Advertisement

ಕನ್ನಡ ಶಾಲೆಯಲ್ಲೂ ಹೈಟೆಕ್‌ ಶೈಕ್ಷಣಿಕ ಕ್ರಾಂತಿ ಅಗತ್ಯ

05:28 PM Jan 02, 2024 | Team Udayavani |

ಉದಯವಾಣಿ ಸಮಾಚಾರ
ಹಿರೇಕೆರೂರ: ಸಮುದಾಯ ಹಾಗೂ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಅನೇಕ ಸರ್ಕಾರಿ ಶಾಲೆಗಳು ಉತ್ತಮ ಬೆಳವಣಿಗೆ ಕಾಣುತ್ತಿವೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಪಾಲಕರು ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌. ಶ್ರೀಧರ ಹೇಳಿದರು.

Advertisement

ಪಟ್ಟಣದ ಶಾಸಕರ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 1977-78 ರಿಂದ 1985-86 ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಕೊಡಮಾಡಿದ ಟಿ.ವಿ. ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಮಾಧ್ಯಮ ಶಾಲೆಗಳಲ್ಲೂ ಹೈಟೆಕ್‌ ಶಿಕ್ಷಣದ ಕ್ರಾಂತಿಯಾಗಬೇಕು. ದೃಶ್ಯ ಮಾಧ್ಯಮದಿಂದ ಮಕ್ಕಳ ಕಲಿಕೆಯಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಶಾಲೆಯಲ್ಲಿ ಅತಿ ಬಡತನದಲ್ಲಿ ಕಲಿತು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಹಳೆಯ ವಿದ್ಯಾರ್ಥಿಗಳು ಕೂಡಿಕೊಂಡು ತಾವು ಕಲಿತ ತಮ್ಮೂರ ಶಾಲೆಗೆ ಏನಾದರೂ ಕಾಣಿಕೆ ಕೊಡಬೇಕೆಂಬ ಉದ್ದೇಶದಿಂದ 36 ಸಾವಿರ ರೂ. ಮೊತ್ತದ ಟಿ.ವಿ. ಕಾಣಿಕೆಯಾಗಿ ನೀಡಿದ್ದಾರೆ. ಅವರ ಈ ಸೇವಾ ಮನೋಭಾವನೆ ಮುಂದಿನ ಪೀಳಿಗೆಗೂ ಅನುಕರಣೀಯವಾಗಿದೆ ಎಂದರು.

ಮಕ್ಕಳ ಕಲಿಕೆಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಜತೆಗೆ ಇಂತಹ ಹಳೆಯ ವಿದ್ಯಾರ್ಥಿಗಳ ನೆರವು ಕೂಡ ಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಬೆಳೆಯಲು ದೃಶ್ಯ ಮಾಧ್ಯಮಗಳು ಬಹಳ ಪೂರಕವಾಗಿವೆ. ಮಕ್ಕಳು ಈ ದೂರದರ್ಶನದಲ್ಲಿ ಬರುವ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಲಿತ ಶಾಲೆ, ಶಿಕ್ಷಕರಿಗೆ, ಪಾಲಕರಿಗೆ ಹೆಸರು ತಂದುಕೊಡಬೇಕೆಂದರು.

ಮುಖ್ಯೋಪಾಧ್ಯಾಯ ಎಂ.ಆರ್‌. ಕಮ್ಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳಾದ ಎಸ್‌. ಆರ್‌. ಮುರ್ಡ್ವೇಶ್ವರ, ವಿಠಲ ಡಾಂಗೆ ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದರು. ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲಕೃಷ್ಣ ಬಾದಾಮಿ ಅಧ್ಯಕ್ಷತೆ ವಹಿಸಿದ್ದರು.

Advertisement

ಕ್ಷೇತ್ರ ಸಮನ್ವಯಾಧಿಕಾರಿ ಎನ್‌. ಸುರೇಶಕುಮಾರ, ಸಂಪನ್ಮೂಲ ವ್ಯಕ್ತಿ ದಾದಾಪೀರ ನರಗುಂದ, ಶಾಲಾ ಸುಧಾರಣಾ ಸಮಿತಿ ಉಪಾಧ್ಯಕ್ಷೆ ಶ್ವೇತಾ ಮಾರವಳ್ಳಿ, ಸದಸ್ಯರಾದ ರಾಜೇಶ್ವರಿ ಅಜ್ಜಪ್ಪನವರ, ಸತೀಶ ಕೋರಿಗೌಡ್ರ ಸೇರಿದಂತೆ ಹಳೆಯ ವಿದ್ಯಾರ್ಥಿಗಳಾದ ವೆಂಕಟೇಶ ಉಪ್ಪಾರ, ಮಹೇಶ ಮಡಿವಾಳರ, ವಿನಾಯಕ ಟಿ., ವಿಜಯಕುಮಾರ ಹಳಕಟ್ಟಿ, ರವಿ ಚಿಂದಿ, ಕುಮಾರ ಅರ್ಕಾಚಾರಿ, ಜಗದೀಶ ಹೊನ್ನತ್ತಿ, ಶಾಲಾ ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು. ಶಿವಾನಂದ ಅಣ್ಣಯ್ಯನವರ ಸ್ವಾಗತಿಸಿ, ಎಂ.ವೈ.ದಾಳಿ ನಿರೂಪಿಸಿ, ವೆಂಕಟೇಶ ಕೊರಚರ ವಂದಿಸಿದರು. ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next