ಬೆಂಗಳೂರು: ಬಿಬಿಎಂಪಿಗೆ ಸೇರಿದ ಜಾಗ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎನ್ನಲಾದ ಮಲ್ಲೇಶ್ವರದ ಮಂತ್ರಿಮಾಲ್ ಮತ್ತು ಮಂತ್ರಿಗ್ರೀನ್ ವಸತಿ ಸಮುತ್ಛಯದ ವಿವಾದಿತ ಭಾಗವನ್ನು ನೆಲಸಮಗೊಳಿಸದಂತೆ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಹೈಕೋರ್ಟ್ ಮಧ್ಯಂತರ ನಿರ್ದೇಶನ ನೀಡಿದೆ.
ಈ ಸಂಬಂಧ ಮೆರ್ಸೆಸ್ ಹಮಾರ ಶೆಲ್ಟರ್ ಪ್ರೈವೇಟ್ ಲಿಮಿಟೆಡ್ ಮತ್ತು ಮೆರ್ಸೆಸ್ ಅಭಿಷೇಕ ಪ್ರಾಪ್ ಬಿಲ್ಡ್ ಪ್ರೈವೇಡ್ ಲಿಮಿಟೆಡ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಅಲ್ಲದೆ, ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಪ್ರತಿವಾದಿಗಳು ವಿವಾದಿತ ಜಾಗದ ಸರ್ವೇ ನಡೆಸಬಹುದು. ಅದು ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಹೈಕೊರ್ಟ್ ಇದೇ ವೇಳೆ ಸ್ಪಷ್ಟಪಡಿಸಿದೆ.
ಹಾಗೆಯೇ, ಅರ್ಜಿ ಸಂಬಂಧ ಬೆಂಗಳೂರು ಪ್ರಾದೇಶಿಕ ಆಯುಕ್ತರು, ಬಿಬಿಎಂಪಿ ಆಯುಕ್ತರು, ಪೂರ್ವ ಹಾಗೂ ಪಶ್ಚಿಮ ವಲಯದ ಜಂಟಿ ನಿರ್ದೇಶಕರು, ಭೂ ಸ್ವಾಧೀನ ಮತ್ತು ಟಿಡಿಆರ್ ವಿಭಾಗದ ಉಪ ಆಯುಕ್ತರು, ಗಾಂಧಿನಗರ ವಿಭಾಗದ ಕಂದಾಯ ನಿರೀಕ್ಷಕರು, ರಾಜ್ಯ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಅರ್ಜಿಯಲ್ಲಿನ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶಿಸಿದೆ.
ಹಮಾರ ಶೆಲ್ಟರ್ì ಪ್ರೈವೇಟ್ ಲಿಮಿಟೆಡ್ ಕಂಪನಿಯು ನಗರದ ಸಂಪಿಗೆ ರಸ್ತೆಯಲ್ಲಿ 4.29 ಎಕರೆ ಜಮೀನು ಒತ್ತುವರಿ ಮಾಡಿದೆ. ಅದರಲ್ಲಿ ಹನುಮಂತಪುರ ಗ್ರಾಮದ ಸರ್ವೇ ನಂ.56ರಲ್ಲಿನ 37 ಗುಂಟೆ (ಜಕ್ಕರಾಯನಕೆರೆ ಜಾಗ) ಮತ್ತು ಜಕ್ಕಸಂದ್ರ ಗ್ರಾಮದ ನಕಾಶೆಯಂತೆ 3.32 ಎಕರೆಯು ಪಾಲಿಕೆಗೆ ಸೇರಿದ ಸ್ವತ್ತು ಆಗಿದೆ. ಈ ಜಾಗದಲ್ಲಿ ಹಮಾರ ಶೆಲ್ಟರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಮಂತ್ರಿ ಮಾಲ್ ಮತ್ತು ಮಂತ್ರಿ ಗ್ರೀನ್ ವಸತಿ ಸಮುತ್ಛಯ ನಿರ್ಮಿಸಿದೆ. ಆ ಒತ್ತುವರಿ ತೆರವುಗೊಳಿಸಿ, ವಶಕ್ಕೆ ಪಡೆಯುವಂತೆ ಪ್ರಾದೇಶಿಕ ಆಯುಕ್ತರು ಬಿಬಿಎಂಪಿಗೆ 2019ರ ಡಿ.24ರಂದು ಆದೇಶಿಸಿದ್ದರು. ಈ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಜತೆಗೆ, ಪ್ರಾದೇಶಿಕ ಆಯುಕ್ತರ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ. ಆ ಮಧ್ಯಂತರ ಮನವಿ ಪರಿಗಣಿಸಲು ಅರ್ಜಿಯನ್ನು ನಾಲ್ಕು ವಾರಗಳ ನಂತರ ವಿಚಾರಣೆಗೆ ನಿಗದಿಪಡಿಸಿರುವ ಹೈಕೋರ್ಟ್, ಅರ್ಜಿದಾರರು ವಿವಾದಿತ ಜಾಗದಲ್ಲಿ ನಿರ್ಮಿಸಿರುವ ಕಟ್ಟಡ ನೆಲಸಮಗೊಳಿಸಬಾರದು. ಬಿಬಿಎಂಪಿ ಹಾಗೂ ಇತರೆ ಪ್ರತಿವಾದಿಗಳು ಜಾಗದ ಸರ್ವೇ ನಡೆಸಬಹುದು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.