Advertisement

ಪ್ರತ್ಯೇಕ ರಾಜ್ಯಕ್ಕಿಂತ ಹೈ-ಕ ಪ್ರಗತಿ ಮುಖ್ಯ

02:01 PM Aug 03, 2018 | |

ರಾಯಚೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಿಂತ ಹೈದರಾಬಾದ್‌ ಕರ್ನಾಟಕ ಭಾಗದ ಅಭಿವೃದ್ಧಿ ಮುಖ್ಯವಾಗಿದೆ
ಎಂದು ನಗರದಲ್ಲಿ ವಿವಿಧ ಸಂಘಟನೆಗಳು ಒಂದೇ ವೇದಿಕೆಯಡಿ ಗುರುವಾರ ಪ್ರತಿಭಟನೆ ನಡೆಸಿದವು.

Advertisement

ನಗರದ ಅಂಬೇಡ್ಕರ್‌ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ಮೆರವಣಿಗೆ ನಡೆಸಿ ಆ ನಂತರ ಧರಣಿ ನಡೆಸಲಾಯಿತು. ಹೈಕ ಭಾಗವನ್ನು ಸಂಪೂರ್ಣ ಕಡೆಗಣಿಸಿರುವ ರಾಜ್ಯ ಸರ್ಕಾರ ಹಾಗೂ ಮಲತಾಯಿ ಧೋರಣೆ ತಾಳುತ್ತಿರುವ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಹೈ-ಕ ಭಾಗಕ್ಕೆ ಈಚೆಗೆ ವಿಶೇಷ ಸ್ಥಾನಮಾನ ಸಿಕ್ಕಿದ್ದು, ಅದು ಕೂಡ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಆದರೆ, ಏತನ್ಮಧ್ಯೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಯವರು ಪ್ರತ್ಯೇಕ ರಾಜ್ಯ ಬೇಕು ಎಂದು ಹೋರಾಡುತ್ತಿರುವುದು ತಮ್ಮ ಸ್ವಾರ್ಥ ಸಾಧನೆಗೆ ವಿನಃ ನಮ್ಮ ಭಾಗದ ಪ್ರಗತಿಗಾಗಿ ಅಲ್ಲ. ಪ್ರತ್ಯೇಕ ರಾಜ್ಯವಾದರೆ ನಮಗೆ ಸಿಕ್ಕಿರುವ ವಿಶೇಷ ಸ್ಥಾನಮಾನ ಅರ್ಥ ಕಳೆದುಕೊಳ್ಳಲಿದೆ ಎಂದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಮುಖ್ಯಮಂತ್ರಿ ನಡೆಸಿದ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಏಕಪಕ್ಷೀಯ.
ಸೌಜನ್ಯಕ್ಕಾದರೂ ಹೈ-ಕ ಭಾಗದವರನ್ನು ಗಣನೆಗೆ ತೆಗೆದುಕೊಳ್ಳದೇ ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಮಾತ್ರ ಉತ್ತರ ಕರ್ನಾಟಕ ಎಂದು ಭಾವಿಸಿದಂತಿದೆ. ಅಂಥ ಭ್ರಮೆಯಿಂದ ಅವರು ಮೊದಲು ಹೊರಬಂದು, ಹೈ-ಕ ಭಾಗದ ಪ್ರಗತಿಗೆ ವಿಶೇಷ ಆದ್ಯತೆ ನೀಡುವ ಭರವಸೆ ನೀಡಲಿ ಎಂದು ಒತ್ತಾಯಿಸಿದರು.

ಈ ಭಾಗದ ಹಿಂದುಳಿವಿಕೆಯನ್ನು ಡಾ| ಡಿ.ಎಂ.ನಂಜುಂಡಪ್ಪ ಅವರು ವರದಿಯಲ್ಲಿ ವಿವರಿಸಿದ್ದಾರೆ. ರಾಜ್ಯದಲ್ಲಿ ಪ್ರಾದೇಶಿಕ
ಅಸಮಾನತೆ ಹೋಗಲಾಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ತಿಳಿಸಿದ್ದಾರೆ. ಆದರೆ, ಅದ್ಯಾವುದು ಈಡೇರಿಲ್ಲ. ಈ ಭಾಗದ ಹೆಸರಿನಲ್ಲಿ ಮುಂಬಯಿ ಕರ್ನಾಟಕ ಸಾಕಷ್ಟು ಮುಂದುವರಿದಿದೆ. ಆದರೆ, ಈಗ ಪ್ರತ್ಯೇಕ ರಾಜ್ಯ ಬೇಕು ಎಂದು ಹೈದರಾಬಾದ್‌ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲು ಮುಂದಾಗಿದೆ ಎಂದರು.

Advertisement

ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಸೌಲಭ್ಯ ಸಿಕ್ಕು ಐದು ವರ್ಷವಾದರೂ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಈ
ನಿಟ್ಟಿನಲ್ಲಿ ಕಾಯ್ದೆ ಸಮರ್ಪಕ ಜಾರಿಗೆ ಹೆಚ್ಚಿನ ಒತ್ತು ನೀಡಬೇಕು. ಅಧಿಕಾರಿಗಳು ಮತ್ತು ಈ ಭಾಗದ ಹೋರಾಟಗಾರರ ನೇತೃತ್ವದಲ್ಲಿ 371 (ಜೆ) ಅನುಷ್ಠಾನ ಕುರಿತು ಶೀಘ್ರದಲ್ಲಿ ಮುಖ್ಯಮಂತ್ರಿ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು. ಯಾವುದೇ ಕಾರಣಕ್ಕೂ ಬೆಳಗಾವಿಯನ್ನು 2ನೇ ರಾಜಧಾನಿ ಮಾಡಬಾರದು. ಹೈ-ಕ ಭಾಗದಲ್ಲಿ ಕಚೇರಿಗಳನ್ನು ಸ್ಥಳಾಂತರಿಸಲಿ. ಭೌಗೋಳಿಕವಾಗಿ ಎಲ್ಲರಿಗೂ ಅನುಕೂಲವಾಗುವಂಥ ಜಿಲ್ಲೆಯಲ್ಲಿ ರಾಜಧಾನಿ ಸ್ಥಾಪಿಸಬೇಕು. ಸಚಿವರ ಸ್ಥಾನ, ನಿಗಮ ಮಂಡಳಿಗಳಿಗೆ ನೇಮಕ, ವಿವಿಗಳಿಗೆ ಕುಲಪತಿಗಳು, ನಿರ್ದೇಶಕರ ನೇಮಕದಲ್ಲಿ ಈ ಭಾಗದವರಿಗೆ ಹೆಚ್ಚು ಒತ್ತು ನೀಡಬೇಕು. ಒಂದು ವೇಳೆ ಇದೇ ನಿರ್ಲಕ್ಷ್ಯ ಮುಂದುವರಿದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹೋರಾಟದ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು. ಧರಣಿಯಲ್ಲಿ ಒಕ್ಕೂಟದ ಮುಖಂಡರಾದ ಡಾ| ರಜಾಕ್‌ ಉಸ್ತಾದ್‌, ಬಸವರಾಜ ಕಳಸ, ಅಶೋಕ ಕುಮಾರ ಜೈನ, ಎಂ.ವಿರೂಪಾಕ್ಷಿ, ಮುಕ್ತಿಯಾರ್‌, ಯಲ್ಲಪ್ಪ, ಅಂಬಣ್ಣ ಅರೋಲಿ, ಎನ್‌.ಶಿವಶಂಕರ, ಕೆ.ಇ.ಕುಮಾರ, ಅಶೋಕ ಶೆಟ್ಟಿ ಸೇರಿ ವಿವಿಧ ಸಂಘಟನೆಗಳ ಸದಸ್ಯರು, ಕಾರ್ಯತರ್ಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next