Advertisement

ರೈತರ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ ಹೆದ್ದಾರಿ ತಡೆ

01:50 AM Nov 07, 2021 | Team Udayavani |

ಕೋಟ: ಕೃಷಿಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಶನಿವಾರ ಬ್ರಹ್ಮಾವರ ಬಂಟರ ಭವನದ ಸಮೀಪ ಜನಪರ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ, ರೈತರ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪಕ್ಷಾತೀತವಾಗಿ ಪ್ರತಿಭಟನಾ ಸಭೆ ಜರಗಿತು.

Advertisement

ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ 2,500 ರೂ. ಬೆಂಬಲ ಬೆಲೆ ನಿಗದಿಗೊಳಿಸಬೇಕು, ಗ್ರಾಮ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು, ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಕೃಷಿ ನೀತಿ ಜಾರಿಗೊಳಿಸಬೇಕು, ಕೃಷಿ ಇಲಾಖೆ, ಎ.ಪಿ.ಎಂ.ಸಿ. ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತಂದು ರೈತ ಸ್ನೇಹಿಯಾಗಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ಪ್ರತಿಭಟನಾ ಸಭೆಯಲ್ಲಿ ಬಾಳ್ಕುದ್ರು ಶ್ರೀಮಠದ ನೃಸಿಂಹಾಶ್ರಮ ಸ್ವಾಮೀಜಿ ಮಾತನಾಡಿ, ರೈತರ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಸರಕಾರ ಶೀಘ್ರ ಪ್ರಯತ್ನಿಸಬೇಕು ಎಂದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಪ್ರಸಾದ್‌ ಶೆಟ್ಟಿ ಮಾತನಾಡಿ, ಜಿಲ್ಲೆಯ ಎಲ್ಲ ವಲಯದ ರೈತರನ್ನು, ಎಲ್ಲ ಸರಕಾರಗಳು ಮೂಲೆಗುಂಪು ಮಾಡಿದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸರಕಾರ ಮುಂದಿನ ದಿನಗಳಲ್ಲಿ ಆದ್ಯತೆ ನೀಡಬೇಕು ಎಂದರು. ರೈತ ಸಂಘಟನೆಯ ವಿಕಾಸ್‌ ಹೆಗ್ಡೆ, ಹಿರಿಯ ಮುಖಂಡ ಜ್ಞಾನವಸಂತ್‌ ಶೆಟ್ಟಿ ಮಾತನಾಡಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಬ್ರಹ್ಮಾವರ ತಹಶೀಲ್ದಾರ್‌ ರಾಜಶೇಖರ್‌ಮೂರ್ತಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ:ಕಾಂಗ್ರೆಸ್ ಇರುವ ರಾಜ್ಯಗಳಲ್ಲಿ ಇಂಧನ ಬೆಲೆ ಇಳಿಕೆ ಆಗಿದೆಯಾ: ಪ್ರಹ್ಲಾದ ಜೋಶಿ

Advertisement

ರಾಷ್ಟ್ರೀಯ ಹೆದ್ದಾರಿ ಬಂದ್‌
ಸುಮಾರು 400ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಭೆ ಮುಗಿಯುತ್ತಿದ್ದಂತೆ ಪ್ರತಿಭಟನಾಕಾರರು ಉಡುಪಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯನ್ನು 10 ನಿಮಿಷಗಳ ಕಾಲ ತಡೆದರು. ಕೋಟ ರೈತಧ್ವನಿ ಸಂಘಟನೆ ಅಧ್ಯಕ್ಷ ಮಣೂರು ಜಯರಾಮ್‌ ಶೆಟ್ಟಿ, ಭುಜಂಗ ಶೆಟ್ಟಿ ಬ್ರಹ್ಮಾವರ, ರೈತ ಸಂಘದ ಪ್ರಕಾಶ್‌ ಚಂದ್ರ ಶೆಟ್ಟಿ ಕಂಬದಕೋಣೆ, ಮನು ಹಂದಾಡಿ, ವಿನಯ ಕುಮಾರ್‌ ಕಬ್ಯಾಡಿ, ಹೋರಾಟ ಸಮಿತಿಯ ಸಂಚಾಲಕರಾದ ವಸಂತ್‌ ಗಿಳಿಯಾರ್‌ ಮುಂತಾದವರು ಮಾತನಾಡಿದರು.

ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ
ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಕೃಷಿ ಕುಟುಂಬದ ಮೂಲದಿಂದ ಬಂದಿದ್ದಾರೆ. ಆದರೂ ಜಿಲ್ಲೆಯ ರೈತರ ಸಮಸ್ಯೆ ಬಗ್ಗೆ ಯಾರೂ ಕೂಡ ಸರಕಾರದ ಗಮನ ಸೆಳೆಯುತ್ತಿಲ್ಲ ಎಂದು ಸಭೆಯಲ್ಲಿ ಮಾತನಾಡಿದ ಬಹುತೇಕರು ಆಕ್ರೋಶ ವ್ಯಕ್ತಪಡಿಸಿದರು.

ಇದು ಕೇವಲ ಸಾಂಕೇತಿಕ ಹೋರಾಟವಾಗಿದ್ದು ಕರಾವಳಿ ರೈತರ ಸಮಸ್ಯೆ ಬಗ್ಗೆ ಸರಕಾರ ಗಮನಹರಿಸಿ ಪರಿಹರಿಸದಿದ್ದಲ್ಲಿ ಜನಪರ ರೈತ ಸಂಘಟನೆಯ ನೇತೃತ್ವದಲ್ಲೇ ಎಲ್ಲಾ ರೈತ ಸಂಘಟನೆಗಳು ಜತೆಯಾಗಿ ಪ್ರತಿ ತಾಲೂಕಿನಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋರಾಟ ಸಂಘಟಿಸು ವುದಾಗಿ ಕಿಸಾನ್‌ ಸಂಘದ ಸತ್ಯನಾರಾಯಣ ಉಡುಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next