ಗುವಾಹಟಿ: ಧಾರಾಕಾರ ಮಳೆಯ ಪರಿಣಾಮ ಚೀನಾ ಗಡಿಭಾಗದ ದಿಬಾಂಗ್ ಕಣಿವೆ ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿ, ರಾಷ್ಟ್ರೀಯ ಹೆದ್ದಾರಿ ಬಹುತೇಕ ಭಾಗ ಕೊಚ್ಚಿಕೊಂಡು ಹೋಗಿರುವ ಘಟನೆ ಅರುಣಾಚಲಪ್ರದೇಶದಲ್ಲಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ 313ರ ಹುನ್ಲಿ ಮತ್ತು ಅನಿನಿ ನಡುವೆ ಭಾರೀ ಭೂಕುಸಿತ ಸಂಭವಿಸಿತ್ತು.
ರಾಷ್ಟ್ರೀಯ ಹೆದ್ದಾರಿಯ ಬಹುತೇಕ ಭಾಗ ಕೊಚ್ಚಿಕೊಂಡು ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ. ಅಲ್ಲದೇ ಸ್ಥಳೀಯರ ಹಾಗೂ ಭದ್ರತಾ ಪಡೆಯ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ವರದಿ ವಿವರಿಸಿದೆ.
ಕಡಿದು ಹೋದ ರಾಷ್ಟ್ರೀಯ ಹೆದ್ದಾರಿಯನ್ನು ಶೀಘ್ರವೇ ದುರಸ್ತಿ ಮಾಡಲಾಗುವುದು ಎಂದು ನ್ಯಾಷನಲ್ ಹೈವೇಸ್ ಆಂಡ್ ಇನ್ಪ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಕಾರ್ಪೋರೇಶನ್ ಲಿಮಿಟೆಡ್ (ಎನ್ ಎಚ್ ಐಡಿಸಿಎಲ್) ತಿಳಿಸಿದೆ.
ಬಹುತೇಕ ಮೂರ್ನಾಲ್ಕು ದಿನಗಳಲ್ಲಿ ಹೆದ್ದಾರಿ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ವಾಹನ ಸವಾರರು, ಸ್ಥಳೀಯರು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ದಿಬಾಂಗ್ ಕಣಿವೆ ಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ.