ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ಇದನ್ನೂ ಓದಿ:ಪಲ್ಟಿಯಾದ ಗೇರುಬೀಜ ಸಾಗಾಟದ ಲಾರಿ: ರಸ್ತೆಯಲ್ಲಿ ಚೆಲ್ಲಿದ ಅಪಾರ ಪ್ರಮಾಣದ ಗೇರುಬೀಜ
ಮಂಗಳವಾರ (ಮೇ 30) ದೆಹಲಿ ಹೈಕೋರ್ಟ್ ನ ಏಕಸದಸ್ಯ ಪೀಠದ ನ್ಯಾಯಾಧೀಶರಾದ ದಿನೇಶ್ ಕುಮಾರ್ ಶರ್ಮಾ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಸಿಸೋಡಿಯಾ ವಿರುದ್ಧದ ಆರೋಪ ಗಂಭೀರವಾಗಿರುವುದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಜಾಮೀನು ಅರ್ಜಿ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಆದೇಶ ನೀಡುವ ವೇಳೆ, ಮನೀಶ್ ಸಿಸೋಡಿಯಾ ಪ್ರಭಾವಿ ವ್ಯಕ್ತಿಯಾಗಿದ್ದು, ಒಂದು ವೇಳೆ ಜಾಮೀನು ನೀಡಿದಲ್ಲಿ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಜಾಮೀನು ನೀಡಲು ನಿರಾಕರಿಸಿರುವ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಸೋಡಿಯಾ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿರುವುದಾಗಿ ಮೂಲಗಳು ಹೇಳಿವೆ.
ಅಬಕಾರಿ ನೀತಿ ಹಗರಣದ ಪ್ರಕರಣದ ಬಗ್ಗೆ ಸಿಬಿಐ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. ಅಲ್ಲದೇ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಜೂನ್ 1ರವರೆಗೆ ವಿಸ್ತರಿಸಿ ಕೋರ್ಟ್ ಆದೇಶ ನೀಡಿತ್ತು.