Advertisement

ಪಾರಂಪರಿಕ ಸ್ಥಾನಮಾನದ “ರವೀಂದ್ರ ಕಲಾಭವನ’ಕ್ಕೆ ಹೊಸತನದ ಸ್ಪರ್ಶ

03:51 PM Feb 24, 2017 | |

ಹಂಪನಕಟ್ಟೆ: ಒಂದೂವರೆ ಶತಮಾನದ ಇತಿಹಾಸ ಹೊಂದಿರುವ ಇಲ್ಲಿನ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿಗೆ ಈಗಾಗಲೇ ಪಾರಂಪರಿಕ ಸ್ಥಾನಮಾನ ದೊರೆತಿದ್ದು, ಇದರ ರವೀಂದ್ರ ಕಲಾಭವನಕ್ಕೆ ಯುಜಿಸಿ ಯಿಂದ ದೊರಕುವ 1.83 ಕೋ.ರೂ.  ಹಾಗೂ ಮಂಗಳೂರು ವಿವಿಯ 67 ಲಕ್ಷ ರೂ. ಅನುದಾನ ಸಹಿತ ಒಟ್ಟು 2.50 ಕೋ.ರೂ ವೆಚ್ಚದಲ್ಲಿ ಪುನಸ್ಥಾಪನಾ  ಯೋಜನೆ ಕಾಮಗಾರಿಗೆ  ಚಾಲನೆ ದೊರಕಿದೆ. ಇದರಲ್ಲಿ 1.25 ಕೋ.ರೂ.ಗಳನ್ನು ಈಗಾಗಲೇ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದ್ದು, ಮುಂದಿನ 10 ತಿಂಗಳಿ ನೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Advertisement

ಕುಲಪತಿ ಪ್ರೊ| ಕೆ. ಭೈರಪ್ಪ  ನೇತೃತ್ವ ದಲ್ಲಿ,   ಪ್ರಾಂಶುಪಾಲ ಡಾ| ಉದಯ್‌ ಕುಮಾರ್‌  ಸಹಿತ ಇತರ ಪ್ರಮುಖರ ಉಪಸ್ಥಿತಿಯಲ್ಲಿ ರಚಿಸಲಾದ ಸಮಿತಿ ಯಲ್ಲಿ  ಕಾರ್ಯ ಯೋಜನೆ ಸಿದ್ಧ ಪಡಿಸಿ, ಹೊಸದಿಲ್ಲಿಯ ಪಾರಂಪರಿಕ ವಿಭಾಗಕ್ಕೆ ಕಳುಹಿಸಿ ಅಲ್ಲಿಂದ ಒಪ್ಪಿಗೆ ಪಡೆದು ಕಾಮಗಾರಿಗೆ ಚಾಲನೆ ನೀಡಲಾಗಿದೆ. 

ಮೂಲಸ್ವರೂಪ ಉಳಿಕೆ
ಈ ಕಾಲೇಜು 1868ರಲ್ಲಿ ಆರಂಭವಾ ಗಿದ್ದು, 1905ರಲ್ಲಿ ಅಕಾಡೆಮಿ ಹಾಲ್‌ (ಈಗಿನ ರವೀಂದ್ರ ಕಲಾಭವನ) ನಿರ್ಮಾಣವಾಯಿತು. 1922ರಲ್ಲಿ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕವಿ ರವೀಂದ್ರ ನಾಥ ಠಾಗೋರ್‌ ಅವರು ಕಾಲೇಜಿಗೆ ಭೇಟಿ ನೀಡಿ, ಕವಿತೆ ವಾಚಿಸಿದ್ದರು. 

1996ರಲ್ಲಿ ನವೀಕರಣ ನಡೆಸಿದ ಸಂದರ್ಭ ಸಭಾಂಗಣಕ್ಕೆ “ರವೀಂದ್ರ ಕಲಾಭವನ’ ಎಂದು ನಾಮಕರಣ ಮಾಡಲಾಯಿತು.  ಇದರ ವಾಸ್ತು ವಿನ್ಯಾಸ ಆಕರ್ಷಕವಾಗಿದ್ದು, ಆ ಕಾಲದ ಸ್ಥಳೀಯ ಮರಗಳ ಕೆತ್ತನೆ ಕಂಬಗಳು, ಹೆಂಚು ಇಟ್ಟಿಗೆಗಳನ್ನು ಕಲಾತ್ಮಕ ವಾಗಿ ಬಳಸಲಾಗಿದೆ.  ಒಳಗಿನ ವಿನ್ಯಾಸವೂ ಆತ್ಯಾಕರ್ಷಕವಾಗಿದೆ.  ಪುನಸ್ಥಾಪನ ಕಾಮಗಾರಿ  ಸಂದರ್ಭ ಕಲಾಭವನದ ಮೂಲಸ್ವರೂಪಕ್ಕೆ  ಧಕ್ಕೆಯಾಗದಂತೆ ಅತ್ಯಂತ ಎಚ್ಚರಿಕೆ ವಹಿಸಲಾಗುತ್ತಿದ್ದು, ಹೊಸತನದ ಸ್ಪರ್ಶ ನೀಡಲು ಪೂರಕ ವ್ಯವಸ್ಥೆ ಮಾಡಲಾಗುತ್ತದೆ. 

ಮಂಗಳೂರು ವಿ.ವಿ. ಕಾಲೇಜು ಆರಂಭದ ಹಾದಿ
1ರಿಂದ 10ನೇ ತರಗತಿಯ ಶಿಕ್ಷಣ ಸಂಸ್ಥೆಯನ್ನು  ಸ್ಥಾಪಿಸಲು ಬ್ರಿಟಿಷ್‌ ಸರಕಾರವು  ಸ್ಥಳೀಯ ಸಮಿತಿಯೊಂದಕ್ಕೆ 1866ರಲ್ಲಿ ಅನುಮತಿ ನೀಡಿತ್ತು. ದಾನಿಗಳಿಂದ ಆ ಕಾಲಕ್ಕೆ  65,000 ಸಂಗ್ರಹ ಮಾಡಿ, 1868ರಲ್ಲಿ ಈ ಕಾಲೇಜು ಆರಂಭವಾಯಿತು. 1879ರಲ್ಲಿ ಪದವಿ ಆರಂಭಿಸಲು ಅನುಮತಿ ದೊರೆಯಿತು. ಪ್ರೊವಿನ್ಶಿಯಲ್‌ ಹೆಸರಿನ ಸಂಸ್ಥೆ “ಸರಕಾರಿ ಕಾಲೇಜು’ ಎಂದಾಯಿತು. ಆಗ  ಇಲ್ಲಿ ಬ್ರಿಟಿಷರೇ  ಪ್ರಾಂಶುಪಾಲರಾಗಿದ್ದರು. 1902ರಲ್ಲಿ ವಿದ್ಯಾರ್ಥಿನಿಯರಿಗೆ ಪ್ರವೇಶಾವಕಾಶ ನೀಡಲಾಯಿತು. 1948ರಲ್ಲಿ  ಪ್ರಥಮ ದರ್ಜೆ ಗೌರವ ಪಾತ್ರವಾಯಿತು. 1958ರಲ್ಲಿ ಮೈಸೂರು ವಿ.ವಿ.ಗೆ ಸೇರ್ಪಡೆಯಾಗಿ, ಈಗ ಮಂಗಳೂರು ವಿ.ವಿ.ಗೆ ಸೇರಿದೆ. 1992ರಲ್ಲಿ  ಯುನಿವರ್ಸಿಟಿ ಕಾಲೇಜು ಆಗಿ ಬದಲಾಯಿತು.

Advertisement

ಮೂಲ ಸ್ವರೂಪ ಬದಲಾವಣೆ ಇಲ್ಲ
ರವೀಂದ್ರ ಕಲಾಭವನದ ಮೂಲ ಸ್ವರೂಪವನ್ನು ಸ್ವಲ್ಪವೂ ಬದಲಾವಣೆ ಮಾಡದೆ ಪುನಸ್ಥಾಪನಾ ಕಾಮಗಾರಿ ಕೈಗೊಳ್ಳಲಾಗುವುದು. ಒಟ್ಟು 2.50 ಕೋ.ರೂ. ವೆಚ್ಚದಲ್ಲಿ ಇದರ ಕಾಮಗಾರಿ ನಡೆಯಲಿದ್ದು,  ಮೇಲ್ಛಾವಣಿ  ತೆಗೆಯುವ ಕೆಲಸ 1 ತಿಂಗಳೊಳಗೆ ಪೂರ್ಣವಾಗಲಿದೆ.

–  ಡಾ| ಉದಯ್‌ ಕುಮಾರ್‌, ಪ್ರಾಂಶುಪಾಲರು, ಮಂಗಳೂರು ವಿ.ವಿ.ಕಾಲೇಜು

– ದಿನೇಶ್‌ ಇರಾ
 

Advertisement

Udayavani is now on Telegram. Click here to join our channel and stay updated with the latest news.

Next