Advertisement

ಮರೆಯಾಗಿದೆ ವಿಷು ದಿನ ಹೊಟ್ಟು ಸುಡುವ ಕ್ರಮ

06:15 AM Apr 15, 2018 | |

ಕುಂದಾಪುರ: ವರ್ಷವಿಡೀ ಸುಖ ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಸಂಕೇತವಾಗಿ “ವಿಷು’ ಹಬ್ಬ ಆಚರಣೆ ನಡೆಯುತ್ತದೆ. ಧಾನ್ಯಗಳು, ಬೆಳೆಗಳನ್ನು ದೇವರ ಎದುರು (ಕಣಿ) ಇಟ್ಟು, ಅದನ್ನು ಬೆಳಗ್ಗೆಯೇ ನೋಡಿ, ಹೊಸ ಬಟ್ಟೆ ತೊಟ್ಟು ಹಿರಿಯರ ಆಶೀರ್ವಾದ ಪಡೆವ ಸಂಪ್ರದಾಯವಿದೆ. 

Advertisement

ಇದರಿಂದ ಆಯುರಾರೋಗ್ಯ, ಐಶ್ವರ್ಯಗಳ ಸಮೃದ್ಧಿಗಳೊಂದಿಗೆ ಇಡೀ ವರ್ಷ ಸಂತೋಷದಾಯಕರಾಗುತ್ತಾರೆ ಎಂಬುದು ನಂಬಿಕೆ. ಕುಂದಾಪುರ ಭಾಗದಲ್ಲಿ ಬೇಸಾಯದ ಪ್ರಮುಖ ಭಾಗವಾಗಿ ಹೊಟ್ಟು ಸುಡುವ ಕ್ರಮ ಹಿಂದೆ  ಇತ್ತು. ಗೇಣಿ ನೀಡುತ್ತಿದ್ದ ಅಂದಿನ ಕಾಲದಲ್ಲಿ ಈ ಕ್ರಮ ಪಾಲಿಸಲಾಗುತ್ತಿತ್ತು. ಅದನ್ನು ಅಂಪಾರಿನ ಸುಶೀಲಾ ಶೆಟ್ಟಿ ನೆನಪಿಸಿದ್ದಾರೆ. 

ಸಣ್ಣಕ್ಕಿ ಗೇಣಿ 
ಸಣ್ಣಕ್ಕಿ ಗೇಣಿ ಅಂದರೆ ವರ್ಷಕ್ಕೆ ಒಂದೇ ಬೆಳೆ, ಒಂದು ಮುಡಿ ಗದ್ದೆಗೆ ಎರಡು ಮುಡಿ ಅಕ್ಕಿಯನ್ನು ಗೇಣಿ ರೂಪದಲ್ಲಿ ಭೂ ಮಾಲಕನಿಗೆ ಕೊಡಬೇಕು.

ಕಂಚಿ ಗೇಣಿ
ಕಂಚಿಗೇಣಿ ಅಂದರೆ ವರ್ಷಕ್ಕೆ ಎರಡು ಬೆಳೆ ಬೆಳೆಯುವ ಗದ್ದೆ. ಇಲ್ಲಿ ಪ್ರತೀ ಮುಡಿ ಗೆದ್ದೆಗೆ ಮೂರು ಮುಡಿ ಅಕ್ಕಿಯನ್ನು ಗೇಣಿ ರೂಪದಲ್ಲಿ ಕೊಡಬೇಕು. ಈಚೆಗಷ್ಟೇ ನಗದು, ಹಣದ ವ್ಯವಹಾರ ಬಂದಿದ್ದು ಹಿಂದೆಲ್ಲ ಅಕ್ಕಿ, ಭತ್ತದ ವ್ಯವಹಾರವೇ ನಡೆಯುತ್ತಿತ್ತು. 

ಹೊಟ್ಟು ಸುಡುವುದು
ಸೌರಮಾನ ಯುಗಾದಿ ಸಂದರ್ಭ ಗದ್ದೆಗೆ “ಹೊಟ್ಟು’ ಸುಡುವುರಿಂದ ಗೇಣಿ ಒಪ್ಪಂದ ಪ್ರಾರಂಭ ಆಗುತ್ತದೆ. ಗೇಣಿಗೆ ಸಂಬಂಧಿಸಿದ ಯಾವುದೇ ರೀತಿಯ ಭಿನ್ನಾ°ಭಿಪ್ರಾಯಗಳಿದ್ದರೂ ಈ ಯುಗಾದಿ ಹಬ್ಬದ ಒಳಗೆ ನಿವಾರಿಸಿಕೊಳ್ಳಬೇಕು. ಒಮ್ಮೆ ಹೊಟ್ಟು ಸುಟ್ಟ ನಂತರ ಆ ವರ್ಷದ ಬೇಸಾಯ ಅವನೇ ಮಾಡಬೇಕು. ಇದು ಅಂದು ಪಾಲಿಸುತ್ತಿದ್ದ ನಿಯಮ. 

Advertisement

ಸುಡುವುದು ಹೇಗೆ 
ವಿಶಾಲವಾದ ಗದ್ದೆಯಲ್ಲಿ  ಒಣಬೈಹುಲ್ಲಿನ ಸಣ್ಣ ಸಣ್ಣ ಕಟ್ಟುಗಳನ್ನು ಚೆಂಡುಗಳಾಗಿ ಪರಿವರ್ತಿಸಿ ಇಡುವುದು. ಅದರ ಮೇಲೆ ಭತ್ತದ ಹೊಟ್ಟು ಸುರಿಯುತ್ತಾರೆ. ಬಳಿಕ ಅದಕ್ಕೆ ಬೆಂಕಿ ಹಾಕುತ್ತಾರೆ. ಹಾಗೆ ಬೆಂಕಿ ಹಾಕುವ ಮುನ್ನ ಎರಡು ಚೆಂಡುಗಳ ಮಧ್ಯೆ ಒಂದು ಮುಷ್ಟಿ ಗೊಬ್ಬರವನ್ನು ಹಾಕುತ್ತಾರೆ. 

ಇದಾದ ಮೇಲೆ ಎತ್ತು ಗದ್ದೆಗಿಳಿಸಿ ಉಳುವ ಕ್ರಮ ಇತ್ತು. ಯುಗಾದಿಯಂದು “ಹೊಟ್ಟು ಸುಡುವ ಕ್ರಿಯೆ’ಗೆ “ಆರ್‌ ಹೂಡೂದು’ಎಂದು ಕೂಡ ಕರೆಯುತ್ತಾರೆ. “ಉಳುವವನೆ ಹೊಲದೊಡೆಯ’ ಕಾನೂನು ಬಂದ ಅನಂತರವೂ ಕೆಲವು ಕಡೆ “ಮನೆಯ ಒಕ್ಕಲು ಮನೆಯವರು ಜೋಡು ಎತ್ತು ತಂದು ಒಡೆಯರ ಎದುರಿನಲ್ಲಿ ಆರು ಹೂಡುವ ಸಂಪ್ರದಾಯ ಪೂರೈಸಿಕೊಡು ತ್ತಿದ್ದರು. ಈಗ ಆ ಒಕ್ಕಲ ಮನೆಯಲ್ಲಿಯೇ ಜೋಡು ಎತ್ತು ಇರದ ಕಾರಣದಿಂದಲೂ “ಆರು ಹೂಡುವ’ ಕ್ರಮ ನಿಂತಿದೆ. 

ಮರೆಯಾದ ಆಚರಣೆ 
ಹಿಂದೆಲ್ಲಾ ಬೇಸಾಯ ಮಾಡುವಾಗ ಎಲ್ಲ ಕಡೆ   ಆಚರಣೆ ತುಳುನಾಡಿನಲ್ಲೂ ಇತ್ತು. ಈಗ ಗದ್ದೆಗಳೆಲ್ಲಾ ತೋಟಗಳಾಗಿ ಪರಿವರ್ತನೆ ಯಾದ ಕಾರಣ ಹೊಟ್ಟು ಸುಡುವ ಕ್ರಮ ಕೂಡ ಜನರ ಮನದಿಂದ ಮರೆಯಾಗುತ್ತಿದೆ. 
–  ಸುಶೀಲಾ ಶೆಟ್ಟಿ ಅಂಪಾರು

– ಲಕ್ಷ್ಮೀ ಮಚ್ಚಿನ 

Advertisement

Udayavani is now on Telegram. Click here to join our channel and stay updated with the latest news.

Next