Advertisement

ಜಲಮೂಲಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ

05:49 AM Jun 16, 2020 | Lakshmi GovindaRaj |

ಬೆಂಗಳೂರು: ದೇಶದ ಬೆಳವಣಿಗೆಗೆ ಪೂರಕವಾಗಿರುವ ಜಲಮೂಲಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಮೇಗೌಡ  ಹೇಳಿದ್ದಾರೆ. ಬನಶಂಕರಿಯ ಜಿಪಂ ಸಭಾಂಗಣದಲ್ಲಿ ಸೋಮವಾರ ಕೆರೆಗಳ ಮಾಹಿತಿ ಕ್ರೋಢೀಕರಣ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ  ಆದೇಶದ ಮೇರೆಗೆ ಜೂ.15 ರಿಂದ 22ರ ವರೆಗೆ ಈ  ಸಪ್ತಾಹ ನಡೆಯಲಿದೆ. ಈ ಕಾರ್ಯಕ್ರಮದಡಿ 2.5 ಹೆಕ್ಟೇರ್‌ಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ 16 ಹೋಬಳಿ ವ್ಯಾಪ್ತಿಯ ಸುಮಾರು 357 ಕೆರೆಗಳ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದರು. ಕೆರೆಗಳ ನೀರಿನ ಮೂಲ, ನೀರಿನ ಮಟ್ಟ, ಜಲಚರಗಳು, ಮೀನುಗಾರಿಕೆ ವಿವರ, ಕೆರೆ  ಯಾಶ್ರಿತ ಕೃಷಿ ಭೂಮಿ, ಕೆರೆ ಬದಿಯ ಮಣ್ಣಿನ ಗುಣ ಲಕ್ಷಣಗಳು, ಹೂಳು, ಒತ್ತುವರಿ ವಿವರ ಹಾಗೂ ಒತ್ತುವರಿದಾರರ ಸಮಗ್ರ ಮಾಹಿತಿಯನ್ನು ಕೆ-ಜಿಐಸ್‌ ತಂತ್ರಾಂಶದಲ್ಲಿ ನಮೂದಿಸಲಾಗುವುದು ಎಂದು ತಿಳಿಸಿದರು.

ಅಲ್ಲದೆ ಕೆರೆಗಳ ಪರಿವೀಕ್ಷಣೆ, ಸ್ಥಳೀಯರ ಮಾಹಿತಿ ಹಾಗೂ ಮೂಲ ದಾಖಲೆಗಳ ಆಧಾರದಲ್ಲಿ ಮಾಹಿತಿ ಕ್ರೋಡಿಕರಿಸಲಾಗುವುದು. ಜಿಪಂ ಎಂಜಿನಿಯರಿಂಗ್‌ ವಿಭಾಗ, ಕೃಷಿ, ತೋಟಗಾರಿಕೆ,  ಮೀನುಗಾರಿಕೆ, ಕಂದಾಯ ಇಲಾಖೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಂಟಿಯಾಗಿ ಕೆರೆಗಳ ಮಾಹಿತಿ ಕ್ರೋಢೀಕರಣ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ನಗರದ ಏಕೈಕ ನದಿ ವೃಷಭಾವತಿ ಸಂಪೂರ್ಣ ಮಲಿನವಾಗಿದ್ದು ಕೆರೆಗಳು ಹಾಳಾದರೆ ಅಂತರ್ಜಲದ ಗುಣಮಟ್ಟವು ಹದಗೆಡುತ್ತದೆ.

ಪ್ರಾಕೃತಿಕ ವಿಕೋಪಗಳಿಗೂ ಎಡೆ ಮಾಡಿಕೊಡುತ್ತ ದೆ. ಆ ಹಿನ್ನೆಲೆಯಲ್ಲಿಯೇ ಕೆರೆಗಳ ರಕ್ಷಣೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಕಾರ್ಯಪಾಲಕ  ಅಭಿಯಂತರ ಕೃಷ್ಣಮೂರ್ತಿ ಮಾತನಾಡಿ, ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬೆಂಗಳೂರು ದಕ್ಷಿಣ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್‌, ಸಹಾಯಕ ಕಾರ್ಯಪಾಲಕ ಅಭಿಯಂತರ ಬಾಬು ಎಸ್‌. ಕುಂಬಾರ್‌ ಸೇರಿದಂತೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next