Advertisement

ರಾಜಕಾಲುವೆ ನಿರ್ವಹಣೆ ಸ್ಪಷ್ಟ ಯೋಜನೆಗೆ ಹೈ ತಾಕೀತು

12:41 PM Jul 04, 2018 | Team Udayavani |

ಬೆಂಗಳೂರು: ರಾಜಕಾಲುವೆ ದುರಸ್ತಿ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಸಮಗ್ರ ಹಾಗೂ ಸ್ಪಷ್ಟ ಯೋಜನೆ ರೂಪಿಸಿ ವರದಿ ನೀಡುವಂತೆ ಸೂಚನೆ ನೀಡಿದೆ.

Advertisement

ಈ ಕುರಿತು ಸಿಟಿಜನ್‌ ಆ್ಯಕ್ಷನ್‌ ಫೋರಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿದ ಮುಖ್ಯನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಕೃಷ್ಣ ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ, ಪಾಲಿಕೆಯ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿತು. ವಿಚಾರಣೆ ವೇಳೆ ಇದುವರೆಗೂ ನಡೆದ ರಾಜಕಾಲುವೆ ದುರಸ್ತಿ, ನಿರ್ವಹಣೆಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿಯನ್ನು ಪಾಲಿಕೆ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ತೃಪ್ತವಾಗದ ನ್ಯಾಯಪೀಠ, ಬಿಬಿಎಂಪಿ ಯಾವುದೇ ಕಾಮಗಾರಿ ನಡೆಸಿದರೂ ಸಾರ್ವಜನಿಕರ ರಕ್ಷಣೆಯ ಆದ್ಯತೆ ಗಮನದಲ್ಲಿಟ್ಟುಕೊಂಡು ತ್ವರಿತವಾಗಿ ಕೆಲಸ ಮಾಡಬೇಕು. ಮಳೆಗಾಲ ಆರಂಭವಾಗಿದ್ದು ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸಲು ಸಕಾಲವಾಗಿದೆ ಎಂದು ಸಲಹೆ ನೀಡಿತು.

ಅಲ್ಲದೆ, ಪಾಲಿಕೆಯ ಸ್ಥಳೀಯ ಇಂಜಿಯರ್‌ಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಪ್ರತಿನಿತ್ಯ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂದೂ ಪ್ರಶ್ನಿಸಿದ ನ್ಯಾಯಪೀಠ, ರಾಜಕಾಲುವೆ ದುರಸ್ತಿ ಸೇರಿದಂತೆ ಮತ್ತಿತರ ಕಾರ್ಯಗಳ ನಿರ್ವಹಣೆಗೆ ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಜತೆಗೂಡಿ ಸಮಗ್ರ ಹಾಗೂ ಸ್ಪಷ್ಟ ಯೋಜನೆ ರೂಪಿಸಿ, ವರದಿ ನೀಡುವಂತೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.

169ಕಿ.ಮೀ. ರಾಜಕಾಲುವೆ ಕಾಮಗಾರಿ ಪೂರ್ಣ: ರಾಜಕಾಲುವೆ ಹೂಳೆತ್ತುವುದು, ದುರಸ್ತಿ ಸೇರಿ ಇತರೆ ಕಾಮಗಾರಿಗಳ ಬಗ್ಗೆ ಜೂನ್‌ 11ವರೆಗೆ ನಡೆದಿರುವ ವಸ್ತುಸ್ಥಿತಿ ವರದಿಯ ಪ್ರಮಾಣಪತ್ರವನ್ನು ಪಾಲಿಕೆ ಹೈಕೋರ್ಟ್‌ಗೆ ಸಲ್ಲಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 169 ಕಿ.ಮೀ ಉದ್ದದ ರಾಜಕಾಲುವೆ ದುರಸ್ತಿ ಪೂರ್ಣಗೊಂಡಿದ್ದು, 150 ಕಿ.ಮೀ ಉದ್ದದ ಕಾಲುವೆಯಲ್ಲಿ ಹೂಳೆತ್ತುವ ಕಾರ್ಯ ಪೂರ್ಣಗೊಂಡಿದೆ.

Advertisement

ಪ್ರತಿದಿನ ರಾಜಕಾಲುವೆ ಸ್ವತ್ಛತೆ ನಿರ್ವಹಣೆ ಮಾಡಲಾಗುತ್ತಿದೆ. ಯಶವಂತಪುರ ಸಮೀಪ 20 ಕಿ.ಮೀ ಉದ್ದದ ರಾಜಕಾಲುವೆ ದುರಸ್ತಿಗೆ ಹೊಸ ಟೆಂಡರ್‌ ಕರೆಯಲಾಗಿದೆ ಎಂದು ತಿಳಿಸಿದೆ. ರಾಜಕಾಲುವೆಗೆ ತ್ಯಾಜ್ಯ ಸೇರ್ಪಡೆಯಾಗುವುದನ್ನು ತಡೆಯುವ ಸಲುವಾಗಿ 118 ಪ್ರದೇಶಗಳಲ್ಲಿ ಹಾದು ಹೋಗಿರುವ 179.85 ಕಿ.ಮೀ. ಉದ್ದದ ಮಾರ್ಗಕ್ಕೆ ತಂತಿ ಬೇಲಿ ಹಾಕಲಾಗಿದೆ ಎಂದು ವಿವರಿಸಿದೆ.

ಮಳೆಗಾಲದ ನಿರ್ವಹಣೆಗೆ 63 ನಿಯಂತ್ರಣ ಕೊಠಡಿ!: ಮಳೆಗಾಲದಲ್ಲಿ ಪ್ರವಾಹ ಸೇರಿ ಯಾವುದೇ ಅವಘಡದ ಸ್ಥಿತಿ ಎದುರಾದರೂ ಸಮರ್ಪಕವಾಗಿ ನಿರ್ವಹಿಸಲು ಪಾಲಿಕೆ ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದೆ. ಆಯಾ ವಲಯ ವಿಭಾಗದ ಜಂಟಿ ಆಯುಕ್ತರ ನೇತೃತ್ವದಲ್ಲಿ 63 ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದ್ದು, ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸಲಿವೆ. ಅಲ್ಲದೆ, ತುರ್ತು ಸಂದರ್ಭದಲ್ಲಿ ಜನರ ಸಹಾಯಕ್ಕೆ ಧಾವಿಸಲು, ಮಳೆಗೆ ಬಿದ್ದುಹೋದ ಮರಗಳನ್ನು ತೆರವುಗೊಳಿಸಲು ವಾಹನ ಸೇರಿ ಸಿಬ್ಬಂದಿ ಇರಲಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next