ದೇವದುರ್ಗ: ವಿತರಣೆ ಕಾಲುವೆ 15ಎ, 0 ಮಿಲೋಮಿಟರ್‌ದಿಂದ 7.5 ಕಿ.ಮೀ. ಮತ್ತು ಲ್ಯಾಟರಲ್ 1,2,3,4 ಹಾಗೂ 5 ಹಾಗೂ ಸಬ್ ಲ್ಯಾಟರಲ್ 2, ನಾರಾಯಣಪುರ ಬಲದಂಡೆ ಕಾಮಗಾರಿ ವಿಳಂಬ ಕುರಿತು ಕೊತ್ತದೊಡ್ಡಿ ಗ್ರಾಮದಿಂದ ಕೃ.ಭಾ.ಜ.ನಿ.ನಿ ಕಾಲುವೆ ವಿಭಾಗ ಸಂ.6 ಚಿಕ್ಕಹೊನ್ನಕುಣಿ ಕಚೇರಿವರೆಗೆ ಜೂ.1ರಂದು ರೈತರೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಬುಡ್ಡನಗೌಡ ಪಾಟೀಲ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಆರೇಳು ವರ್ಷಗಳು ಗತಿಸಿದರೂ ಕಾಮಗಾರ ಪ್ರಾರಂಭ ಮಾಡದೇ ವಿಳಂಬ ಮಾಡುತ್ತಿರುವ ಹಿನ್ನೆಲೆ ಕೆಲ ಹಳ್ಳಿಗಳ ಜಮೀನುಗಳು ನೀರಾವರಿ ವಂಚಿತಗೊಂಡಿವೆ. ನಿಲ್ಲಿಸಿದ ಕೆಲಸ ಪ್ರಾರಂಭಿಸಿ ನೀರು ಕೊಡುವಂತೆ ಹಲವು ರೈತರು ಕಚೇರಿಗೆ ಅಲೆದು ಬೇಸತ್ತಿದ್ದಾರೆ. ಅಧಿ ಕಾರಿಗಳಿಂದ ಬೇಜವಾಬ್ದಾರಿ ಉತ್ತರ ನೀಡುತ್ತಲೇ ಕಾಲಹರಣ ಮಾಡಿದ್ದಾರೆ ಎಂದು ದೂರಿದರು.
ಕಚೇರಿ ಮುಂದೆ ಧರಣಿ ಕುಳಿತ ವೇಳೆ ಸಂಬಂಧಪಟ್ಟಂತ ಅಧಿ ಕಾರಿಗಳು ಸ್ಥಳಕ್ಕೆ ಬಂದು ಕಾಮಗಾರಿ ಆರಂಭಿಸುವ ಕುರಿತು ಲಿಖೀತ ರೂಪದಲ್ಲಿ ಬರೆದು ಕೊಟ್ಟಾಗಲೇ ಧರಣಿ ಕೈಬಿಡುತ್ತೇವೆ. ಒಂದು ವೇಳೆ ಬಾರದೇ ಇದ್ದರೇ ಧರಣಿ ಮುಂದುವರಿಸಲಾಗುವುದು ಎಂದರು.
ನೀರು ವಂಚಿತ ಕೊತ್ತದೊಡ್ಡಿ, ತೇಗಿಹಾಳ, ಮಲ್ಕಂದಿನ್ನಿ, ಹೊನ್ನಕಾಟಮಳಿ, ಕರಡೋಣ, ಹೇಮನೂರು, ಮಾನಸಗಲ್ ಸೇರಿದಂತೆ ಇತರೆ ಗ್ರಾಮದ ನೂರಾರು ರೈತರು ಪಾದಯಾತ್ರೆಗೆ ಸಹಾಕರಿಸಬೇಕು ಎಂದು ಮನವಿ ಮಾಡಿದರು.
15ಎ ವ್ಯಾಪ್ತಿಯ ಲ್ಯಾಟಿರಲ್ ಕಾಲುವೆ ಕಾಮಗಾರಿ ಅರೆಬರೆ ಕೆಲಸ ಮಾಡಿ ಕೈಬಿಡಲಾಗಿದೆ. ಕಾಲುವೆ ಒಳಗೆ ಜಾಲಿಗಿಡಗಳು ಬೆಳೆದು ಅವ್ಯವಸ್ಥೆ ಆಗರವಾಗಿದೆ. ಈ ಭಾಗದ ನೂರಾರು ರೈತರು ಬೆಳೆಯುವ ಬೆಳೆಗೆ ನೀರಿನ ಅಭಾವ ಸಮಸ್ಯೆ ಎದುರಿಸುತ್ತಿದ್ದಾರೆ. ನೂರಾರು ಹೆಕ್ಟೇರ್ ಪ್ರದೇಶದ ಜಮೀನಿಗಳಿಗೆ ನೀರು ಇಲ್ಲದಂತಾಗಿದೆ. ಕಾಮಗಾರಿ ಆರಂಭಿಸುವಂತೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರೆಮ್ಮ ಗೋಪಾಲಕೃಷ್ಣ, ಶರಣಪ್ಪ ಬಳೆ, ಶಾಲಂ ಉದ್ದಾರ, ಶೇಖ ಮುನ್ನಾಬೈ, ವೆಂಕಟೇಶ ಗೌಡ, ರಮೇಶ ಸೇರಿದಂತೆ ಇತರರು ಇದ್ದರು.