Advertisement

ಖಾಸಗಿ ಎಂಜಿನಿಯರಿಂಗ್‌ ಕಾಲೇಜು ಕ್ರಮಕ್ಕೆ ಹೈಕೋರ್ಟ್‌ ತರಾಟೆ

10:16 PM Jul 25, 2023 | Team Udayavani |

ಬೆಂಗಳೂರು: ಸೂಪರ್‌ನ್ಯೂಮರರಿ ಕೋಟಾದಡಿ ಎಂಜಿನಿಯರಿಂಗ್‌ ಕೋರ್ಸ್‌ಗೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿಯ ಸ್ಕಾಲರ್‌ಶಿಪ್‌ ಹಣವನ್ನು ಟ್ಯೂಷನ್‌ ಶುಲ್ಕವನ್ನಾಗಿ ಪರಿವರ್ತಿಸಿಕೊಂಡ ಖಾಸಗಿ ಎಂಜಿನಿಯರಿಂಗ್‌ ಕಾಲೇಜೊಂದರ ಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಸಂಬಂಧಿಸಿದ ಕಾಲೇಜು ವಿರುದ್ಧ ಸೂಕ್ತ ಕ್ರಮ ಜರಗಿಸಬೇಕೆಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ನಿರ್ದೇಶಿಸಿದೆ.

Advertisement

ತನ್ನ ವಿದ್ಯಾರ್ಥಿ ವೇತನದ (ಸ್ಕಾಲರ್‌ಶಿಪ್‌) ಹಣವನ್ನು ಟ್ಯೂಷನ್‌ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಂಡಿದ್ದ ಮೈಸೂರಿನ ಅಕಾಡೆಮಿ ಫಾರ್‌ ಟೆಕ್ನಿಕಲ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಕ್ರಮವನ್ನು ಆಕ್ಷೇಪಿಸಿ ವಿದ್ಯಾರ್ಥಿ ಆದಿತ್ಯ ದೀಪಕ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸೂಪರ್‌ನ್ಯೂಮರರಿ ಕೋಟಾ ಸೃಷ್ಟಿಸಿರುವುದೇ ದುರ್ಬಲ ವರ್ಗದವರಿಗೆ ಸಮಾನ ಅವಕಾಶಗಳನ್ನು ನೀಡುವುದು ಮತ್ತು ಅವರನ್ನು ರಕ್ಷಿಸುವುದಾಗಿದೆ. ಆದರೆ ಅದೇ ಕೋಟಾದಡಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗೆ ಟ್ಯೂಷನ್‌ ಶುಲ್ಕ ವಿಧಿಸಿದ್ದ ಕ್ರಮ ವ್ಯವಸ್ಥಿತ ತಾರತಮ್ಯದಿಂದ ಕೂಡಿದೆ ಎಂದು ಕಟುವಾಗಿ ಹೇಳಿ ವಿದ್ಯಾರ್ಥಿಗೆ ಶುಲ್ಕವನ್ನು ಹಿಂತಿರುಗಿಸಬೇಕು ಮತ್ತು ವಿದ್ಯಾರ್ಥಿ ಕೋರ್ಟ್‌ ಮೆಟ್ಟಿಲೇರುವಂತೆ ಮಾಡಿದ್ದಕ್ಕೆ ಒಂದು ಲಕ್ಷ ರೂ. ಠೇವಣಿ ಇಡಬೇಕೆಂದು ಕಾಲೇಜಿಗೆ ನಿರ್ದೇಶನ ನೀಡಿದೆ.

ಜತೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಆ ಕಾಲೇಜಿಗೆ ಶೋಕಾಸ್‌ ನೋಟಿಸ್‌ ನೀಡಬೇಕು ಮತ್ತು ಸೂಪರ್‌ನ್ಯೂಮರರಿ ಕೋಟಾದ ವಿದ್ಯಾರ್ಥಿಯಿಂದ ಅಕ್ರಮವಾಗಿ ಟ್ಯೂಷನ್‌ ಫೀ ಸಂಗ್ರಹ ಮಾಡಿದ್ದಕ್ಕಾಗಿ ಸೂಕ್ತ ಕ್ರಮ ಜರಗಿಸಬೇಕು ಎಂದೂ ನ್ಯಾಯಾಲಯ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next