ವಿಜಯಪುರ: ರೈತರು ಹಾಗೂ ಜನಸಾಮಾನ್ಯರ ಬದುಕಿಗೆ ಮಾರಕವಾಗಿರುವ ಕಾನೂನು ರೂಪಿಸುತ್ತಿರುವ ಕೇಂದ್ರ ಸರ್ಕಾರದ ಜನವಿರೋ ಧಿ ಕರಾಳ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಫೆ. 6ರಂದು ನಗರದಲ್ಲಿ ಹೆದ್ದಾರಿ ತಡೆ ಹೋರಾಟ ಹಮ್ಮಿಕೊಳ್ಳುವುದಾಗಿ ಅಖೀಲ ಭಾರತ ರೈತ ಸಂಘರ್ಷ ಸಮಿತಿ ತಿಳಿಸಿದೆ. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘಟನೆಯ ಭೀಮಸಿ ಕಲಾದಗಿ, ಭರತಕುಮಾರ, ಬಾಳು ಜೇವೂರ ಇವರು ಫೆ. 6ರಂದು ನಗರದ ಸಿಂದಗಿ ಬೈಪಾಸ್‌ನ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟ ನಡೆಸಲಾಗುತ್ತದೆ ಎಂದರು.
ಜ. 26ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ಕಿಸಾನ್ ಸಂಯುಕ್ತ ಸಮಿತಿ ಪರ್ಯಾಯವಾಗಿ ನಡೆಸಿದ ಜನಗಣ ಪರೇಡ್‌ನ ಟ್ರಾಕ್ಟರ್ ರ್ಯಾಲಿ ಸಂಪೂರ್ಣವಾಗಿ ಶಾಂತಿ ರೀತಿಯಲ್ಲಿ ಯಶಸ್ವಿಯಾಗಿತ್ತು. ಸತತ ಎರಡು ತಿಂಗಳ ವರೆಗೆ ರೈತ ಹೋರಾಟದ ಕುರಿತು ಮೌನವಾಗಿಯೇ ಮಲಗಿದ್ದ ಎಲ್ಲಾ ಮಾಧ್ಯಮಗಳು ಕೆಂಪುಕೋಟೆ ಮೇಲೆ ಖಲಿಸ್ತಾನಿ ಧ್ವಜ ಹಾರಿಸಲಾಗಿದೆ, ಆತಂಕವಾದಿಗಳು ದೇಶದ ಸಮ್ಮಾನಕ್ಕೆ ಧಕ್ಕೆ ತಂದಿದ್ದಾರೆ ಎಂದೆಲ್ಲಾ ಆರೋಪದ ಸುದ್ದಿಗಳನ್ನು ನೀಡಲಾರಂಭಿಸಿದವು. ಆದರೆ ವಾಸ್ತವಾಗಿ ಈ ಕಿಡಿಗೇಡಿ ಕೃತ್ಯ ಎಸಗಿದವರು ಬಿಜೆಪಿ ಕಾರ್ಯಕರ್ತರೇ ಎಂಬುದು ಬಯಲಾಗುತ್ತಲೇ ಮಾಧ್ಯಮಗಳು ಮೌನವಾದವು ಎಂದು ಆರೋಪಿಸಿದರು.
ಭಯಗ್ರಸ್ಥ ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣದಲ್ಲಿ ಸತ್ಯ ವರದಿ ಮಾಡಿರುವ ಪತ್ರಕರ್ತರನ್ನು ಬಂಧಿಸುವ ಮೂಲಕ ಹೋರಾಟದ ಸತ್ಯವನ್ನು ಮರೆಮಾಚಲು ಹುನ್ನಾರ ನಡೆಸಿದೆ. ದೆಹಲಿಯಲ್ಲಿ ಇಂಟರ್‌ನೆಟ್ ಸಂಪರ್ಕ ಕಡಿತ ಮಾಡಿದೆ. ಶೌಚಾಲಯಗಳನ್ನು ನಾಶ ಮಾಡಲಾಗುತ್ತಿದೆ. ವಿದ್ಯುತ್ ಪೂರೈಕೆಯನ್ನು ನಿಲ್ಲಿಸುವ ಕೆಲಸಕ್ಕೆ ಮುಂದಾಗಿರುವ ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳುತ್ತಲೇ ಸಾಗುತ್ತಿದೆ ಎಂದು ಟೀಕಿಸಿದರು.
ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಹೋರಾಟನಿರತ ರೈತರ ನಾಯಕರ ಮೇಲಿನ ಸುಳ್ಳು ಮೊಕದ್ದೆಮೆಗಳನ್ನು ರದ್ದುಗೊಳಿಸಬೇಕು. ಹೋರಾಟ ಸ್ಥಳದಲ್ಲಿ ಜಪು¤ ಮಾಡಿದ ವಾಹನಗಳನ್ನು ಬಿಡುಗಡೆ ಮಾಡಬೇಕು. ಬಂಧಿಸಿರುವ ಪತ್ರಕರ್ತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು. ನೀರು, ವಿದ್ಯುತ್, ಅಂತರ್ಜಾಲ, ಶೌಚಾಲಯಗಳ ಮೇಲಿನ ನಿರ್ಬಂಧ ತೆರವುಗೊಳಿಸಬೇಕು. ರಸ್ತೆಗೆ ಅಡ್ಡಲಾಗಿ ಕಟ್ಟಿರುವ ತಡೆಗೋಡೆ, ಕಂಟೇನರ್, ಕಬ್ಬಿಣದ ಮೊಳೆಗಳನ್ನು ತೆಗೆದುಹಾಕಿ ಸಂಚಾರವನ್ನು ಸುಗಮಗೊಳಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಪ್ರಕಾಶ್‌ಹಿಟ್ನಳ್ಳಿ, ಶಕ್ತಿಕುಮಾರ, ಸುಜಾತಾ ಸಿಂಧೆ, ಸುರೇಖಾ ರಜಪೂತ ಇತರರು ಉಪಸ್ಥಿತರಿದ್ದರು.