Advertisement

ವಾಡಿ-ಶಹಾಬಾದ ವೃತ್ತದಲ್ಲಿ ಬೆಳಗದ ಹೈಮಾಸ್ಟ್‌

11:22 AM Feb 23, 2022 | Team Udayavani |

ಶಹಾಬಾದ: ರಾಷ್ಟ್ರೀಯ ಹೆದ್ದಾರಿ-150ಕ್ಕೆ ಹೊಂದಿಕೊಂಡಿರುವ ವಾಡಿ-ಶಹಾಬಾದ ವೃತ್ತದಲ್ಲಿ ಹೈಮಾಸ್ಟ್‌ ಕಂಬ ಅಳವಡಿಸಿದ್ದರೂ ವಿದ್ಯುತ್‌ ಸಂಪರ್ಕವಿಲ್ಲದೇ ಇದ್ದುದ್ದರಿಂದ ಕತ್ತಲಲ್ಲೇ ಕಾಲ ಕಳೆಯುವಂತೆ ಆಗಿದೆ.

Advertisement

ಜಿಪಂ ವ್ಯಾಪ್ತಿಯ ಚಿತ್ತಾಪುರ ವಿಭಾಗದಿಂದ ಹೈಮಾಸ್ಟ್‌ ದೀಪ ಅಳವಡಿಸಲು ಎರಡು ವರ್ಷದ ಹಿಂದೆಯೇ ಲಕ್ಷಾಂತರ ರೂ. ಅನುದಾನವನ್ನು ಖರ್ಚು ಮಾಡಲಾಗಿದೆ. ಆದರೂ ಬೆಳಕಿನ ವ್ಯವಸ್ಥೆಯಾಗಿಲ್ಲ. ಅಲ್ಲದೇ ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ಮಾಡಿಲ್ಲ.

ಚಿತ್ತಾಪುರ, ವಾಡಿ, ಯಾದಗಿರಿಯಂತ ಮುಖ್ಯ ನಗರಗಳಿಗೆ ಈ ಮಾರ್ಗದ ಮೂಲಕವೇ ಹಾಯ್ದು ಹೋಗಬೇಕಾಗುತ್ತದೆ. ಹೀಗಿದ್ದರೂ ಹೈಮಾಸ್ಟ್‌ ದೀಪಕ್ಕೆ ವಿದ್ಯುತ್‌ ಅಳವಡಿಸದ ಗುತ್ತಿಗೆದಾರರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ವಿದ್ಯುತ್‌ ದೀಪ ಇಲ್ಲದೇ ಇರುವುದರಿಂದ ರಾತ್ರಿ ವೇಳೆ ಹಲವಾರು ಅಪಘಾತಗಳು ಸಂಭವಿಸಿವೆ. ಜಿಪಂ ಎಇಇ ಶ್ರೀಧರ ಅವರಿಗೆ ಹೈಮಾಸ್ಟ್‌ ದೀಪ ಅಳವಡಿಸಲು ಕೆಲವು ಸಂಘಟನೆಗಳ ಮುಖಂಡರು ಹಲವಾರು ಸಲ ಕೋರಿದ್ದಾರೆ. ಆದರೆ ಅವರು, “ನಾವು ಹೈಮಾಸ್ಟ್‌ ಅಳವಡಿಸಿ ನಗರಸಭೆಗೆ ಹಸ್ತಾಂತರ ಮಾಡಿದ್ದೇವೆ. ಅವರೇ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು’ ಎನ್ನುತ್ತಾರೆ. ನಗರಸಭೆ ಅಧಿಕಾರಿಗಳಿಗೆ ಕೇಳಿದರೇ ನಮಗೆ ಹಸ್ತಾಂತರ ಮಾಡಿಲ್ಲ ಎನ್ನುತ್ತಾರೆ.

ಒಟ್ಟಿನಲ್ಲಿ ಈ ಇಬ್ಬರ ಹಗ್ಗ-ಜಗ್ಗಾಟದಲ್ಲಿ ಸಾರ್ವಜನಿಕರು ಸಂಜೆಯಾದ ನಂತರ ಕತ್ತಲಲ್ಲೇ ಓಡಾಡುವಂತೆ ಆಗಿದೆ. ಅಲ್ಲದೇ ಈ ಕುರಿತು ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರ ಗಮನಕ್ಕೆ ತಂದರೂ ಹೈಮಾಸ್ಟ್‌ ದೀಪ ಅಳವಡಿಸುವ ಕಾರ್ಯ ಇನ್ನೂ ಕೈಗೂಡಿಲ್ಲ.

ವಾಡಿ- ಶಹಾಬಾದ ವೃತ್ತದಲ್ಲಿ ಹೈಮಾಸ್ಟ್‌ ಕಂಬಕ್ಕೆ ಶೀಘ್ರ ವಿದ್ಯುತ್‌ ಸಂಪರ್ಕ ಒದಗಿಸಬೇಕು. ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಬಸ್‌ ನಿಲ್ದಾಣದ ನಿರ್ಮಾಣ ಮಾಡಬೇಕು. -ಲೋಹಿತ್‌ ಕಟ್ಟಿ, ಪ್ರಧಾನ ಕಾರ್ಯದರ್ಶಿ, ಜೆಡಿಎಸ್‌

Advertisement

ಹಗಲಿನಲ್ಲಿ ಬಿಸಿಲಿನಿಂದ, ರಾತ್ರಿ ಬೆಳಕಿಲ್ಲದೇ ಪ್ರಯಾಣಿಕರು ತೊಂದರೆಗೆ ಒಳಗಾಗುತ್ತಿದ್ದಾರೆ. ಅಲ್ಲದೇ ಬಿಸಿಲು ಮತ್ತು ಮಳೆಯಿಂದ ಜನರು ಹೈರಾಣಾಗುತ್ತಿದ್ದಾರೆ. ಆದ್ದರಿಂದ ಶಾಸಕ ಬಸವರಾಜ ಮತ್ತಿಮಡು ಅವರು ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ಕ್ರಮ ಕೈಗೊಳ್ಳಬೇಕು. -ಕಿರಣ ಕೋರೆ, ಕಾಂಗ್ರೆಸ್‌ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next