ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಚುನಾವಣಾ ಜಾಗೃತ ದಳದ ಅಧಿಕಾರಿ ನೀಡಿದ್ದ ದೂರು, ಆ ಸಂಬಂಧ ಕೋಣಾಜೆ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಹಾಗೂ ಬಂಟ್ವಾಳದ ಜೆಎಂಎಫ್ಸಿ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಪ್ರಭಾಕರ ಭಟ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಪ್ರಭಾಕರ್ ಭಟ್ ಪರ ವಾದ ಮಂಡಿಸಿದ ವಕೀಲ ಅರುಣ್ ಶ್ಯಾಂ, ದೂರು ದಾಖಲಿಸಿರುವ ಪೂಲೀಸರ ಕ್ರಮ ಹಲವು ಕಾನೂನು ನ್ಯೂನತೆಗಳಿಂದ ಕೂಡಿದೆ. ಪೊಲೀಸರು ಎಫ್ಐಆರ್‌ನಲ್ಲಿ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ದೂರು ದಾಖಲಿಸಿಕೊಳ್ಳುವ ಮೊದಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ.
ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಹಾಗೂ ಚಾರಿತ್ರ್ಯ ವಧೆಗಾಗಿ ನಡೆದ ಪ್ರಯತ್ನ ಹೀಗಾಗಿ, ರದ್ದುಗೊಳಿಸಬೇಕೆಂದು ಮನವಿ ಮಾಡಿದ್ದರು. ಈ ವಾದವನ್ನು ಮಾನ್ಯ ಮಾಡಿದ ನ್ಯಾಯಪೀಠ, ಪ್ರಭಾಕರ ಭಟ್ ಅವರ ವಿರುದ್ಧ ದಾಖಲಾಗಿದ್ದ ದೂರು ಆ ಸಂಬಂಧ ಸಲ್ಲಿಕೆಯಾಗಿದ್ದ ಚಾರ್ಜ್‌ಶೀಟ್ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆಯನ್ನು ರದ್ದುಗೊಳಿಸಿ ಆದೇಶಿಸಿತು.
ಪ್ರಕರಣವೇನು?: 2018ರ ಏ. 6ರಂದು ಪುಣ್ಯಕೋಟಿ ನಗರ ಕೈರಂಗಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಜಾಗೃತ ದಳದ ಅಧಿಕಾರಿ ಡಾ. ಎಸ್.ಟಿ. ಯೋಗೀಶ್ ಏ.8ರಂದು ಕೋಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.