರಾಜ್ಯದಲ್ಲಿರುವ ಎಲ್ಲ 11 ಪ್ರಮುಖ ಮಠಾಧೀಶರು ಹೋರಾಟಕ್ಕೆ ಇಳಿಯುತ್ತಿದ್ದೇವೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಮಠಾಧೀಶರ ನೇತೃತ್ವದಲ್ಲೇ ತೀವ್ರತರವಾದ ಪಾದಯಾತ್ರೆ, ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ಚಿತ್ರದುರ್ಗದ ಮಾದರ ಚೆನ್ನಯ್ಯ ಗುರುಪೀಠದಲ್ಲಿ ಎಲ್ಲ ಮಠಾಧೀಶರು ಸೇರಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು. ಕುರುಬ ಸಮಾಜದ ಮೀಸಲಾತಿಗಾಗಿ ಸರ್ಕಾರದಲ್ಲೇ ಇದ್ದುಕೊಂಡು ಸಚಿವ ಕೆ.ಎಸ್‌. ಈಶ್ವರಪ್ಪ ಯಾವ ರೀತಿ ಹೋರಾಟದ ಸಾರಥ್ಯ ವಹಿಸಿಕೊಂಡಿದ್ದಾರೋ, ಅದೇ ರೀತಿ ಗೋವಿಂದ ಕಾರಜೋಳ ಹೋರಾಟದಲ್ಲಿ ತೊಡಗಿಕೊಳ್ಳಬೇಕೆಂದು ಒತ್ತಾಯಿಸಿದರು.

ಸದ್ಯ ಮೀಸಲಾತಿ ಇರುವುದು ನೂರು ಜನರಿಗೂ ಒಂದೇ ರೊಟ್ಟಿ, ಸಾವಿರ ಜನರಿಗೂ ಒಂದೇ ರೊಟ್ಟಿ ಕೊಟ್ಟಂತಾಗಿದೆ. ಇದು ನಮ್ಮ ಅನ್ನದ ತಟ್ಟೆಗೆ ಕೈಹಾಕುವ ಕೆಲಸವಾಗಿದೆ. ಅದರಲ್ಲೂ, ಪರಿಶಿಷ್ಟ ಜಾತಿಯಲ್ಲಿನ ಸ್ಪೃಶ್ಯ ಬಲಾಡ್ಯರೇ ಮೀಸಲಾತಿ ಅನುಭವಿಸುತ್ತಿದ್ದಾರೆ.

ಚಮಗಾರ, ಸಮಗಾರ, ಡೋಹರ, ಛಲವಾದಿ ಸೇರಿ ಸಣ್ಣ-ಸಣ್ಣ ಸಮುದಾಯಗಳು ಮೀಸಲಾತಿ ವಂಚಿತವಾಗಿವೆ. ಇದು ನಿರ್ಣಾಯಕವಾದ ಹೋರಾಟವಾಗಿದ್ದು, ಕ್ರಾಂತಿ ಮಾರ್ಗ ಹಿಡಿಯಲು ನಾವು ಸಿದ್ಧರಾಗಿದ್ದೇವೆ. ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿ ಬಹಿರಂಗ ಪಡಿಸಿ, ಅದನ್ನು ಸದನದಲ್ಲಿ ಮಂಡಿಸಬೇಕು. ಜತೆಗೆ ಕೇಂದ್ರಕ್ಕೆ ವರದಿ ರವಾನಿಸುವ ಪೋಸ್ಟ್‌ ಮ್ಯಾನ್‌ ಕೆಲಸ ಮಾಡಿದರೆ ಸಾಕು ಎಂದು ಒತ್ತಾಯಿಸಿದರು. ಚಿತ್ರದುರ್ಗ ಕೋಡಿಹಳ್ಳಿಯ ಆದಿ ಜಾಂಬವ ಮಠದ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ನ್ಯಾ| ಸದಾಶಿವ ಆಯೋಗದ ವರದಿ ಜಾರಿ ಮಾಡದೇ ಇರುವುದು ಮಾದಿಗ ಸಮುದಾಯದ ಬಗ್ಗೆ ಸರ್ಕಾರ ಹೊಂದಿರುವ ಅಸಡ್ಡೆ ಧೋರಣೆ ನಿರೂಪಿಸುತ್ತಿದೆ.

Advertisement

ಹೀಗಾಗಿ ಮಠಾಧಿಧೀಶರು ಸಮುದಾಯ ಜೊತೆಗಿರಿಸಿಕೊಂಡು ಹೋರಾಟಕ್ಕೆ ಇಳಿಯಲಾಗುವುದು. ಶೋಷಿತ ಮತ್ತು ವಂಚಿತ ಸಮುದಾಯದ ಜನರಲ್ಲಿ ಜಾಗೃತಿ,
ಸಂಘಟನೆಗಾಗಿ ಎಲ್ಲ ಭಾಗಗಳಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು. ಕಲಘಟಗಿಯ ಡೋಹರ ಕಕ್ಕಯ್ಯ ಮಠದ ಗುರು ಮಾತಾನಂದ ತಾಯಿ, ಹಂಪಿಯ ಮಾತಂಗ ಆಶ್ರಮದ ಪೂರ್ಣಾನಂದ ಸ್ವಾಮೀಜಿ, ಇಟಗಿಯ ಶಿವಶರಣಪ್ಪ ಗದಗಪ್ಪ ಅಜ್ಜ, ಮೀಸಲಾತಿ ಹೋರಾಟದ ಸಮನ್ವಯ ಸಮಿತಿ ಸಂಚಾಲಕ ಮುತ್ತಣ್ಣ ಬೆಣ್ಣೂರ, ಮುಖಂಡರಾದ ಶಾಮ ನಾಟೀಕಾರ, ಪರಮೇಶ್ವರ ಖಾನಾಪುರ, ರಾಜು ವಾಡೇಕರ್‌, ದಶರಥ ಕಲಗುರ್ತಿ, ಚಂದ್ರಿಕಾ ಪರಮೇಶ್ವರ, ಮಲ್ಲಿಕಾರ್ಜುನ ಮತ್ತಿತರರು ಇದ್ದರು.

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾರ್ಚ್‌ ತಿಂಗಳಲ್ಲಿ ಪಾದಯಾತ್ರೆ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ವಿಭಾಗ ಮಟ್ಟದಲ್ಲಿ ಪೂರ್ವ ಸಿದ್ಧತಾ ಸಭೆಗಳನ್ನು ಆಯೋಜಿಸಲಾಗುತ್ತಿದೆ. ತಾಲೂಕು, ಜಿಲ್ಲಾ ಮಟ್ಟದಿಂದ ಹಿಡಿದು ಎಲ್ಲ ಹಂತದಲ್ಲಿ ಅಸ್ಪೃಶ್ಯ ಸಮುದಾಯದ ಜನರನ್ನು ಹೋರಾಟಕ್ಕೆ ಅಣಿಗೊಳಿಸಲಾಗುವುದು.
ಷಡಕ್ಷರಿ ಮುನಿ ದೇಶಿಕೇಂದ್ರ
ಸ್ವಾಮೀಜಿ, ಆದಿ ಜಾಂಬವ ಮಠ

ನ್ಯಾಯಯುತವಾದ ಮೀಸಲಾತಿಗಾಗಿ ಸಣ್ಣ-ಸಣ್ಣ ಸಂಘಟನೆಗಳಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೆ, ಈಗ ಎಲ್ಲ ಸಂಘಟನೆಗಳು ಮತ್ತು
ಪ್ರಮುಖರನ್ನು ಒಟ್ಟುಗೂಡಿಸಿ ಹೋರಾಟ ನಡೆಸಲಾಗುವುದು. ಈ ಬಾರಿಯ ಮೀಸಲಾತಿ ಹೋರಾಟ ಬರೀ ಮಾತಾಗಿ ಉಳಿಯುವುದಿಲ್ಲ. ಅದನ್ನು ಪಡೆದು
ಸಾಧಿಸಿಯೇ ತೀರುತ್ತೇವೆ.
ಗುರು ಮಾತಾನಂದ ತಾಯಿ,
ಡೋಹರ ಕಕ್ಕಯ್ಯ ಮಠ

ನಮ್ಮೊಳಗೆ ಇರುವಂತಹ
ಬಲಾಡ್ಯರು, ಸ್ಪೃಶ್ಯರೇ ಮೀಸಲಾತಿ ಅನುಭವಿಸುತ್ತಿದ್ದಾರೆ. ಹೀಗಾಗಿ ತಳ ಸಮುದಾಯದ ಜನರಲ್ಲಿ ಎಷ್ಟು ಜನ ಐಎಎಸ್‌, ಎಪಿಎಸ್‌ಗಳು ಆಗಿದ್ದಾರೆ ಎನ್ನುವ ಲೆಕ್ಕ ಹಾಕಬೇಕಿದೆ. ಒಳ ಮೀಸಲಾತಿ ನೀಡಲು ತಾಕತ್ತಿಲ್ಲದಿದ್ದರೇ ಸದಾಶಿವ ಆಯೋಗ ಯಾಕೆ ರಚಿಸಬೇಕಿತ್ತು?
ಬಸವ ಹರಳಯ್ಯ ಸ್ವಾಮೀಜಿ,
ಶರಣ ಹರಳಯ್ಯ ಗುರು ಪೀಠ

Advertisement

Udayavani is now on Telegram. Click here to join our channel and stay updated with the latest news.

Next