ಬೆಂಗಳೂರು: ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿರುವ ಸುಧಾರಣೆಗಳನ್ನು ಸರ್ಕಾರ ಮತ್ತಷ್ಟು ವಿಸ್ತರಿಸಲಿದ್ದು, ಅಮೆರಿಕದ ಪೆನ್ಸಿಲ್ವೇನಿಯಾದ ವಿಶ್ವವಿದ್ಯಾಲಯಗಳು ಇದರಲ್ಲಿ ಭಾಗಿಯಾಗಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಸೋಮವಾರ ಹೇಳಿದ್ದಾರೆ.
ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಪೆನ್ಸಿಲ್ವೇನಿಯ ಸ್ಟೇಟ್ ಸಿಸ್ಟಮ್ ಆಫ್ ಹೈಯರ್ ಎಜುಕೇಶನ್ (ಪಿ ಎಸ್ ಎಸ್ ಎಚ್ ಇ) ನಡುವೆ ಜಾಗತಿಕ ಪಾಲುದಾರಿಕೆ ಒಪ್ಪಂದದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ಹಲವು ವಿವಿಗಳು ಪೆನ್ಸಿಲ್ವೇನಿಯಾ ವಿವಿಗಳ ಜತೆ ಮಂಗಳವಾರ ಒಪ್ಪಂದಕ್ಕೆ ಸಹಿ ಮಾಡಿಕೊಳ್ಳಲಿವೆ.
ಉನ್ನತ ಶಿಕ್ಷಣ ವ್ಯವಸ್ಥೆಯ ಪ್ರತಿಯೊಂದು ಹಂತಕ್ಕೂ ವಿಕೇಂದ್ರೀಕರಣವನ್ನು ವಿಸ್ತರಿಸಲು ಸರ್ಕಾರ ಒತ್ತು ನೀಡಲಿದೆ. ಎನ್ಇಪಿ ಆಶಯದಂತೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಲಭ್ಯವಾಗಿಸಲು ವಿದೇಶಗಳ ಹೆಸರಾಂತ ವಿ.ವಿ.ಗಳ ಜೊತೆ ಸಹಭಾಗಿತ್ವ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಉನ್ನತ ಶಿಕ್ಷಣದ ಡಿಜಿಟಲೀಕರಣಕ್ಕೆ ಪ್ರಾಮುಖ್ಯ ಕೊಡಲಾಗಿದೆ. ಪಾಲಿಟೆಕ್ನಿಕ್ ನಲ್ಲಿ ಜಾರಿಗೊಳಿಸಿದ ಟ್ವಿನ್ನಿಂಗ್ ಕೋರ್ಸ್ ಹಾಗೂ ಮತ್ತಿತರ ಉಪಕ್ರಮಗಳಿಂದಾಗಿ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಮಾಣ ಶೇಕಡ 50ರಿಂದ 100ಕ್ಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಪ್ರತಿವರ್ಷ 80 ಸಾವಿರ ವಿದ್ಯಾರ್ಥಿಗಳು ಪಾಲಿಟೆಕ್ನಿಕ್ ಸೇರುತ್ತಿದ್ದಾರೆ ಎಂದು ಅವರು ವಿವರಿಸಿದರು.
ಟ್ವಿನ್ನಿಗ್ ಕೋರ್ಸ್, ಡ್ಯೂಯೆಲ್ ಪದವಿ, ಕೌಶಲ ತರಬೇತಿ, ಇಂಟರ್ನ್ಶಿಪ್ ಇತ್ಯಾದಿಗಳನ್ನು ಮತ್ತಷ್ಟು ವಿಸ್ತರಿಸಲಾಗುವುದು. ಬೆಳವಣಿಗೆಯ ದೃಷ್ಟಿಯಿಂದ ಕರ್ನಾಟಕವು ಭರವಸೆಯ ರಾಜ್ಯವಾಗಿದೆ. ಹಾಗೆಯೇ ಬೆಂಗಳೂರು ದೇಶದಲ್ಲೆಡೆಯಿಂದ ಪ್ರತಿಭಾವಂತರನ್ನು ಸೆಳೆಯುತ್ತಿದೆ. ಜಾಗತಿಕ ಮಟ್ಟದ 500 ಅಗ್ರಮಾನ್ಯ ಕಂಪನಿಗಳ ಪೈಕಿ 400 ಕಂಪನಿಗಳು ಬೆಂಗಳೂರಿನಲ್ಲಿ ನೆಲೆಯಾಗಿವೆ ಎಂದು ನಾರಾಯಣ ವಿವರಿಸಿದರು.
ಕುಲಪತಿ ಡಾ.ಪೀಟರ್ ಗಾರ್ಲೆಂಡ್ ಮತ್ತು ಡಾ.ಅನಿತಾ ಮೀಹನ್ ನೇತೃತ್ವದ ಪೆನ್ಸಿಲ್ವೇನಿಯ ವಿ.ವಿ.ಗಳ ನಿಯೋಗವು ರಾಜ್ಯಕ್ಕೆ ಒಂದು ವಾರ ಅವಧಿಯ ಭೇಟಿ ನೀಡಿದೆ. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಹಂತದಲ್ಲಿ ಪರಸ್ಪರ ಸಹಭಾಗಿತ್ವ ಕುರಿತು ಚರ್ಚೆ ಹಾಗೂ ಸಮಾಲೋಚನೆಗಳು ನಡೆಯಲಿವೆ.
ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ಬಿ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಡಾ. ಗೋಪಾಲಕೃಷ್ಣ ಜೋಶಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಆಯುಕ್ತ ಪಿ. ಪ್ರದೀಪ್ ಮತ್ತಿತರರು ಇದ್ದರು.
ಈ ಕಾರ್ಯಕ್ರಮದಲ್ಲಿ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ಇಡೀ ದಿನ ನಡೆದ ಸಭೆಗಳಲ್ಲಿ ಭಾಗವಹಿಸಿದ್ದರು.