ಹುಬ್ಬಳ್ಳಿ: ಮುಸ್ಲಿಂ ಧರ್ಮದ ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯ. ಹೀಗಾಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ಕೊಡಬೇಕು. ರಾಜ್ಯ ಸರಕಾರ ಹೊರಡಿಸಿರುವ ಕಡ್ಡಾಯ ಸಮವಸ್ತ್ರ ಸಂಹಿತೆ ಆದೇಶ
ಖಂಡಿಸಿ ಸೋಮವಾರ ನಗರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಎಐಎಂಐಎಂ ಹಾಗೂ ನ್ಯಾಷನಲ್ ಯುನಿಟ್ ಮತ್ತು ವೆಲ್‌ಫೇರ್ ಎಜುಕೇಶನ್ ಟ್ರಸ್ಟ್ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು. ಆದರೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶಿಸಲು ರಾಜಕೀಯ ಕಾರಣದಿಂದಾಗಿ ಅವಕಾಶ ನಿರಾಕರಿಸಲಾಗುತ್ತಿದೆ. ಸರಕಾರದ ಈ ನಡೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಜಾಬ್ ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತದೆ. ಹೀಗಾಗಿ ಹಿಜಾಬ್ ಧರಿಸಿಯೇ ನಮ್ಮ ವಿದ್ಯಾರ್ಥಿನಿಯರು ಶಾಲಾ-ಕಾಲೇಜಿಗೆ ಹೋಗುತ್ತಾರೆ. ಮುಂದೆಯೂ ಅದನ್ನು ಪಾಲಿಸುತ್ತಾರೆ. ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು.
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುತ್ತಿರುವುದು ಇತ್ತೀಚೆಗಲ್ಲ. ಆದರೆ ಉದ್ದೇಶಪೂರ್ವಕವಾಗಿ ವಿದ್ಯಾರ್ಥಿನಿಯರು ಧರಿಸುವ ಉಡುಪಿನ ಬಗ್ಗೆ ಚಕಾರ ಎತ್ತಿರುವುದು ಮಾನವ ಸಮಾಜ ತಲೆ ತಗ್ಗಿಸುವ ಕೆಲಸವಾಗಿದೆ. ಭಾರತ ಬಿಡಲ್ಲ, ಪಾಕಿಸ್ತಾನಕ್ಕೆ ಹೋಗಲ್ಲ ಎಂಬ ಘೋಷಣೆ ಕೂಗಿದರು. ಸರಕಾರ ಹಿಜಾಬ್ ಸಮಸ್ಯೆ ಬಗೆಹರಿಸಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರವೇಶಿಸಲು ಅನುಮತಿ ನೀಡಬೇಕು. ಇಲ್ಲವಾದರೆ ಹುಬ್ಬಳ್ಳಿಯಿಂದ ಉಡುಪಿಗೆ ಬಂದು ಕಾಲೇಜಿನ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.