Advertisement
ಹೊಂಡದ ರಸ್ತೆರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ಪ್ರಗತಿಯಲ್ಲಿದೆ. ಬಸ್ರೂರು ಮೂರು ಕೈಯಿಂದ ಸಂಗಮ್ ವರೆಗೆ ಕಾಮಗಾರಿಯೇ ನಡೆಯದೇ ರಸ್ತೆಯಲ್ಲಿ ಹೊಂಡ ಬಿದ್ದಿದೆ. ವಾಹನ ಸವಾರರು ಇದು ರಾಷ್ಟ್ರೀಯ ಹೆದ್ದಾರಿಯೋ ಗ್ರಾಮಾಂತರ ರಸ್ತೆಯೋ ಎಂದು ಅನುಮಾನಪಟ್ಟು ಸಾಗುವಂತಾಗಿದೆ. ಅಲ್ಲಲ್ಲಿ ಬಿದ್ದ ಹೊಂಡಗಳಿಂದಾಗಿ ವಾಹನದಲ್ಲಿ ಕುಳಿತವರ ಮೂಳೆಗಳ ಲೆಕ್ಕವೂ ತೆಗೆಯುವಂತಾಗಿದೆ. ಈಗಷ್ಟೇ ತೇಪೆ ಕಾಮಗಾರಿ ಆರಂಭವಾಗಿದ್ದು ಅದು ಶಾಶ್ವತ ಪರಿಹಾರದಂತೆ ಕಾಣಿಸುತ್ತಿಲ್ಲ. ಇದೆಲ್ಲ ದಾಟಿ ಮುಂದೆ ಸಾಗಿದರೆ ಹಳೆ ಸೇತುವೆ ಇದಿರಾಗುತ್ತದೆ. ಇಲ್ಲಿ ಹೊಸದಾಗಿ ಸೇತುವೆ ರಚನೆಯಾಗಿದ್ದರೂ ಇನ್ನೂ ಲೋಕಾರ್ಪಣೆಯಾಗಿಲ್ಲ. ಜನತೆಗೆ ಉಪಯೋಗಕ್ಕೆ ದೊರೆತಿಲ್ಲ.
ಅಂಡರ್ ಪಾಸ್
ಜನರ ಬಹುಕಾಲದ ಬೇಡಿಕೆ ನಂತರ ಈ ಸೇತುವೆಯ ಬಳಿಕ ಅಂಡರ್ ಪಾಸ್ ಒಂದನ್ನು ನಿರ್ಮಿಸಲಾಗಿದೆ. ಇದನ್ನೂ ಜನತೆಗೆ ಉಪಯೋಗಕ್ಕೆ ಬಿಟ್ಟುಕೊಟ್ಟಿಲ್ಲ. ಆದರೆ ನಿರ್ಮಾಣ ಹಂತದ ಕಾಮಗಾರಿ ಜನರಲ್ಲಿ ಮಳೆಗಾಲದಲ್ಲಿ ಒಂದಷ್ಟು ಭೀತಿಯನ್ನು ಎದುರಿಸುತ್ತಿದೆ. ಕಾಮಗಾರಿ ನಿರ್ಮಾಣದ ವೇಳೆ ಬೇಸಗೆಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ನ ಸಮಸ್ಯೆ ಉಂಟಾಗಿ ಜನತೆ ಪ್ರತಿಭಟನೆ ನಡೆಸಿದ ಬಳಿಕ ಸರಿಪಡಿಸಿಕೊಡಲಾಗಿತ್ತು. ಅಂಡರ್ ಪಾಸ್ ಆರಂಭವಾಗುವಲ್ಲಿಂದ ಹೇರಿಕುದ್ರುವಿಗೆ ಹೋಗುವ ರಸ್ತೆ ಕೂಡಾ ಕಾಮಗಾರಿಯ ಮಣ್ಣಿನಿಂದ ಆವೃತವಾಗಿದೆ. ಜತೆಗೆ ರಸ್ತೆ ತಿರುಗಿದಲ್ಲಿ ಮಳೆಯಿಂದಾಗಿ ಅಂಡರ್ ಪಾಸ್ ಗೆ ಕಟ್ಟಿದ ಗೋಡೆಯಿಂದ ಜಲ್ಲಿ, ಮಣ್ಣು ಹೊರಗೆ ಸುರಿಯಲಾರಂಭಿಸಿದೆ. ಹಾಗಾಗಿ ಈ ಪ್ರದೇಶದಲ್ಲಿ ಸಂಚರಿಸುವ ವಾಹನ ಸವಾರರು, ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಕಾಮಗಾರಿಗಾಗಿ ಕಬ್ಬಿನಧ ಬಲೆ ಅಳವಡಿಸಿ ಅದರ ಮೇಲೆ ಜಲ್ಲಿಯನ್ನು ಪದರಗಳಂತೆ ಹಾಕಲಾಗಿದೆ. ಅದರ ಮೇಲೆ ಮಣ್ಣು ಹಾಕಲಾಗಿದೆ. ಮಳೆಗೆ ಮಣ್ಣು ಅಥವಾ ಜಲ್ಲಿ ಹೋದಲ್ಲಿ ಅಂಡರ್ ಪಾಸ್ ಕಾಮಗಾರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ತತ್ ಕ್ಷಣ ಈ ಕುರಿತು ಗಮನ ಹರಿಸಿ ಪರ್ಯಾಯ ಪರಿಹಾರ ಹುಡುಕಬೇಕಿದೆ. ಇಲ್ಲದಿದ್ದರೆ ಕಾಮಗಾರಿಗೆ ಅಪಾಯ ಮಾತ್ರವಲ್ಲ ಈ ಭಾಗದ ರಸ್ತೆಗೂ ಸಂಚಕಾರ. ವಾಹನಗಳೇ ಓಡಾಡದಂತೆ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆಯೂ ಇದೆ. ಜತೆಗೆ ರಸ್ತೆಯ ಮಣ್ಣು ಕೂಡಾ ಮಳೆ ನೀರಿಗೆ ಮಣ್ಣು ಹೋಗುತ್ತಿದೆ. ರಸ್ತೆಗೆ ಕಂಟಕ ಬಂದಿದೆ. ಮಳೆಗಾಲವಾದ್ದರಿಂದ ಕಾಮಗಾರಿ ಮಾಡಲು ಅಸಾಧ್ಯವಾಗಿದ್ದು ತುರ್ತು ಕಾಮಗಾರಿ ಮೂಲಕ ಅಪಾಯ ತಡೆಗಟ್ಟಬೇಕಿದೆ. ಬೇಗ ಪೂರೈಸಿ
ಎಷ್ಟು ವರ್ಷಗಳಿಂದ ಕಾಮಗಾರಿ ಮಾಡುತ್ತಿದ್ದರೂ ಇನ್ನೂ ಮುಗಿಸಿಲ್ಲ ಎನ್ನುತ್ತಾರೆ ಸ್ಥಳೀಯರು. ವಿಳಂಬಗತಿಯ ಕಾಮಗಾರಿಯಿಂದಾಗಿ ಅದೆಷ್ಟೋ ತೊಂದರೆಗಳಾಗುತ್ತಿವೆ. ಇಲ್ಲೇ ಪಕ್ಕದಲ್ಲಿ ಶ್ರದ್ಧಾ ಕೇಂದ್ರವೂ ಒಂದು ಇದ್ದು ಭಕ್ತರು ಕಾಣಿಕೆ ಸಂದಾಯ ಮಾಡಲು ವಾಹನಗಳನ್ನು ನಿಲ್ಲಿಸುತ್ತಾರೆ. ಇತ್ತ ಅಪೂರ್ಣ ಕಾಮಗಾರಿಯಿಂದಾಗಿ ವಾಹನಗಳ ಸರಾಗ ಓಡಾಟಕ್ಕೆ ತೊಂದರೆಯಾಗುತ್ತಿದೆ.
Related Articles
ಕಾಮಗಾರಿ ಸಮಸ್ಯೆ ಕುರಿತು ಸಂಸದರು ಗುತ್ತಿಗೆದಾರ ಸಂಸ್ಥೆಯವರಿಗೆ ಸೂಚನೆ ನೀಡಿದ್ದಾರೆ. ಮಳೆಗಾಲವಾದ ಕಾರಣ ಕಾಮಗಾರಿ ನಡೆಯುತ್ತಿಲ್ಲ. ಉಳಿದಂತೆ ಈ ಭಾಗದ ಜನರ ಬೇಡಿಕೆಗೆ ಗುತ್ತಿಗೆದಾರ ಸಂಸ್ಥೆ ಸ್ಪಂದಿಸಿದೆ.
– ಸುನಿಲ್ ಶೆಟ್ಟಿ, ಹೇರಿಕುದ್ರು
Advertisement