Advertisement

ತಮ್ಮದೇ ನಿರ್ಧಾರ ಜಾರಿಗೆ ಹಿಂದೇಟು

10:07 AM May 31, 2018 | Team Udayavani |

ಬೆಂಗಳೂರು: “ಜಾಲಹಳ್ಳಿ ಕ್ರಾಸ್‌ ಮೂಲಕ ಖಾಸಗಿ ಬಸ್‌ಗಳ ಕಾರ್ಯಾಚರಣೆ ನಿಷೇಧ’ಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆ ಹೊರಡಿಸಿರುವ ಅಧಿಸೂಚನೆಗೆ ಅಧಿಕೃತ ಮಾನ್ಯತೆ ನೀಡಲು ಸ್ವತಃ ಪೊಲೀಸ್‌ ಅಧಿಕಾರಿಗಳೇ ಹಿಂದೇಟು ಹಾಕುತ್ತಿದ್ದಾರೆ.

Advertisement

ಬೆಂಗಳೂರಿನಿಂದ ನೆಲಮಂಗಲ ಮಾರ್ಗವಾಗಿ ವಿವಿಧ ಸ್ಥಳಗಳಿಗೆ ತೆರಳುವ ಖಾಸಗಿ ಕಾಂಟ್ರ್ಯಾಕ್ಟ್ ಕ್ಯಾರೇಜ್‌ ಬಸ್‌ಗಳು ಜಾಲಹಳ್ಳಿ ಕ್ರಾಸ್‌ ಮೂಲಕ ಕಾರ್ಯಾಚರಣೆ ಮಾಡುವುದನ್ನು ನಿಷೇಧಿಸಿದ್ದು, ಗೊರಗುಂಟೆಪಾಳ್ಯದಿಂದ ಕಡ್ಡಾಯವಾಗಿ ಫ್ಲೈಓವರ್‌ ಮೂಲಕವೇ ಸಾಗಬೇಕು ಎಂದು ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ಕುಮಾರ್‌ ಆದೇಶಿಸಿ, ಎರಡೂವರೆ ತಿಂಗಳ ಹಿಂದೆಯೇ ಅಧಿಸೂಚನೆ ಹೊರಡಿಸಿದ್ದಾರೆ. ಆದರೆ ಆಯುಕ್ತರ ಅಧೀನ ಅಧಿಕಾರಿಗಳು, “ಈ ಆದೇಶವೇ ಕಾನೂನುಬಾಹಿರವಾಗಿದ್ದು, ಹೀಗೆ ಕಡ್ಡಾಯಗೊಳಿಸಿ ಆದೇಶ ಮಾಡುವುದು ಸೂಕ್ತವಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ! ಈ ಸಂಬಂಧ ಕೆಎಸ್‌ ಆರ್‌ಟಿಸಿಗೆ ಪತ್ರ ಕೂಡ ಬರೆದಿದ್ದಾರೆ. ಈ ಮೂಲಕ ಅಧಿಸೂಚನೆಯು ರಾಜ್ಯಪತ್ರದಲ್ಲಿ ಸೇರ್ಪಡೆಗೊಳ್ಳುವ ನಿರೀಕ್ಷೆಗಳು ಕಮರಿದ್ದು, ಇದು ನಿಗಮದ ನಿದ್ದೆಗೆಡಿಸಿದೆ.

ಖಾಸಗಿ ಬಸ್‌ಗಳಿಗೆ ಉತ್ತೇಜನ: ಈ ವ್ಯತಿರಿಕ್ತ ಹೇಳಿಕೆ ಒಂದೆಡೆ ಖಾಸಗಿ ಬಸ್‌ಗಳ ಹಾವಳಿಗೆ ಮತ್ತಷ್ಟು ಉತ್ತೇಜನ ನೀಡಿದಂತಾದರೆ, ಮತ್ತೂಂದೆಡೆ ಕೆಎಸ್‌ ಆರ್‌ಟಿಸಿ ಆದಾಯ ಖೋತಾಕ್ಕೆ ಕಾರಣವಾಗುತ್ತಿದೆ. ಸುಮಾರು 60 ಬಸ್‌ಗಳು ಪೀಣ್ಯ ಬಸವೇಶ್ವರ ಬಸ್‌ ನಿಲ್ದಾಣದಿಂದಲೇ ಕಾರ್ಯಾಚರಣೆ ಮಾಡಿದರೆ, ಉಳಿದ ಸುಮಾರು 950 ಬಸ್‌ಗಳು ಮೆಜೆಸ್ಟಿಕ್‌ನಿಂದ ಜಾಲಹಳ್ಳಿ ಕ್ರಾಸ್‌ ಮೂಲಕ ಹಾದುಹೋಗುತ್ತವೆ.  ಆದರೆ, ಸರ್ಕಾರಿ ಬಸ್‌ಗಳು ಬರುವ ಮೊದಲೇ ಖಾಸಗಿ ಬಸ್‌ಗಳು ಅಲ್ಲಿನ ಪ್ರಯಾಣಿಕರನ್ನು ಕೊಂಡೊಯ್ಯುತ್ತಿವೆ. ಇದರಿಂದ ನಿಗಮಕ್ಕೆ ನಿತ್ಯ ಲಕ್ಷಾಂತರ ರೂ. ನಷ್ಟವಾಗುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಅಲವತ್ತುಕೊಂಡಿದ್ದಾರೆ.

ಮಾರ್ಚ್‌ನಲ್ಲಿ ಅಧಿಸೂಚನೆ: ಜಾಲಹಳ್ಳಿ ಕ್ರಾಸ್‌ ಮಾರ್ಗದಲ್ಲಾಗುತ್ತಿರುವ ಸಂಚಾರದಟ್ಟಣೆ ಮತ್ತು ಖಾಸಗಿ ಬಸ್‌ಗಳ ಹಾವಳಿಗೆ ಕಡಿವಾಣ ಹಾಕಲು ಪೊಲೀಸ್‌ ಆಯುಕ್ತರು, ಬೆಂಗಳೂರಿನಿಂದ ನೆಲ ಮಂಗಲ ಮಾರ್ಗವಾಗಿ ವಿವಿಧ ಸ್ಥಳಗಳಿಗೆ ತೆರಳುವ ಖಾಸಗಿ ಬಸ್‌ಗಳು ಕಡ್ಡಾಯವಾಗಿ ಫ್ಲೈಓವರ್‌ ಮೂಲಕವೇ ಕಾರ್ಯಾಚರಣೆ ಮಾಡಬೇಕು ಎಂದು
ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಿದ್ದರು. ಆದರೆ, ಇದು ಶಾಶ್ವತ ಸ್ವರೂಪ ಪಡೆದುಕೊಳ್ಳಲು ರಾಜ್ಯಪತ್ರದಲ್ಲಿ ಸೇರ್ಪಡೆಗೊಳ್ಳುವುದು ಅತ್ಯಗತ್ಯ. ಆದ್ದರಿಂದ ಕೆಎಸ್‌ ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು, “ಅಧಿಸೂಚನೆಯನ್ನು ರಾಜ್ಯಪತ್ರಕ್ಕೆ ಸೇರ್ಪಡೆ ಮಾಡುವಂತಗೆ ಪೊಲೀಸ್‌ ಇಲಾಖೆಗೆ ಪತ್ರ ಬರೆದರು.

ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆ ಅಧಿಕಾರಿಗಳು, “ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವಾಹನವು ಟೋಲ್‌ ಮುಖಾಂತರ ಹೋಗಬೇಕೆ ಅಥವಾ ಟೋಲ್‌ರಹಿತ ರಸ್ತೆಯಲ್ಲಿ ಸಂಚರಿಸಬೇಕೆ ಎಂಬುದನ್ನು ನಿರ್ಧರಿಸಲು ಸರ್ವಸ್ವತಂತ್ರ. ಈ ಹಿನ್ನೆಲೆಯಲ್ಲಿ ಫ್ಲೈಓವರ್‌ ಮೂಲಕವೇ ಹೋಗುವಂತೆ ಕಡ್ಡಾಯಗೊಳಿಸಿ ಆದೇಶಿಸುವುದು ಕಾನೂಬಾಹಿರ’ ಎಂದು ತಿಳಿಸಿದ್ದಾರೆ.  

Advertisement

ಟೋಲ್‌ ವಿನಾಯ್ತಿ ಕೊಡಿಸಿದ್ರೆ ರೆಡಿ 
ಹಾಗೊಂದು ವೇಳೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಚರ್ಚಿಸಿ, ಈ ಖಾಸಗಿ ಬಸ್‌ಗಳಿಗೆ ಟೋಲ್‌ ಪಾವತಿಯಿಂದ ವಿನಾಯ್ತಿ ನೀಡುವುದಾದರೆ, ಈ ಬಗ್ಗೆ ಮರುಪರಿಶೀಲಿಸಲು ಪೊಲೀಸ್‌ ಸಂಚಾರ ವಿಭಾಗವು ಸಿದ್ಧವಿದೆ’ ಎಂದು ಸಮಜಾಯಿಷಿಯನ್ನೂ ಪೊಲೀಸ್‌ ಸಂಚಾರ ವಿಭಾಗದ ಅಧಿಕಾರಿಗಳು ನಿಗಮಕ್ಕೆ ತಿಳಿಸಿದ್ದಾರೆ. ಈ ಸಂಬಂಧದ ಪತ್ರ “ಉದಯವಾಣಿ’ಗೆ ಲಭ್ಯವಾಗಿದೆ.

ಪೀಣ್ಯ, ಜಾಲಹಳ್ಳಿ ಕ್ರಾಸ್‌ ಮಾರ್ಗದುದ್ದಕ್ಕೂ ಸುಮಾರು 7ರಿಂದ 8 ಖಾಸಗಿ ಟ್ರಾವೆಲ್‌ ಏಜೆನ್ಸಿಗಳಿವೆ. ಅಲ್ಲೆಲ್ಲಾ ಖಾಸಗಿಯವರದ್ದೇ ಹಾವಳಿ. ಇದಕ್ಕಿಂತ ಹೆಚ್ಚಾಗಿ ಅಲ್ಲಿನ ಕೆಎಸ್‌ಆರ್‌ ಟಿಸಿ ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು
ಈ ಖಾಸಗಿ ಟ್ರಾವೆಲ್‌ ಏಜೆನ್ಸಿಗಳು ತಡೆದು, ತಮ್ಮ ಬಸ್‌ಗಳಲ್ಲಿ ಕೊಂಡೊಯ್ಯುತ್ತಾರೆ. ಪೀಣ್ಯ ಮಾರ್ಗದಲ್ಲೇ ನಿತ್ಯ 8ರಿಂದ 10 ಸಾವಿರ ಜನ ಪ್ರಯಾಣಿಸುತ್ತಿದ್ದು, ಅಂದಾಜು 10ರಿಂದ 15 ಲಕ್ಷ ರೂ. ನಿಗಮಕ್ಕೆ ನಷ್ಟವಾಗಲಿದೆ. ಜತೆಗೆ ಸಾಕಷ್ಟು ಸಂಚಾರದಟ್ಟಣೆ ಉಂಟಾಗುತ್ತದೆ. ಹಬ್ಬಗಳು, ಸಾಲು -ಸಾಲು ರಜೆ ಸಂದರ್ಭಗಳಲ್ಲಿ ವಾಹನಗಳದಟ್ಟಣೆಯಿಂದ ಜನ ಪರದಾಡುತ್ತಾರೆ.

ಈ ಎಲ್ಲ ಹಿನ್ನೆಲೆಯಲ್ಲಿ ಖಾಸಗಿ ಬಸ್‌ ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ಆದರೆ, ಈ ವ್ಯತಿರಿಕ್ತ ಆದೇಶ ಗೊಂದಲ ಉಂಟುಮಾಡಿದೆ ಎಂದು ಕೆಎಸ್‌ಆರ್‌ಟಿಸಿಯ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಅಸಹಾಯಕತೆ
ವ್ಯಕ್ತಪಡಿಸಿದರು. 

ಖಾಸಗಿ ಬಸ್‌ ಹೊರಹಾಕಿ; ಮಾನವಹಕ್ಕು ಆಯೋಗ
ಖಾಸಗಿ ಬಸ್‌ಗಳಿಂದ ಮೆಜೆಸ್ಟಿಕ್‌ ಸುತ್ತಮುತ್ತ ದಟ್ಟಣೆ ಉಂಟಾಗುವುದರ ಜತೆಗೆ ವಾಯುಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಆದ್ದರಿಂದ ಖಾಸಗಿ ಬಸ್‌ಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಬೇಕು ಎಂದು ರಾಜ್ಯ ಮಾನವಹಕ್ಕುಗಳ ಆಯೋಗ ತಿಳಿಸಿದೆ.

ಮೆಜೆಸ್ಟಿಕ್‌ ಸುತ್ತಮುತ್ತ ಆಗುತ್ತಿರುವ ವಾಯು ಮಾಲಿನ್ಯ ಮತ್ತು ಸಂಚಾರದಟ್ಟಣೆಯಿಂದ ಕಿರಿಕಿರಿ ಆಗುತ್ತಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಆಯೋಗದ ಕೆಲವರು ಮೊರೆಹೋಗಿದ್ದರು. ಇದಕ್ಕೆ ಸ್ಪಂದಿಸಿದ ಆಯೋಗವು, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ಸ್ಥಳಾಂತರಕ್ಕೆ ಸೂಚಿಸಿತ್ತು. ಇದಕ್ಕೆ ಲಿಖೀತವಾಗಿ ಸ್ಪಷ್ಟನೆ ನೀಡಿದ ಕೆಎಸ್‌ಆರ್‌ಟಿಸಿ, “ತಾವು ಸ್ಥಳಾಂತರಕ್ಕೆ ಸಿದ್ಧವಾಗಿದ್ದು, ಈ ಹಿಂದೆಯೇ ಪೀಣ್ಯಕ್ಕೆ ಆ ಮಾರ್ಗದ ಬಸ್‌ಗಳನ್ನು
ಸ್ಥಳಾಂತರಿಸಲಾಗಿತ್ತು. ಆದರೆ, ಖಾಸಗಿ ಬಸ್‌ಗಳು ಮಾತ್ರ ಮೆಜೆಸ್ಟಿಕ್‌ನಿಂದಲೇ ಕಾರ್ಯಾಚರಣೆ ಮಾಡುತ್ತಿದ್ದವು. ಇದರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಯಿತು’ ಎಂದು ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಆಯೋಗ, ಖಾಸಗಿ ಬಸ್‌ಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಕ್ಕೆ ಸಂಬಂಧಪಟ್ಟ ಇಲಾಖೆಗೆ ಸೂಚಿಸುವಂತೆ ಮತ್ತೆ ಕೆಎಸ್‌ಆರ್‌ಟಿಸಿ ಪತ್ರ ಬರೆದಿದ್ದು, ಅದರಂತೆ ನಿಗಮವು ಪೊಲೀಸ್‌ ಇಲಾಖೆಗೆ ಮನವಿ ಮಾಡಿದೆ.

 ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next