Advertisement

ಖಾದರ್‌-ವಿದ್ಯಾರ್ಥಿನಿ ಫೋನ್‌ ಸಂಭಾಷಣೆಯಲ್ಲೇನಿತ್ತು? ರಾಂಗ್‌ ನಂಬರ್‌ ಅಂದಿದ್ದೇಕೆ?

12:24 PM Jun 01, 2022 | Team Udayavani |

ಮಂಗಳೂರು: ಇಲ್ಲಿನ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿನಿಯರ ಶಿರವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರು ತಮ್ಮ ವಿರುದ್ಧ ನೀಡಿದ್ದ ಹೇಳಿಕೆ ಸುಳ್ಳಾಗಿದ್ದು, ಅವರ ಹೇಳಿಕೆ ನೋಡಿ ಅಚ್ಚರಿ ಹಾಗೂ ಮನಸ್ಸಿಗೆ ನೋವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಈ ಸುಳ್ಳು ಹೇಳಿಕೆಗಳು ದುರುದ್ದೇಶದಿಂದ ಕೂಡಿದ್ದು, ರಾಜಕೀಯ ಪ್ರೇರಿತವಾಗಿವೆ. ವಿದ್ಯಾರ್ಥಿನಿಯರ ಹಿಂದೆ ಕಾಣದ ಕೈಗಳ ಕುಮ್ಮಕ್ಕು ಎದ್ದು ಕಾಣುತ್ತಿದೆ ಎಂದು ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.

ಹಿಜಾಬ್‌ ಧರಿಸುವ ವಿಚಾರದಲ್ಲಿ ವಿದ್ಯಾರ್ಥಿನಿ ತಮ್ಮ ಜೊತೆ ಫೋನ್‌ ಮೂಲಕ ಮಾತಾಡಿದ್ದೇನು? ಅವರಿಗೆ ತಾನು ಕೊಟ್ಟಿದ್ದ ಸೂಚನೆಯೇನು? ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತಾವು ಮಾಡಿದ್ದ ಪ್ರಯತ್ನವೇನು? ಎಂಬ ಬಗ್ಗೆ ಯು.ಟಿ.ಖಾದರ್‌ ಸ್ಪಷ್ಟನೆ ನೀಡಿದ್ದು, ಕಡೆಗೆ ವಿದ್ಯಾರ್ಥಿನಿ ಶಾಸಕರ ಕರೆ ಸ್ವೀಕರಿಸಿ ‘ರಾಂಗ್‌ ನಂಬರ್‌’ ಎಂದು ಫೋನ್‌ ಕರೆಯನ್ನು ಕಟ್‌ ಮಾಡಿದ್ದಾರಂತೆ. ಯು.ಟಿ.ಖಾದರ್‌ ಅವರ ಸ್ಪಷ್ಟನೆಯ ಪೂರ್ಣ ವಿವರ ಈ ಕೆಳಗಿನಂತಿದೆ.

ಹಿಜಾಬ್‌ ವಿದ್ಯಾರ್ಥಿನಿ ಆರೋಪಕ್ಕೆ ಯು.ಟಿ.ಖಾದರ್ ಸ್ಪಷ್ಟನೆ

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಶಿರವಸ್ತ್ರದ ವಿವಾದಕ್ಕೆ ಸಂಬಂಧಿಸಿದಂತೆ ದಿನಾಂಕ 18-05-2022ರಂದು ವಿದ್ಯಾರ್ಥಿನಿಯರೋರ್ವರು ನನಗೆ ಕರೆ ಮಾಡಿ, ‘ಕಳೆದ ಬಾರಿ ರಾಜ್ಯಾದ್ಯಂತ ಹಿಜಾಬ್ ವಿವಾದ ಇದ್ದಾಗಲೂ ಕೂಡಾ ನಮ್ಮ ಕಾಲೇಜಿನ ಕ್ಯಾಲೆಂಡರಿನಲ್ಲಿ ವಸ್ತ್ರದೊಂದಿಗೆ ಹಿಜಾಬ್ ಹಾಕಲು ನಿಯಮ ಇದ್ದ ಕಾರಣ ನಮಗೆ ಯಾರಿಗೂ ತೊಂದರೆಯಾಗಿರಲಿಲ್ಲ. ಇದೀಗ ಈ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹಠಾತ್ತನೆ ಹಿಜಾಬ್ ಹಾಕಲು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಉಪಕುಲಪತಿಗಳ ಬಳಿ ವಿಚಾರಿಸಿದಾಗ ಸಿಂಡಿಕೇಟ್ ಸಮಿತಿಯ ನಿರ್ಧಾರದಂತೆ ಈ ಕ್ರಮ ಕೈಗೊಳ್ಳಲಾಗಿದೆ, ನೀವು ಜಿಲ್ಲಾಧಿಕಾರಿಗಳ ಬಳಿಗೆ ಹೋಗಿ, ಈ ನಿಯಮ ಪಿ.ಯು.ಕಾಲೇಜುಗಳಿಗೆ ಮಾತ್ರ ಅನ್ವಯ, ಡಿಗ್ರಿ ಕಾಲೇಜಿಗೆ ಅನ್ವಯಿಸುವುದಿಲ್ಲ ಎಂಬ ಆದೇಶ ನೀಡಿದರೆ ನಿಮಗೆ ನಾನು ಸಹಾಯ ಮಾಡಬಹುದು ಎಂದು ತಿಳಿಸಿರುತ್ತಾರೆ. ಹಾಗಾಗಿ ಈಗ ನಾವು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದೇವೆ. ತಾವು ಬಂದರೆ ಒಳ್ಳೆಯದಿತ್ತು’ ಎಂಬುದಾಗಿ ಕೇಳಿಕೊಂಡಿರುತ್ತಾರೆ. ಆ ಸಂದರ್ಭದಲ್ಲಿ ನಾನು ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಕಾರಣ ‘ನನಗೆ ಈಗ ಬರಲು ಅನಾನುಕೂಲ ಆಗಬಹುದು, ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಅವರ ಯಾವ ಸಮಯದಲ್ಲಿ ಸಿಗುತ್ತಾರೆಂಬುದನ್ನು ಕೇಳಿ ನಿಮಗೆ ತಿಳಿಸುತ್ತೇನೆ’ ಎಂದು ಹೇಳಿದೆ. ನಂತರ ತಕ್ಷಣ ನಾನು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ ಜಿಲ್ಲಾಧಿಕಾರಿಗಳು ಈಗ ಕಚೇರಿಯಲ್ಲಿ ಇಲ್ಲ, ಸಂಜೆ 4 ಗಂಟೆಗೆ ಬರಲಿ ಎಂದು ನನಗೆ ತಿಳಿಸಿದ್ದರು. ತಕ್ಷಣ ನಾನು ನನಗೆ ಕರೆ ಮಾಡಿದ ವಿದ್ಯಾರ್ಥಿನಿಗೆ ಮರು ಕರೆ ಮಾಡಿ ‘ಜಿಲ್ಲಾಧಿಕಾರಿಗೆ ಮಾತನಾಡಿ ಘಟನೆಯ ಬಗ್ಗೆ ವಿವರಿಸಿದ್ದೇನೆ, ಅವರು ಕಚೇರಿಯಲ್ಲಿ ಇಲ್ಲದ ಕಾರಣಕ್ಕಾಗಿ ಸಂಜೆ ನಾಲ್ಕು ಗಂಟೆಗೆ ಬರಲು ತಿಳಿಸಿರುತ್ತಾರೆ. ಹೋಗಿ ಮಾತನಾಡಿ’ ಎಂದು ವಿದ್ಯಾರ್ಥಿನಿಗೆ ಹೇಳಿದೆ. ಆದರೆ ಸ್ವಲ್ಪ ಸಮಯದ ನಂತರ ನನಗೆ ಪುನಃ ಕರೆ ಮಾಡಿದ ಜಿಲ್ಲಾಧಿಕಾರಿಗಳು ಪ್ರಾಕೃತಿಕ ವಿಕೋಪದ ಸಭೆಯಲ್ಲಿರುವುದರಿಂದ ನನಗೆ 4 ಗಂಟೆಗೆ ಸಿಗಲು ಅಸಾಧ್ಯವಾಗಬಹುದು, ಆದುದರಿಂದ ನಾಳೆ ಬೆಳಗ್ಗೆ 10 ಗಂಟೆಗೆ ಕೊಟ್ಟಾರ ಜಿಲ್ಲಾ ಪಂಚಾಯತ್‌ ಕಚೇರಿಗೆ ಬರಲಿ ಎಂದು ತಿಳಿಸಿದಾಗ, ನಾನು ಪುನಃ ವಿದ್ಯಾರ್ಥಿನಿಗೆ ಕರೆ ಮಾಡಿ ‘ಜಿಲ್ಲಾಧಿಕಾರಿಗಳು ನಾಳೆ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ಕಚೇರಿಗೆ ಬರಲು ಹೇಳಿದ್ದಾರೆ. ನನಗೆ ಆ ಸಮಯದಲ್ಲಿ ಪೂರ್ವ ನಿಗದಿಯಾದ ಕಾರ್ಯಕ್ರಮಗಳು ಇರುವುದರಿಂದ ಬರಲು ಅಸಾಧ್ಯವಾಗುತ್ತಿದೆ . ನಾನು ಮಾಜಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್‌ರವರನ್ನು ನಿಮ್ಮೊಂದಿಗೆ ಕಳುಹಿಸುತ್ತೇನೆ’ ಎಂದು ಹೇಳಿ ವಿದ್ಯಾರ್ಥಿನಿಗೆ ಶಾಹುಲ್‌ರವರ ನಂಬರನ್ನು ನೀಡಿದ್ದೆ.

Advertisement

ಇದನ್ನೂ ಓದಿ:ಪ್ರೀತಿಸಲು ನಿರಾಕರಿಸಿದ ವಿದ್ಯಾರ್ಥಿನಿಗೆ 14 ಬಾರಿ ಇರಿದ ಯುವಕ, ಆರೋಪಿ ಶವವಾಗಿ ಪತ್ತೆ!

ಮರುದಿನ ಶಾಹುಲ್ ಹಮೀದ್‌ರವರು ವಿದ್ಯಾರ್ಥಿಗಳೊಂದಿಗೆ ತೆರಳಿ ಜಿಲ್ಲಾಧಿಕಾರಿಗಳ ಬಳಿ ಘಟನೆಯ ಬಗ್ಗೆ ವಿವರಿಸುತ್ತಾರೆ. ಅಂತೆಯೇ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸುತ್ತೇನೆಂಬ ಭರವಸೆಯನ್ನು ನೀಡಿದ್ದಾರೆ. ಈ ಮಧ್ಯೆ ನಾನು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಿಗೆ ಕರೆ ಮಾಡಿ ಕಾಲೇಜಿನ ಕ್ಯಾಲೆಂಡರ್ ನಲ್ಲಿದ್ದಂತೆ ವಿದ್ಯಾರ್ಥಿಗಳು ವಸ್ತ್ರದ ಜತೆಯಲ್ಲಿ ಶಿರವಸ್ತ್ರ ಹಾಕಿಕೊಂಡು ಬರುವುದಕ್ಕೆ ಯಾಕೆ ತಡೆಯೊಡ್ಡಿದ್ದೀರಿ? ಎಂದು ಪ್ರಶ್ನಿಸಿದಾಗ, ಅವರು ಇದು ಯುನಿವರ್ಸಿಟಿಯಿಂದ ಬಂದಿರುವ ಆದೇಶ, ಅದನ್ನು ನಾವು ಅನುಷ್ಠಾನಗೊಳಿಸಿದ್ದೇವೆ ಅಷ್ಟೆ, ನಾವು ಏನು ಮಾಡಲೂ ಸಾಧ್ಯವಿಲ್ಲ ಎಂದು ಹೇಳಿದ್ದರು.

ಇದಾದ ನಂತರ ನಾನು ವಿಶ್ವವಿದ್ಯಾನಿಲಯದ ಉಪಕುಲಪತಿಗಳಿಗೂ ಕರೆ ಮಾಡಿ ಮೇಲೆ ತಿಳಿಸಿದ ಎಲ್ಲಾ ವಿಚಾರಗಳನ್ನು ವಿವರಿಸಿದಾಗ, ಉಪ ಕುಲಪತಿಗಳು, ಸಿಂಡಿಕೇಟ್ ಸಮಿತಿಯ ಬಹುಮತದ ತೀರ್ಮಾನದ ಮೇಲೆ ಈ ನಿರ್ಧಾರ ಮಾಡಲಾಗಿದೆ ಎಂಬ ಉತ್ತರ ನೀಡಿದರು. ಸಿಂಡಿಕೇಟ್ ಸಮಿತಿಯ ನಿರ್ಧಾರವಾದರೆ ಮತ್ಯಾಕೆ ತಾವು ವಿದ್ಯಾರ್ಥಿನಿಯರನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಾಡಿಸುತ್ತೀರಿ? ಜಿಲ್ಲಾಧಿಕಾರಿಗಳ ಆದೇಶ ಇದ್ದರೆ ಸಮಸ್ಯೆ ಬಗೆಹರಿಯುತ್ತಾ? ಎಂದು ನಾನು ಕೇಳಿದಾಗ ‘ಇಲ್ಲ’ ಎಂಬ ಉತ್ತರ ಉಪಕುಲಪತಿಗಳಿಂದ ಸಿಕ್ಕಿತ್ತು.

ಈ ಮಧ್ಯೆ ಜಿಲ್ಲಾಧಿಕಾರಿಗಳ ಭೇಟಿಯ ಬಳಿಕ ಕರೆ ಮಾಡಿದ್ದ ವಿದ್ಯಾರ್ಥಿನಿ ‘ಜಿಲ್ಲಾಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ, ತಾವು ಹೇಗಾದರೂ ಮಾಡಿ ಜಿಲ್ಲಾಧಿಕಾರಿಗಳಿಂದ ಪದವಿ ಕಾಲೇಜಿಗೆ ಅನ್ವಯಿಸುವುದಿಲ್ಲವೆಂಬ ಲೆಟರ್ ತೆಗೆಸಿಕೊಡಿ’ ಎಂದು ಮನವಿ ಮಾಡಿದರು. ಆ ಸಂದರ್ಭದಲ್ಲಿ ನಾನು ಜಿಲ್ಲಾಧಿಕಾರಿಗಳು, ಉಪ ಕುಲಪತಿಗಳು ಹಾಗೂ ಪ್ರಾಂಶುಪಾಲರ ಬಳಿ ಚರ್ಚೆ ನಡೆಸಿದ ಎಲ್ಲಾ ವಿಚಾರಗಳನ್ನು ತಿಳಿಸಿ, ‘ಸದ್ಯಕ್ಕೆ ತಾವೆಲ್ಲರೂ ತರಗತಿಗಳಿಗೆ ತೆರಳಿ. ನಂತರ ಇದರ ಬಗ್ಗೆ ಕಾನೂನು ಹೋರಾಟ ನಡೆಸುವ, ಈಗ ಅಲ್ಲಿ ಇಲ್ಲಿ ಅಲೆದಾಡಿ ಹಾಜರಾತಿ ಕಡಿಮೆಯಾದರೆ ತಮ್ಮ ಶಿಕ್ಷಣಕ್ಕೆ ಧಕ್ಕೆಯಾಗಬಹುದು, ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವುದು ಒಳಿತು’ ಎಂದು ತಿಳಿಸಿ, ಕಾನೂನು ಹೋರಾಟಕ್ಕಾಗಿ ಹೈಕೋರ್ಟ್ ಸೆಂಟ್ರಲ್ ಅಡ್ವೊಕೇಟ್ ಫೋರಂನ ಶಾಹುಲ್ ಹಮೀದ್‌ರವರ ನಂಬರನ್ನು ವಿದ್ಯಾರ್ಥಿನಿಯರಿಗೆ ನೀಡಿ ಅವರಲ್ಲಿ ಚರ್ಚಿಸಲು ತಿಳಿಸಿದ್ದೆ.

ನಂತರ ಪುನಃ ಕರೆ ಮಾಡಿದ್ದ ವಿಧ್ಯಾರ್ಥಿಗಳು ‘ಜಿಲ್ಲಾಧಿಕಾರಿಗಳು ಲೆಟರ್ ನೀಡುತ್ತಿಲ್ಲ ಎಂದು ಹೇಳಿದಾಗ, ನನ್ನ ಅನುಭವದ ಪ್ರಕಾರ ಇದು ಕಾನೂನು ಮತ್ತು ನ್ಯಾಯಾಲಯದ ಪರಿಮಿತಿಯಲ್ಲಿರುವುದರಿಂದ ನ್ಯಾಯಾಲಯದ ಮೊರೆ ಹೋಗುವುದು ಸೂಕ್ತ, ಈಗಾಗಲೇ ಕಾನೂನು ಹೋರಾಟದ ಬಗ್ಗೆ ಅಡ್ವೊಕೇಟ್ ಬಳಿ ವಿವರ ತಿಳಿಸಿದ್ದೇನೆ, ನಿಮಗೂ ಅಡ್ವೊಕೇಟ್ ನಂಬರ್ ನೀಡಿದ್ದೆ, ಅವರ ಬಳಿ ಚರ್ಚೆ ನಡೆಸಿದ್ದೀರಾ?’ ಎಂದು ಕೇಳಿದಾಗ, ‘ಇಲ್ಲ ನ್ಯಾಯಾಲಯಕ್ಕೆ ಹೋಗಲು ಕೆಲವರಿಗೆ ಮನಸ್ಸಿಲ್ಲ’ ಎಂದು ವಿದ್ಯಾರ್ಥಿನಿ ತಿಳಿಸಿದರು. ‘ಕಾನೂನು ಎಲ್ಲರಿಗೂ ಒಂದೇ, ನ್ಯಾಯಾಲಯಕ್ಕೆ ಹೋಗುವುದು ಸೂಕ್ತ’ ಎಂದು ತಿಳಿ ಹೇಳಿದಾಗ, ‘ಈ ಬಗ್ಗೆ ನಾವು ಪುನಃ ಚರ್ಚಿಸಿ ಮತ್ತೆ ತಿಳಿಸುತ್ತೇವೆ’ ಎಂದರು.

ಎರಡು ದಿನಗಳ ಬಳಿಕ ಮತ್ತೆ ನಾನು ಉಪ ಕುಲಪತಿಗಳಿಗೆ ಕರೆ ಮಾಡಿ ವಿಚಾರದ ಬಗ್ಗೆ ಕೇಳಿದಾಗ, ಕಾಲೇಜು ಪ್ರಾಂಶುಪಾಲರಿಗೆ ಅಲ್ಲಿನ ಅಭಿವೃದ್ಧಿ ಸಮಿತಿಯ ಸಭೆ ಕರೆದು ಈ ಶೈಕ್ಷಣಿಕ ವರ್ಷದಲ್ಲಿ ಹಿಂದಿನಂತೆಯೇ ಇರುವ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವ, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಎಂಬ ನಿರ್ಣಯ ಮಾಡಿ ಕಳಿಸಿಕೊಡಿ ಎಂದು ತಿಳಿಸಿದ್ದೇನೆ ಎಂದರು.

ಈ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆಯಲು ಮತ್ತೆ ನಾನು ವಿದ್ಯಾರ್ಥಿನಿಯರಿಗೆ ಕಾಲ್ ಮಾಡಿದಾಗ ಕರೆಯನ್ನು ಸ್ವೀಕರಿಸಲಿಲ್ಲ. ನನ್ನ ಕಚೇರಿಯ ಆಪ್ತಸಹಾಯಕನ ಕರೆಯನ್ನು ಕೂಡಾ ಸ್ವೀಕರಿಸಿಲ್ಲ. ಮತ್ತೆ ನಾನೇ ಕರೆ ಮಾಡಿದಾಗ ನನ್ನ ಕರೆ ಸ್ವೀಕರಿಸಿದ ವಿದ್ಯಾರ್ಥಿನಿ ‘ರಾಂಗ್ ನಂಬರ್’ ಎಂದು ಕಾಲ್ ಕಟ್ ಮಾಡಿರುತ್ತಾರೆ. ನಂತರ ಈ ಬಗ್ಗೆ ಯಾರೂ ಕೂಡಾ ನನ್ನನ್ನು ಸಂಪರ್ಕಿಸಿಲ್ಲ.

ಮತ್ತೆ ಜಿಲ್ಲಾಧಿಕಾರಿಗಳ ಭೇಟಿಗೆ ವಿದ್ಯಾರ್ಥಿನಿಯರು ತೆರಳಿದ್ದೂ ನನಗೆ ತಿಳಿದಿಲ್ಲ. ಆ ದಿನ ನಾನು ಬೆಂಗಳೂರಿನಲ್ಲಿದ್ದ ಸಂದರ್ಭದಲ್ಲಿ ಮಾಧ್ಯಮದ ಮೂಲಕ ಈ ವಿಚಾರ ತಿಳಿದು ಸರಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾಗಿ ಘಟನೆಯ ಬಗ್ಗೆ ವಿವರಿಸಿ, ಜಿಲ್ಲಾಧಿಕಾರಿಗಳು ಹಾಗೂ ಉಪ ಕುಲಪತಿಗಳ ಬಳಿ ಈ ಬಗ್ಗೆ ಚರ್ಚಿಸಿ ಗೊಂದಲ ಸರಿಪಡಿಸಬೇಕೆಂದು ಮನವಿ ಮಾಡಿದೆ.

ಇಷ್ಟೆಲ್ಲಾ ಬೆಳವಣಿಗೆ ಆಗಿದ್ದರೂ ಕೂಡಾ ಇದ್ಯಾವುದೇ ವಿಚಾರಗಳನ್ನು ತಿಳಿಸದೆ ವಿದ್ಯಾರ್ಥಿನಿಯರು ತಮ್ಮ ಅತ್ಯಮೂಲ್ಯವಾದ ಈ ಪ್ರಾಯದಲ್ಲಿಯೇ ಯಾವುದೋ ರಾಜಕೀಯ ಶಕ್ತಿಗಳಿಗೆ ಮಣಿದು ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ ಎಂದು ಶಾಸಕ ಯ.ಟಿ.ಖಾದರ್‌ ಹಿಜಾಬ್‌ ವಿದ್ಯಾರ್ಥಿನಿ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next