Advertisement

ಹೆಟ್‌ಮೇಯರ್‌ ಆಕರ್ಷಕ ಶತಕ ವಿಂಡೀಸ್‌ನ 3 ರನ್‌ ರೋಜಕ ಗೆಲುವು

06:35 AM Jul 27, 2018 | Team Udayavani |

ಪ್ರೊವಿಡೆನ್ಸ್‌: ಶಿಮ್ರಾನ್‌ ಹೆಟ್‌ಮೇಯರ್‌ ಅವರ ಆಕರ್ಷಕ ಶತಕ ಮತ್ತು ಕೊನೆಕ್ಷಣದಲ್ಲಿ ಬಿಗು ದಾಳಿ ಸಂಘಟಿಸಿದ್ದರಿಂದ ವೆಸ್ಟ್‌ಇಂಡೀಸ್‌ ತಂಡವು ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಮೂರು ರನ್ನುಗಳ ರೋಚಕ ಜಯ ಕಾಣುವಂತಾಯಿತು. ಈ ಗೆಲುವಿನಿಂದ ಮೂರು ಪಂದ್ಯಗಳ ಸರಣಿ 1-1ರಿಂದ ಸಮಬಲದಲ್ಲಿ ನಿಂತಿದೆ.

Advertisement

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್‌ ತಂಡವು ಹೆಟ್‌ಮೇಯರ್‌ ಅವರ ಸಾಹಸದ ಬ್ಯಾಟಿಂಗಿನಿಂದಾಗಿ 49.3 ಓವರ್‌ಗಳಲ್ಲಿ 271 ರನ್‌ ಗಳಿಸಿ ಆಲೌಟಾಯಿತು. ಇದಕ್ಕುತ್ತರವಾಗಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಬಾಂಗ್ಲಾದೇಶ ಸರಣಿ ಗೆಲುವಿನತ್ತ ಸಾಗಿತ್ತು. ಆದರೆ ಅಂತಿಮ ಓವರಿನಲ್ಲಿ ಅನುಭವಿ ಮುಶ್ಫಿಕರ್‌ ರಹೀಮ್‌ ಅವರನ್ನು ಕಳೆದುಕೊಂಡ ಬಾಂಗ್ಲಾ ಅಂತಿಮವಾಗಿ 3 ರನ್ನಿನಿಂದ ಪಂದ್ಯ ಕಳೆದುಕೊಂಡು ನಿರಾಶೆ ಅನುಭವಿಸಿತು.

ಅಂತಿಮ ಓವರ್‌ ಗೆಲುವಿಗೆ 7 ರನ್‌
ಅಂತಿಮ ಓವರಿನಲ್ಲಿ ಬಾಂಗ್ಲಾ ಗೆಲುವಿನ 7 ರನ್‌ ಬೇಕಾಗಿತ್ತು. ಆದರೆ ಜಾಸನ್‌ ಹೋಲ್ಡರ್‌ ಕೇವಲ ನಾಲ್ಕು ರನ್‌ ಬಿಟ್ಟುಕೊಟ್ಟು ವಿಂಡೀಸ್‌ನ ಸ್ಮರಣೀಯ ಗೆಲುವಿಗೆ ಕಾರಣರಾದರು. ಇತ್ತೀಚೆಗಿನ ದಿನಗಳಲ್ಲಿ ಇದು ನಾಯಕ ಹೋಲ್ಡರ್‌ ಅವರ ಶ್ರೇಷ್ಠ ಅಂತಿಮ ಓವರ್‌ ದಾಳಿಗಳಲ್ಲಿ ಒಂದಾಗಿದೆ. ಮೊದಲ ಏಸತದಲ್ಲಿ ಹೋಲ್ಡರ್‌ ಅನುಭವಿ ಮುಶ್ಫಿಕರ್‌ ರಹೀಮ್‌ ಅವರ ವಿಕೆಟನ್ನು ಹಾರಿಸಿದ್ದರು. ಮುಂದಿನ ಐದು ಎಸೆತಗಳಲ್ಲಿ ಮೊಸಡೆಕ್‌ ಹೊಸೇನ್‌ ಮು¤ ಮುಶ್ರಫೆ ಮೊರ್ತಜ ಕೇವಲ 4 ರನ್‌ ತೆಗೆಯಲಷ್ಟೇ ಶಕ್ತರಾದರು. ಹೋಲ್ಡರ್‌ ಆರಂಭದ 9 ಓವರ್‌ಗಳಲ್ಲಿ 62 ರನ್‌ ಬಿಟ್ಟುಕೊಟ್ಟಿದ್ದರು.

ಅಗ್ರ ಕ್ರಮಾಂಕದ ಐವರು ಆಟಗಾರರು ಉತ್ತಮ ಆಟ ಪ್ರದರ್ಶಿಸಿದ್ದರಿಂದ ಬಾಂಗ್ಲಾದೇಶ ಗೆಲುವಿನ ಉತ್ಸಾಹದಲ್ಲಿತ್ತು. ಇವರಲ್ಲಿ ಆರಂಭಿಕ ತಮಿಮ್‌ ಇಕ್ಬಾಲ್‌, ಶಕಿಬ್‌ ಅಲ್‌ ಹಸನ್‌ ಮತ್ತು ಮುಶ್ಫಿಕರ್‌ ರಹೀಮ್‌ ಅರ್ಧಶತಕ ದಾಖಲಿಸಿದ್ದರು. 68 ರನ್‌ ಗಳಿಸಿದ ಮುಶ್ಫಿಕರ್‌ ಅಂತಿಮ ಓವರ್‌ನಲ್ಲಿ ಔಟಾದ ಕಾರಣ ಬಾಂಗ್ಲಾ ಒತ್ತಡಕ್ಕೆ ಸಿಲುಕಿತು.

ಹೆಟ್‌ಮೇಯರ್‌ ಶತಕ
ವಿಂಡೀಸ್‌ನ ಆರಂಭ ಉತ್ತಮವಾಗಿರಲಿಲ್ಲ. ಕ್ರಿಸ್‌ ಗೇಲ್‌ ತಂಡದಲ್ಲಿದ್ದರೂ ಸ್ಫೋಟಕ ಆಟ ಅವರಿಂದ ಬಂದಿಲ್ಲ. 14ನೇ ಓವರಿನಲ್ಲಿ ಗೇಲ್‌ ಔಟ್‌ ಆದಾಗ ತಂಡ ಕೇವಲ 55 ರನ್‌ ಗಳಿಸಿ ಒದ್ದಾಡುತ್ತಿತ್ತು. ಹೆಟ್‌ಮೇಯರ್‌ ಮತ್ತು ಪೊವೆಲ್‌ ಅವರು ಒಂಟಿ ರನ್‌ ಗಳಿಸುವುದರತ್ತ ಹೆಚ್ಚಿನ ಗಮನ ಹರಿಸಿದರು. 20ರಿಂದ 30ರ ನಡುವಣ ಓವರ್‌ ವೇಳೆ ವಿಂಡೀಸ್‌ ಕೇವಲ ಒಂದು ಬೌಂಡರಿ ಬಾರಿಸಿತ್ತು. ಆಬಳಿಕ ಹೆಟ್‌ಮೇಯರ್‌ ಸಿಡಿಯಲು ಮುಂದಾದರು. ಇದರಿಂದಾಗಿ ವಿಂಡೀಸ್‌ ಉತ್ತಮ ಮೊತ್ತ ಪೇರಿಸುವಂತಾಯಿತು. 93 ಎಸೆತ ಎದುರಿಸಿದ ಅವರು 3 ಬೌಂಡರಿ ಮತ್ತು 7 ಸಿಕ್ಸರ್‌ ನೆರವಿನಿಂದ 125 ರನ್‌ ಗಳಿಸಿ ಕೊನೆಯವರಾಗಿ ಔಟಾದರು.

Advertisement

ಸಂಕ್ಷಿಪ್ತ ಸ್ಕೋರು: ವೆಸ್ಟ್‌ಇಂಡೀಸ್‌ (49.3 ಓವರ್‌ಗಳಲ್ಲಿ 271 (ಕ್ರಿಸ್‌ ಗೇಲ್‌ 29, ಹೋಪ್‌ 25, ಹೆಟ್‌ಮೇಯರ್‌ 125, ಪೊವೆಲ್‌ 44, ಮುಶ್ಫಿಕರ್‌ ರೆಹಮಾನ್‌ 44ಕ್ಕೆ 2, ಶಕಿಬ್‌ 45ಕ್ಕೆ 2, ರುಬೆಲ್‌ ಹೊಸೇನ್‌ 61ಕ್ಕೆ 3); ಬಾಂಗ್ಲಾದೇಶ (50 ಓವರ್‌ಗಳಲ್ಲಿ 268 (ತಮಿಮ್‌ ಇಕ್ಬಾಲ್‌ 54, ಅನಾಮುಲ್‌ ಹಕ್‌ 23, ಶಕಿಬ್‌ ಅಲ್‌ ಹಸನ್‌ 56,  ಮುಶ್ಫಿಕರ್‌ ರಹೀಮ್‌ 68, ಮಹಮುದುಲ್ಲ 39). ಶ್ರಿಮ್ರಾನ್‌ ಹೆಟ್‌ಮೇಯರ್‌ ಪಂದ್ಯಶ್ರೇಷ್ಠ.

Advertisement

Udayavani is now on Telegram. Click here to join our channel and stay updated with the latest news.

Next