Advertisement

STAR ಸಿನಿಮಾಗಳು ರಿಲೀಸ್‌ಗೆ ರೆಡಿ.. ದ್ವಿತೀಯಾರ್ಧದಲ್ಲಿ ಪುಟಿದೇಳುವುದೇ ಸ್ಯಾಂಡಲ್‌ ವುಡ್?

06:08 PM May 23, 2024 | Team Udayavani |

ಬೆಂಗಳೂರು: ಸದ್ಯ ಮಾಲಿವುಡ್‌ ಬಿಟ್ಟರೆ ಇತರೆ ಚಿತ್ರರಂಗ ಮಂಕಾಗಿದೆ. ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌ ಹಾಗೂ ಸ್ಯಾಂಡಲ್‌ ವುಡ್‌ ನಲ್ಲಿ ಕೈ ಲೆಕ್ಕದ್ದಷ್ಟು ಸಿನಿಮಾಗಳು ಮಾತ್ರ ರಿಲೀಸ್‌ ಆಗುತ್ತಿದೆ. ಈ ಸಿನಿಮಾಗಳ ಪೈಕಿ ಹೆಚ್ಚು ದಿನ ನೆನಪಾಗಿ ಉಳಿಯುವ ಚಿತ್ರಗಳು ಕಾಣಸಿಗುವುದು ಕಡಿಮೆ.

Advertisement

ಒಳ್ಳೆಯ ಸಿನಿಮಾಗಳಿಲ್ಲದ ಕಾರಣಕ್ಕೆ ತೆಲಂಗಾಣದಲ್ಲಿ ಸಿಂಗಲ್‌ ಥಿಯೇಟರ್‌ ಗಳು ಬಂದ್‌ ಆಗಿವೆ. ಇತ್ತ ಕರ್ನಾಟಕದಲ್ಲೂ ಸ್ಟಾರ್‌ ನಟರ ಸಿನಿಮಾಗಳಿಗೆಯೇ ಹೆಚ್ಚು ಬೇಡಿಕೆ ಇರುವುದರಿಂದ ಹೊಸ ಪ್ರಯೋಗತ್ಮಕ ಚಿತ್ರಗಳನ್ನು ನೋಡಲು ಜನ್‌ ಥಿಯೇಟರ್‌ ನತ್ತ ಬರುತ್ತಿಲ್ಲ.

ಇತ್ತೀಚೆಗಿನ ವರ್ಷಗಳಲ್ಲಿ ʼಕೆಜಿಎಫ್‌ʼ(1,2) ʼವಿಕ್ರಾಂತ್‌ ರೋಣʼ , ʼಕಾಂತಾರʼ, ʼಕಾಟೇರʼ ದಂತಹ ಸಿನಿಮಾಗಳ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ಕನ್ನಡ ಚಿತ್ರರಂಗ ಸದ್ದು ಮಾಡಿತ್ತು. ಕನ್ನಡದ ಸಿನಿಮಾಗಳು ಇತರೆ ಭಾಷೆಗೆ ಡಬ್‌ ಆಗಿ ತೆರೆಕಂಡಿತ್ತು. ಇನ್ನೇನು ಕನ್ನಡ ಸಿನಿಮಾರಂಗದತ್ತ ಎಲ್ಲರೂ ತಿರುಗಿ ನೋಡುತ್ತಾರೆ ಎನ್ನುವಾಗಲೇ ಆಕಾಶದಿಂದ ಒಮ್ಮೆಗೆ ಕೆಳಗೆ ಬಿದ್ದ ಸ್ಥಿತಿಗೆ ಮತ್ತೆ ಕನ್ನಡ ಚಿತ್ರರಂಗ ಬಂದಿದೆ.

2022 ರಲ್ಲಿ ಒಂದಷ್ಟು ಒಳ್ಳೆಯ ಸಿನಿಮಾಗಳು ಬಂದರೆ 2023 ರಲ್ಲಿ ʼಕಾಟೇರʼ ಸದ್ದೇ ಹೆಚ್ಚಾಗಿತ್ತು. 2024ರಲ್ಲಿ ಕನ್ನಡದ ಚಿತ್ರಗಳು ಕಮಾಲ್‌ ಮಾಡಬಹುದೆನ್ನುವ ನಿರೀಕ್ಷೆಗಳಿತ್ತು. ಆದರೆ ಈ ನಿರೀಕ್ಷೆಯಲ್ಲೇ ಹತ್ರ ಹತ್ರ 6 ತಿಂಗಳು ಕಳೆಯುತ್ತಾ ಬಂದಿದೆ. ಇದುವರೆಗೆ ರಿಲೀಸ್‌ ಆಗಿರುವ ಚಿತ್ರಗಳಿಗೆ ಪ್ರೇಕ್ಷಕರ ಪ್ರತಿಕ್ರಿಯೆ ಭಾರೀ ನಿರಾಶೆಯನ್ನು ಮೂಡಿಸಿದೆ.

ಹಾಗಂತ ಒಳ್ಳೆಯ ಸಿನಿಮಾಗಳು ಬಂದಿಲ್ಲ ಅಂತಿಲ್ಲ. ಸ್ಟಾರ್‌ ನಟರ ಸಿನಿಮಾಗಳು ಬಂದಿಲ್ಲ ಅಷ್ಟೇ. ಆದರೆ ಉತ್ತಮ ಕಂಟೆಂಟ್‌ ವುಳ್ಳ ʼಬ್ಲಿಂಕ್‌ʼ, ಶಾಖಾಹಾರಿʼ ಯಂತಹ ಸಿನಿಮಾಗಳನ್ನು ಜನ ಥಿಯೇಟರ್‌ಗೆ ಬಂದು ನೋಡದೆ ಇರುವುದು ಕೂಡ ವಿಪರ್ಯಾಸವೇ ಸರಿ. ಇಂತಹ ಸಿನಿಮಾಗಳು ಓಟಿಟಿಗೆ ಬಂದರೆ ಅಲ್ಲಿ ಒಂದಷ್ಟು ಜನರಿಗೆ ಇಷ್ಟವಾಗುತ್ತದೆ.

Advertisement

ಮಾಲಿವುಡ್‌ ಚಿತ್ರರಂಗ ಕಳೆದ 5 ತಿಂಗಳಿನಲ್ಲಿ 1000 ಕೋಟಿ ಗಳಿಕೆಯನ್ನು ಕಂಡಿದೆ. ಇತ್ತ ಸ್ಯಾಂಡಲ್‌ ವುಡ್‌ ನಲ್ಲಿ ಬಂದ ಸಿನಿಮಾಗಳು ಎಲ್ಲವೂ ಸೇರಿದರೂ 100 ಕೋಟಿಯೂ ಆಗಿಲ್ಲ. ಹಾಗಾಂತ ಕನ್ನಡ ಸಿನಿಮಾಗಳನ್ನು ನಾವು ಪೂರ್ತಿಯಾಗಿ ಅಲ್ಲಗಳೆಯುವಂತಿಲ್ಲ. ಏಕೆಂದರೆ ಎರಡು ಮೂರು ವರ್ಷಗಳ ಹಿಂದಷ್ಟೇ ಇಡೀ ಸಿನಿಮಾರಂಗವೇ ಕನ್ನಡ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡಿದ್ದು ಇದೇ ನಮ್ಮ ಚಂದನವನ.

ಈ ವರ್ಷದ ಮೊದಲಾರ್ಧ ಬಹುತೇಕ ಮುಗಿದಿದೆ. ಇನ್ನೇನಿದ್ದರೂ ದ್ವಿತೀಯಾರ್ಧದ ಮೇಲೆಯೇ ನಿರೀಕ್ಷೆಗಳಿವೆ. ದ್ವಿತೀಯಾರ್ಧದಲ್ಲಿ ರಿಲೀಸ್‌ ಆಗಲಿರುವ ಬಹುತೇಕ ಸಿನಿಮಾಗಳು ಸ್ಟಾರ್‌ ನಟರ ಸಿನಿಮಾಗಳೇ ಎನ್ನುವುದು ವಿಶೇಷ. ಈ ಸಿನಿಮಾಗಳೆಲ್ಲ ಸೇರಿ 1000 ಕೋಟಿ ಗಳಿಸಿದ್ದರೂ ಅಚ್ಚರಿ ಏನಿಲ್ಲ. ಹಾಗಾದರೆ ಬನ್ನಿ ಯಾವೆಲ್ಲಾ ಸಿನಿಮಾಗಳು ಮುಂದಿನ 6 ತಿಂಗಳಿನಲ್ಲಿ ತೆರೆ ಕಾಣಲಿದೆ ಎನ್ನುವುದನ್ನು ನೋಡಿಕೊಂಡು ಬರೋಣ..

ಮಾರ್ಟಿ,ನ್‌ ,ಕೆಡಿ, ಮೇಲಿದೆ ಬಹು ನಿರೀಕ್ಷೆ: ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ 2021 ರಲ್ಲಿ ʼಪೊಗರುʼ ಸಿನಿಮಾ ಮಾಡಿದ್ದರು. ಪ್ಯಾನ್‌ ಇಂಡಿಯಾ ಲೆವೆಲ್‌ ನಲ್ಲಿ ಸದ್ದು ಮಾಡುತ್ತದೆ ಎನ್ನಲಾಗಿದ್ದ ಸಿನಿಮಾ ರಿಲೀಸ್‌ ಬಳಿಕ ಜನರಿಂದ ಅಷ್ಟಾಗಿ ಪಾಸಿಟಿವ್‌ ರೆಸ್ಪಾನ್ಸ್‌ ಪಡೆದುಕೊಂಡಿಲ್ಲ. ಈ ಸಿನಿಮಾದ ಬಳಿಕ ಧ್ರುವ ಮತ್ತೆ ಕಂಬ್ಯಾಕ್‌ ಮಾಡುವ ಪ್ರಯತ್ನದಲ್ಲಿದ್ದಾರೆ. ಹಾಗಾಗಿ ಪ್ಯಾನ್‌ ಇಂಡಿಯಾ ಮಟ್ಟದಲ್ಲೇ ಮುಂದಿನ ಸಿನಿಮಾಕ್ಕೆ ತಯಾರಿ ನಡೆಸಿಕೊಂಡು ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

ʼಅದ್ಧೂರಿʼ ಬಳಿಕ ಎ.ಪಿ ಅರ್ಜುನ್‌ ಜೊತೆ ಕೈಜೋಡಿಸಿರುವ ಧ್ರುವ ಸರ್ಜಾ ʼಮಾರ್ಟಿನ್‌ʼ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ಆರ್ಭಟಿಸಲಿದ್ದಾರೆ.  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವರ್ಷದ ಆರಂಭದಲ್ಲೇ ಸಿನಿಮಾ ರಿಲೀಸ್‌ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಮುಂದೂಡಿಕೆ ಆಗುತ್ತಲೇ ಬಂದಿದೆ. ಈ ವರ್ಷದಲ್ಲೇ ಸಿನಿಮಾ ರಿಲೀಸ್‌ ಆಗುವುದು ಬಹುತೇಕ ಖಚಿತವಾಗಿದೆ.

ಇನ್ನು ಧ್ರುವ ಸರ್ಜಾ – ಜೋಗಿ ಪ್ರೇಮ್‌ ಅವರ ʼಕೆಡಿʼ ಸಿನಿಮಾ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಅನೌನ್ಸ್‌ ದಿನದಿಂದ ದೊಡ್ಡಮಟ್ಟದಲ್ಲೇ ಸದ್ದು ಮಾಡಿದೆ. ಪ್ಯಾನ್‌ ಇಂಡಿಯಾದಲ್ಲಿ ಬರುತ್ತಿರುವ ಈ ಸಿನಿಮಾಕ್ಕೆ ಕೆವಿಎನ್‌ ಪ್ರೊಡಕ್ಷನ್‌ ಬಂಡವಾಳ ಹಾಕುತ್ತಿದೆ. ಇದೇ ವರ್ಷದಲ್ಲಿ ಈ ಸಿನಿಮಾ ತೆರೆ ಕಾಣಲಿದೆ.

ಕಿಚ್ಚನ ʼಮ್ಯಾಕ್ಸ್‌ʼ ಮೇಲೆ ಎಲ್ಲರ ಕಣ್ಣು.. ಇನ್ನು ʼವಿಕ್ರಾಂತ್‌ ರೋಣʼ ಬಳಿಕ ಕಥೆಗಳ ಆಯ್ಕೆಗೆ ಒಂದಷ್ಟು ಗ್ಯಾಪ್‌ ಪಡೆದುಕೊಂಡು, ಕ್ರಿಕೆಟ್‌, ಬಿಗ್‌ ಬಾಸ್‌ ನಲ್ಲಿ ಬ್ಯುಸಿಯಾಗಿದ್ದ ಕಿಚ್ಚ. ʼಮ್ಯಾಕ್ಸ್‌ʼ ಸಿನಿಮಾವನ್ನು ಅನೌನ್ಸ್‌ ಮಾಡಿದ್ದರು. ತಮಿಳು ನಿರ್ದೇಶಕ ವಿಜಯ್‌ ಕಾರ್ತಿಕೇಯ ಆಕ್ಷನ್‌ ಕಟ್‌ ಹೇಳಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಪ್ಯಾನ್‌ ಇಂಡಿಯಾ ಸಿನಿಮಾ ಇದಾಗಿದೆ. ಇದೇ ವರ್ಷದಲ್ಲಿ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆಯಿದ್ದು, ಸ್ಯಾಂಡಲ್‌ ವುಡ್‌ ನಲ್ಲಿ ಕಮಾಲ್‌ ಮಾಡುವ ಸಾಧ್ಯತೆಯಿದೆ.

ಸಿನಿಮಾದಲ್ಲಿ ಕಿಚ್ಚ ಪೊಲೀಸ್‌ ಅಧಿಕಾರಿಯಾಗಿ ಮಿಂಚಲಿದ್ದಾರೆ ಎನ್ನಲಾಗಿದೆ.

ʼಕಾಟೇರʼ ಬಳಿಕ ʼಡೆವಿಲ್‌ʼ ಆದ ದರ್ಶನ್:‌ ಇನ್ನು ಡಿಬಾಸ್‌ ದರ್ಶನ್‌ ಅವರ ʼಕಾಟೇರʼ ಸಿನಿಮಾದ ಯಶಸ್ಸು ಸ್ಯಾಂಡಲ್‌ ವುಡ್‌ ಗೆ ಬೂಸ್ಟ್‌ ಆಗಿತ್ತು. ಕೋಟಿ ಕೋಟಿ ಗಳಿಕೆ ಕಾಣುವ ಮೂಲಕ ದರ್ಶನ್‌ ಮತ್ತೆ ಬಾಕ್ಸ್‌ ಆಫೀಸ್‌ ಸುಲ್ತಾನ್‌ ಆಗಿ ಮೆರೆದಾಡಿದ್ದರು.  ದೊಡ್ಡ ಹಿಟ್‌ ಬಳಿಕ ದರ್ಶನ್‌ ಮತ್ತೊಂದು ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ. ಅದಕ್ಕೆ ʼಡೆವಿಲ್‌ʼ ಎನ್ನುವ ಟೈಟಲ್‌ ಇಡಲಾಗಿದೆ. ದಸರಾ ಹಬ್ಬಕ್ಕೆ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆಯಿತ್ತು. ಆದರೆ ಇದೀಗ ಸಿನಿಮಾ ಡಿಸೆಂಬರ್‌ ತಿಂಗಳಿನಲ್ಲಿ ರಿಲೀಸ್‌ ಮಾಡುವುದಾಗಿ ಅಧಿಕೃತವಾಗಿ ಹೇಳಲಾಗಿದೆ.

ʼತಾರಕ್‌ʼ ನಿರ್ದೇಶನ ಮಾಡಿದ್ದ ಪ್ರಕಾಶ್‌ ವೀರ್‌ ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿರುವ ʼಡೆವಿಲ್‌ʼ  ಕ್ರಿಸ್ಮಸ್‌ ಹಬ್ಬಕ್ಕೆ ತೆರೆ ಕಾಣಲಿದೆ.

ಉಪ್ಪಿ ಬ್ಯಾಕ್‌ ಟು ಡೈರೆಕ್ಷನ್‌: ಹಿಸ್ಟರಿ ಕ್ರಿಯೇಟ್‌ ಮಾಡುತ್ತಾ ʼಯುಐʼ:

ಸ್ಟಾರ್‌ ಸಿನಿಮಾಗಳ ಪೈಕಿ ಬಹುತೇಕ ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ಸಿನಿಮಾವೆಂದರೆ ಅದು ಉಪೇಂದ್ರ ನಿರ್ದೇಶನದ ʼಯುಐʼ ಸಿನಿಮಾ.  ಉಪೇಂದ್ರ ಅವರ ನಿರ್ದೇಶನದ ಸಿನಿಮಾದ ಹೇಳೋದೆ ಬೇಡ. ಅವರು ನಿರ್ದೇಶನ ಮಾಡುವ ಸಿನಿಮಾಗಳಿಗೆ ನೋಡುಗರ ಪ್ರತ್ಯೇಕ ವರ್ಗವೇ ಇರುತ್ತದೆ.  ಇತ್ತೀಚೆಗೆ ಅವರ ʼಎʼ ಸಿನಿಮಾ ರೀ ರಿಲೀಸ್‌ ಆಗಿತ್ತು.

ಈಗಾಗಲೇ ಪೋಸ್ಟರ್‌, ಟೀಸರ್‌ ಹಾಗೂ ಹಾಡುಗಳಿಂದಲೇ ತಲೆಗೆ ಹುಳ ಬಿಟ್ಟಿರುವ ಉಪ್ಪಿ ʼಯುಐʼ ಒಂದು ಬೇರೆನೇ ಲೋಕ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಸಿನಿಮಾದ ಕೆಲಸಕ್ಕಾಗಿ ಉಪ್ಪಿ ಚಿತ್ರತಂಡದಿಂದ ವಿದೇಶಕ್ಕೆ ಹಾರಿದ್ದಾರೆ.

ಶಿವಣ್ಣ ಇನ್‌ ʼಬೈರತಿ ರಣಗಲ್‌ʼ: ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರ ʼಬೈರತಿ ರಣಗಲ್‌ʼ ಸಿನಿಮಾ ಕೂಡ ಈ ವರ್ಷದ ಬಹುದೊಡ್ಡ ಸಿನಿಮಾಗಳಲ್ಲಿ ಒಂದು. ʼಮಫ್ತಿʼ ಸಿನಿಮಾದ ಪ್ರೀಕ್ವೆಲ್‌ ಆದ ಕಾರಣಕ್ಕೆ ಹಾಗೂ ಶಿವಣ್ಣ ಮಾಸ್‌ ಲುಕ್‌ ನಲ್ಲಿ ಕಾಣಿಸಿಕೊಳ್ಳಲಿರುವ ಈ ಸಿನಿಮಾ ಹೈಪ್‌ ಹೆಚ್ಚಿಸಿದೆ.

ಆಗಸ್ಟ್‌ 15 ರಂದು ʼಬೈರತಿ ರಣಗಲ್‌ʼ ರಿಲೀಸ್‌ ಆಗಲಿದೆ. ಇದೇ ವೇಳೆ ಪ್ಯಾನ್‌ ಇಂಡಿಯಾ ʼಪುಷ್ಪ-2ʼ ಕೂಡ ತೆರೆ ಕಾಣಲಿದೆ. ಸ್ಯಾಂಡಲ್‌ ವುಡ್‌ ನಲ್ಲಿ ʼಪುಷ್ಪ-2ʼ ಗೆ ಬೈರತಿ ರಣಗಲ್‌ ಟಕ್ಕರ್‌ ಕೊಡುವ ಸಾಧ್ಯತೆಯಿದೆ.

ದುನಿಯಾ ವಿಜಯ್‌ ʼಭೀಮʼ: ಈಗಾಗಲೇ ʼಸಲಾಗʼ ಮೂಲಕ ದೊಡ್ಡ ಹಿಟ್‌ ಕೊಟ್ಟ ದುನಿಯಾ ವಿಜಯ್‌ ನಿರ್ದೇಶನದ ಎರಡನೇ ಸಿನಿಮಾ ʼಭೀಮʼ ಸೆಟ್ಟೇರಿದ ದಿನದಿಂದ ಸದ್ದು ಮಾಡುತ್ತಿದೆ. ಒಂದು ಹಾಡು ಸಖತ್‌ ಸೌಂಡ್‌ ಮಾಡಿದೆ. ಔಟ್‌ & ಔಟ್‌ ಮಾಸ್‌ ಸಿನಿಮಾ ಇದಾಗಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಇದೇ ವರ್ಷ ತೆರೆಗೆ ಬರುವ ಸಾಧ್ಯತೆ ಹೆಚ್ಚಿದೆ.

ಇದಿಷ್ಟು ಮಾತ್ರವಲ್ಲದೆ ʼಬಘೀರʼ, ಪ್ರಜ್ವಲ್‌ ದೇವರಾಜ್‌ ಅವರ ʼಮಾಫಿಯಾʼ ದಂತಹ ಸಿನಿಮಾ ಕೂಡ ತೆರೆ ಕಾಣಲಿದೆ. ಆದರೆ ಇದು ಯಾವಾಗ ಎನ್ನುವುದು ಇದುವರೆಗೆ ರಿವೀಲ್‌ ಆಗಿಲ್ಲ.

ಈ ಚಿತ್ರಗಳು ಪ್ಯಾನ್‌ ಇಂಡಿಯಾದಲ್ಲಿ ಮಿಂಚಿದರೆ ಕನ್ನಡ ಸಿನಿಮಾರಂಗ ಎರಡು – ಮೂರು ವರ್ಷಗಳ ಹಿಂದಿದ್ದ ಹಳೆಯ ಹಾದಿಗೇರುವುದು ಖಂಡಿತ.

-ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next