Advertisement
ಚೌಗಲೆ ಶಿಕ್ಷಣ ಸಂಸ್ಥೆಗೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಪಿಯು ಕಾಲೇಜು ಕಟ್ಟಡ ನಿರ್ಮಾಣಕ್ಕೆ ನೀಡಿರುವ ಅನುಮತಿ ರದ್ದುಪಡಿಸಬೇಕೆಂದು ಸ್ಥಳೀಯ ನಿವಾಸಿ ಚಂದ್ರಶೇಖರ್ ಎಂ.ಅರಮನಿ ಹಾಗೂ ಇತರರು 2009ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಹಾಗೂ ನ್ಯಾ. ಎಂ.ಜಿ.ಎಸ್. ಕಮಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.
ಅಲ್ಲದೇ, 2018ರಲ್ಲಿ ಜಾರಿಗೆ ಬಂದಿರುವ “ಕರ್ನಾಟಕ ಪದವಿಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಪ್ರವೇಶ ಮತ್ತು ಅನುದಾನ) ತಿದ್ದುಪಡಿ ನಿಯಮಗಳು-2017′ ಪ್ರಕಾರ ಕಾಲೇಜುಗಳು ಸಲ್ಲಿಸಿದ ವರದಿ ಆಧರಿಸಿ ಪರಿಶೀಲನೆ ನಡೆಸುವ ಅವಕಾಶವಿದೆಯೇ, ಒಂದೊಮ್ಮೆ ಅವಕಾಶವಿದ್ದರೆ ವರದಿಗಳನ್ನು ಆಧರಿಸಿ ಕ್ರಮ ಕೈಗೊಳ್ಳಲು ನಿಯಮಗಳಲ್ಲಿ ಅವಕಾಶವಿದೆಯೇ ಎಂಬ ಬಗ್ಗೆಯೂ ವರದಿ ನೀಡುವಂತೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು. ಅರ್ಜಿಯಲ್ಲಿ ಪ್ರಶ್ನಿಸಲಾಗಿರುವ ಚೌಗಲೆ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ ಎಂದು ಕಾಲೇಜು ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಅಲ್ಲದೇ ಅರ್ಜಿಯಲ್ಲಿ ನಂತರ ಸೇರ್ಪಡೆಯಾದ ಬೆಂಗಳೂರಿನ ಮಾಡರ್ನ್ ಪಿಯು ಕಾಂಪೋಸಿಟ್ ಕಾಲೇಜು ಪರ ವಕೀಲ ಜಿ.ಆರ್. ಮೋಹನ್ ವಾದ ಮಂಡಿಸಿ, ನಮ್ಮ ಕಕ್ಷಿದಾರರ ಕಾಲೇಜು 2004ರಲ್ಲಿ ಸ್ಥಾಪನೆಗೊಂಡಿದೆ. ನಿಯಮಗಳು ಮೊದಲು 2006ರಲ್ಲಿ ಜಾರಿಗೆ ಬಂದು, ನಂತರ 2018ರಲ್ಲಿ ತಿದ್ದುಪಡಿಗೊಂಡಿವೆ. ನಿಯಮಗಳು ಜಾರಿಗೆ ಬರುವ ಮುನ್ನ ನಮ್ಮ ಕಾಲೇಜು ಸ್ಥಾಪನೆಗೊಂಡಿರುವುದರಿಂದ ಹೊಸ ನಿಯಮಗಳು ನಮ್ಮ ಕಕ್ಷಿದಾದರಿಗೆ ಅನ್ವಯವಾಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಈ ಎರಡೂ ವಿಚಾರಗಳನ್ನು ನ್ಯಾಯಪೀಠ ದಾಖಲಿಸಿಕೊಂಡಿತು.