ಉಡುಪಿ: ನಗರದ ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ತಾರಕ್ಕೇರಿದ ಹಿನ್ನೆಲೆಯಲ್ಲಿ ಕಾಲೇಜಿಗೆ ಅನಿರ್ಧಿಷ್ಟಾವಧಿ ರಜೆ ಘೋಷಿಸಲಾಗಿದೆ.
ಮಂಗಳವಾರ ಬೆಳಗ್ಗೆ ಎರಡೂ ಗುಂಪಿನ ನಡುವೆ ವಿವಾದ ಹೆಚ್ಚಾದ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ರಜೆ ಘೋಷಣೆ ಮಾಡಿದೆ.
ಸಭೆಯ ಬಳಿಕ ಎರಡೂ ಗುಂಪಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲ ದೇವದಾಸ್ ನಾಯಕ್, “ ಸದ್ಯಕ್ಕೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ವಿಚಾರ ಕೋರ್ಟ್ ನಲ್ಲಿರುವ ಕಾರಣ ನ್ಯಾಯಾಲಯ ತೀರ್ಪು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಹೀಗಾಗಿ ಕಾಲೇಜು ಸೂಚನೆ ನೀಡುವವರೆಗೂ ವಿದ್ಯಾರ್ಥಿಗಳು ಕಾಲೇಜಿಗೆ ಬರಬಾರದು” ಎಂದರು.
ಇದನ್ನೂ ಓದಿ:ಉಡುಪಿ ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ಗೆ ಪ್ರತಿಯಾಗಿ ಕೇಸರಿ ಪೇಟ: ಉದ್ವಿಗ್ನ ವಾತಾವರಣ
ನಮ್ಮ ಕಾಲೇಜು ಆರೋಗ್ಯಕರ ಕ್ಯಾಂಪಸ್ ಹೊಂದಿದೆ. ಇಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಇಲ್ಲಿಗೆ ಎಲ್ಲವೂ ಅಂತ್ಯವಾಗಲಿದೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಹಿಜಾಬ್- ಬುರ್ಖಾಗೆ ವಿರೋಧವಾಗಿ ಹಲವು ವಿದ್ಯಾರ್ಥಿಗಳು ಕೇಸರಿ ಶಾಲು ಮತ್ತು ಪೇಟ ಧರಿಸಿ ಬಂದಿದ್ದರು. ಕಾಲೇಜು ಕ್ಯಾಂಪಸ್ ಒಳಗಿದ್ದ ವಿದ್ಯಾರ್ಥಿಗಳನ್ನು ಕ್ಯಾಂಪಸ್ ನಿಂದ ಹೊರಕ್ಕೆ ಕಳುಹಿಸಲಾಗಿದೆ. ವಿದ್ಯಾರ್ಥಿಗಳು ಕೂಡಲೇ ಮನೆಗೆ ಹೋಗುವಂತೆ ಕಾಲೇಜು ಆಡಳಿತ ಮಂಡಳಿ ಸೂಚಿಸಿದೆ.