ಮೈಸೂರು: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಂಜೂರು ಮಾಡಲಾಗಿರುವ ಜಮೀನನ್ನು ದೇವಸ್ಥಾನಕ್ಕೆ ಬಿಟ್ಟುಕೊಡಬೇಕೆಂದು ಆಗ್ರಹಿಸಿ ನಗರದ ಹೊರವಲಯದ ಹಿನಕಲ್ ಗ್ರಾಮಸ್ಥರು ಮಂಗಳವಾರ ಗ್ರಾಮದಲ್ಲಿ ಬಂದ್ ನಡೆಸುವ ಜತೆಗೆ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿರುವ ನನ್ನೇಶ್ವರಸ್ವಾಮಿ ದೇವಸ್ಥಾನದ ಕಲ್ಯಾಣಿ ಪಕ್ಕದ ಜಾಗವನ್ನು ದೇವಸ್ಥಾನಕ್ಕೆ ನೀಡಬೇಕೆಂದು ಒತ್ತಾಯಿಸಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮ ಪಂಚಾಯ್ತಿ ಸದಸ್ಯರು, ಸ್ಥಳೀಯ ಗ್ರಾಮಸ್ಥರು ಒಂದಾಗಿ ಬೃಹತ್ ಪ್ರತಿಭಟನೆ ನಡೆಸಿದರು.
ದೇವಸ್ಥಾನದ ಆವರಣದಿಂದ ಮೈಸೂರು-ಹುಣಸೂರು ಮುಖ್ಯರಸ್ತೆ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮಸ್ಥರು ದೇವಸ್ಥಾನದ ಕಲ್ಯಾಣಿ ಪಕ್ಕದಲ್ಲಿರುವ ನಾಲ್ಕು ಎಕರೆ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟುಕೊಡಬೇಕೆಂದು ಆಗ್ರಹಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ವಿದ್ಯಾಶ್ರಮ ಎಜುಕೇಷನ್ ಫೌಂಡೇಷನ್ ಹಾಗೂ ಇಮ್ಯಾಕ್ಯೂಲೇಟ್ ಹಾರ್ಟ್ ಕಾನ್ವೆಂಟ್ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರು.
ಅಂಗಡಿಗಳು ಬಂದ್: ದೇಗುಲದ ಜಾಗಕ್ಕಾಗಿ ಒತ್ತಾಯಿಸಿ ಗ್ರಾಮಸ್ಥರು ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ರಸ್ತೆಬದಿ ವ್ಯಾಪಾರಿಗಳು ಸೇರಿದಂತೆ ಸಣ್ಣಪುಟ್ಟ ಅಂಗಡಿಗಳ ವ್ಯಾಪಾರಸ್ಥರು ಸಹ ಅಂಗಡಿಗಳನ್ನು ಬಂದ್ ಮಾಡಿದ್ದರು. ಪ್ರತಿಭಟನೆ ಅಂಗವಾಗಿ ಗ್ರಾಮದಲ್ಲಿನ ಶಾಲೆಗಳು, ಮೆಡಿಕಲ್ ಸ್ಟೋರ್‌ಗಳನ್ನು ಹೊರತುಪಡಿಸಿ ಬಹುತೇಕ ಅಂಗಡಿಗಳು ಮುಚ್ಚಲ್ಪಟ್ಟಿತ್ತು. ಪ್ರತಿಭಟನಾಕಾರರು ಬೆಳಗ್ಗೆ 10 ಗಂಟೆಗೆ ತಮ್ಮ ಹೋರಾಟ ಆರಂಭಿಸಿದ ಪರಿಣಾಮ, ಗ್ರಾಮದ ಮೂಲಕ ಹಾದುಹೋಗುವ ಮೈಸೂರು-ಹುಣಸೂರು ರಸ್ತೆಯ ವಾಹನ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು.
ರಸ್ತೆತಡೆ ನಡೆಸಿದರು: ಗ್ರಾಮದ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮಸ್ಥರು ನಂತರ ಹಿನಕಲ್‌ನ ರಿಂಗ್‌ರಸ್ತೆ ಜಂಕ್ಷನ್‌ನಲ್ಲಿ ರಸ್ತೆತಡೆ ನಡೆಸಿದರು. ರಿಂಗ್‌ರಸ್ತೆ ಸಿಗ್ನಲ್‌ನಲ್ಲಿ ಮಾನವ ಸರಪಳಿ ರಚಿಸಿ, ಅರ್ಧಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಪರಿಣಾಮ ಮೈಸೂರು-ಹುಣಸೂರು ಮುಖ್ಯರಸ್ತೆ, ರಿಂಗ್‌ರಸ್ತೆಯ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಪೊಲೀಸರ ಅನುಮತಿ ಪಡೆಯದಿದ್ದರೂ ರಸ್ತೆತಡೆ ನಡೆಸಿದ ಪ್ರತಿಭಟನಾಕಾರರ ಮನವೊಲಿಸಲು ಸ್ಥಳದಲ್ಲಿದ್ದ ಪೊಲೀಸರು ಪ್ರಯತ್ನ ಮಾಡಿದರೂ, ಪೊಲೀಸರ ಮನವಿಗೆ ಸ್ಪಂದಿಸದ ಗ್ರಾಮಸ್ಥರು ರಸ್ತೆತಡೆ ನಡೆಸಿ, ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಸದ ಪ್ರತಾಪ್‌ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ, ನನ್ನೇಶ್ವರಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಹೊನ್ನಪ್ಪ, ಕೆ.ಜಿ.ನಾಗರಾಜ್, ಎಚ್.ಜಿ.ನಾರಾಯಣ, ಎಚ್.ಸಿ. ರಾಜು, ಶಿವಣ್ಣ, ಮಂಜು, ವಕೀಲ ಸುಬ್ಬಯ್ಯ, ಪಾಪಣ್ಣ, ಗಣೇಶ್, ನಳಿನಿ ಅರಸ್, ವೆಂಕಟೇಶ್, ಜವರೇಗೌಡ ಸೇರಿದಂತೆ ಗ್ರಾಮದ ನೂರಾರು ನಿವಾಸಿಗಳು, ಯುವಕರು ಭಾಗವಹಿಸಿದ್ದರು.