ಹೊಸದಿಲ್ಲಿ: ದಿಲ್ಲಿ ಹೈಕೋರ್ಟ್ ಮಂಗಳವಾರ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರ ವಿಚ್ಛೇದನದ ಅರ್ಜಿಯನ್ನು ವಜಾಗೊಳಿಸಿದೆ. ಅವರ ಮನವಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ಪೀಠ ಹೇಳಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಸಚ್‌ದೇವ ಮತ್ತು ವಿಕಾಸ್ ಮಹಾಜನ್ ಅವರ ಪೀಠವು ಅಬ್ದುಲ್ಲಾಗೆ ವಿಚ್ಛೇದನವನ್ನು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.
ವಿಚಾರಣಾ ನ್ಯಾಯಾಲಯದ 2016 ರ ತೀರ್ಪಿನ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್, ಪ್ರಕರಣದಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ಹೇಳಿದೆ. ತನ್ನ ಮೇಲಿನ ಕ್ರೌರ್ಯವನ್ನು ಉಲ್ಲೇಖಿಸಿ ತನ್ನ ಪತ್ನಿ ಪಾಯಲ್ ರಿಂದ ಓಮರ್ ಅಬ್ದುಲ್ಲಾ ವಿಚ್ಛೇದನವನ್ನು ಕೋರಿದ್ದರು.
ಕ್ರೌರ್ಯದ ಆರೋಪಗಳು ಅಸ್ಪಷ್ಟವಾಗಿದ್ದು, ಮತ್ತು ಅದು ಸಾಬೀತಾಗಿಲ್ಲ ಎಂಬ ಕೌಟುಂಬಿಕ ನ್ಯಾಯಾಲಯದ ದೃಷ್ಟಿಕೋನದಲ್ಲಿ ನ್ಯಾಯಾಲಯವು ಯಾವುದೇ ದೋಷವನ್ನು ಕಂಡುಕೊಂಡಿಲ್ಲ.
ಕ್ರೌರ್ಯವೆಂದು ಪರಿಗಣಿಸಬಹುದಾದ ದೈಹಿಕ ಅಥವಾ ಮಾನಸಿಕ ಯಾವುದೇ ಕೃತ್ಯಗಳನ್ನು ಸಮರ್ಥಿಸಲು ಓಮರ್ ವಿಫಲರಾಗಿದ್ದಾರೆ ಎಂದು ತೀರ್ಪು ಒತ್ತಿಹೇಳಿತು. 2016 ರಲ್ಲಿ ವಿಚಾರಣಾ ನ್ಯಾಯಾಲಯವು ಓಮರ್ ಅಬ್ದುಲ್ಲಾ ಅವರ ವಿಚ್ಛೇದನದ ಮನವಿಯನ್ನು ತಿರಸ್ಕರಿಸಿತ್ತು.