ಹರಪನಹಳ್ಳಿ: ರೈತರಿಗೆ ಮಾರಕವಾಗಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕೆಂದು ಒತ್ತಾಯಿಸಿ ಹಾಗೂ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದರು.
ಪಟ್ಟಣದ ಎಪಿಎಂಸಿ ಆವರಣದಿಂದ ಕಾಂಗ್ರೆಸ್ ಮಹಿಳಾ ಘಟಕ, ಯುವ ಕಾಂಗ್ರೆಸ್ ಹಾಗೂ ಎನ್‌ಎಸ್ ಯುಐ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಕೊಟ್ಟೂರು ರಸ್ತೆಯ ಮೂಲಕ ಹಿರೇಕೆರೆ ವೃತ್ತದಿಂದ ಹೊಸಪೇಟೆ ರಸ್ತೆ ಮಾರ್ಗವಾಗಿ ಪಾದಯಾತ್ರೆ ಮೂಲಕ ಮಿನಿವಿಧಾನಸೌಧಕ್ಕೆ ಆಗಮಿಸಿ ಬಹಿರಂಗ ಸಭೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೆಹಲಿ ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಮೌನಾಚರಣೆ ಸಲ್ಲಿಸಲಾಯಿತು.
ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ಕೃಷಿ ಕಾಯ್ದೆಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರ ಅನ್ನದಾತರಿಗೆ ಮರಣ ಶಾಸನ ಬರೆದಿದೆ. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸುಗ್ರೀವಾಜ್ಞೆ ಮೇಲ್ನೋಟಕ್ಕೆ ರೈತರಿಗಾಗಿಯೆ ತಿದ್ದುಪಡಿ ಮಾಡಿದಂತಿದೆ. ಆದರೆ ಭವಿಷ್ಯದ ದೃಷ್ಟಿಯಿಂದ ನೋಡಿದರೆ ಬಹುರಾಷ್ಟ್ರೀಯ ಕಂಪನಿಗಳ ಹಿತ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದರು. ರೈತರಿಗೆ ಮಾರಕವಾಗಿರುವ ಕಾಯ್ದೆ ತಿದ್ದುಪಡಿ ಕೈಬಿಡಬೇಕು. ಮೂರು ಕರಾಳ ಕೃಷಿ ಕಾನೂನುಗಳನ್ನು ಹಿಂಪಡೆದು ರಾಷ್ಟ್ರೀಯ ಭದ್ರತೆಯ ಉಲ್ಲಂಘನೆಯ ವಿರುದ್ಧ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು. ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಕೆ.ಪ್ರಕಾಶ್, ತಾ.ಪಂ ಸದಸ್ಯರಾದ ಚಿಗಟೇರಿ ಬಸವನಗೌಡ, ಹುಲಿಕಟ್ಟಿ ಚಂದ್ರಪ್ಪ, ಓ.ರಾಮಪ್ಪ, ಬಾಗಳಿ ಗ್ರಾ.ಪಂ ಅಧ್ಯಕ್ಷ ಕೋಡಿಹಳ್ಳಿ ಹನುಮಂತಪ್ಪ, ಕಬಡಗೆರೆ ಗ್ರಾ.ಪಂ ಅಧ್ಯಕ್ಷೆ ಅನುಷ್ಕಾ ಮಂಜುನಾಥ, ಕೆ.ಕಲ್ಲಹಳ್ಳಿ ಗ್ರಾ.ಪಂ ಅಧ್ಯಕ್ಷ ತಿಮ್ಮಪ್ಪ, ಅಡವಿಹಳ್ಳಿ ಗ್ರಾ.ಪಂ ಅಧ್ಯಕ್ಷ ಪಕ್ಕೀರಪ್ಪ, ನಿಚ್ಚವ್ವನಹಳ್ಳಿ ಗ್ರಾ.ಪಂ ಉಪಾಧ್ಯಕ್ಷ ಕೆ.ಆನಂದ್, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್, ರವಿ ಯುವ ಶಕ್ತಿ ಪಡೆ ಅಧ್ಯಕ್ಷ ಉದಯಶಂಕರ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಾಸ್ವಿಹಳ್ಳಿ ನಾಗರಾಜ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಜಗದೀಶ್, ಮುಖಂಡರಾದ ಕೆ. ಕಲ್ಲಹಳ್ಳಿ ಗೋಣ್ಯೆಪ್ಪ, ಮಟ್ಟೇರ ಮುತ್ತಣ್ಣ, ಪಿ. ಜಯಲಕ್ಷ್ಮೀ, ಕುಂಚೂರು ಇಬ್ರಾಹಿಂ, ಕಾನಹಳ್ಳಿ ರುದ್ರಪ್ಪ, ಎಂ.ವಿ. ಕೃಷ್ಣಕಾಂತ್, ರಾಯದುರ್ಗ ವಾಗೀಶ್, ಭಾಗ್ಯಮ್ಮ ಮಲ್ಲಿಕಾರ್ಜುನ್, ಭಂಗಿ ಮಲ್ಲಿಕಾರ್ಜುನ, ಶೃಂಗಾರದೋಟ ಬಸವರಾಜ್, ರಿಯಾಜ್, ಪೂಜಾರ ರಾಜು, ಕಂಚಿಕೇರಿ ಕೆಂಚಪ್ಪ, ರತ್ನಮ್ಮ ಸೋಮಪ್ಪ, ಕೂಂಚೂರು ಸಂಜೀವಪ್ಪ, ಕವಿತಾ ಸುರೇಶ್ ಇದ್ದರು.