ನಾಗಮಂಗಲ: ನಾಗಮಂಗಲ ಬರಪೀಡಿತ ತಾಲೂಕು. ಇಲ್ಲಿ ಹೇಮಾವತಿ ನೀರು ಹರಿಯುತ್ತಿದೆ ಎಂದರೆ, ಅದು ಹಲವರ ಹೋರಾಟ ಮತ್ತು ಶ್ರಮದಿಂದ ಸಾಧ್ಯವಾಗಿದೆ. ಅವರೆಲ್ಲರ ಶ್ರಮದಿಂದ ಹರಿಯುತ್ತಿರುವ ನೀರನ್ನು ನೋಡಿದರೆ, ಅತ್ಯಂತ ಸಂತಸವಾಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರು ಶಾಖಾಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಕೆಂದನಹಳ್ಳಿ ಗ್ರಾಮದಲ್ಲಿ ಭಾನುವಾರ ಹೇಮಾವತಿ ನೀರು ಬಳಕೆದಾರರ ಸಂಘದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಇಲ್ಲಿನ ಹೇಮಾವತಿ ನೀರು ಬಳಕೆದಾರರ ಸಂಘದ ಪದಾಧಿಕಾರಿ ಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಭಗೀರತ ಪ್ರಯತ್ನದಿಂದ ನಾಗಮಂಗಲ ಶಾಖಾ ಕಾಲುವೆಯ ವಿತರಣಾ ನಾಲೆಗಳಲ್ಲಿ ನೀರು ಹರಿಯುವ ಮೂಲಕ ದೇವಲಾಪುರ, ಕಸಬಾ ಹೋಬಳಿಯ ಹಲವು ಗ್ರಾಮಗಳ ಕೆರೆಕಟ್ಟೆಗಳು ತುಂಬಿವೆ. ಅಂತರ್ಜಲ ವೃದ್ಧಿಯಾಗಿದೆ ಇದರಿಂದ ರೈತನ ಮುಖದಲ್ಲಿ ನಗು ಕಾಣುವಂತಾಗಿದೆ ಎಂದು ಹೇಳಿದರು.
ಪರಿಹಾರಕ್ಕೆ ಕಾರ್ಯೋನ್ಮುಖರಾಗಿ: ಅನ್ನದಾತ ಸುಖೀಯಾಗಿರುವ ಕಡೆ ಊರು ಸುಭಿಕ್ಷವಾಗಿರುತ್ತದೆ. ಊರು ಸುಭಿಕ್ಷವಾದರೆ ದೇಶ ಸುಭಿಕ್ಷವಾಗುತ್ತದೆ. ಹೇಮಾವತಿ ನೀರು ಬಳಕೆದಾರರ ಸಂಘ ಕೇವಲ ನೀರಿನ ಬಗ್ಗೆಯಷ್ಟೇ ಗಮನ ಕೊಡದೆ, ರೈತರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಈ ಹಿನ್ನೆಲೆಯಲ್ಲಿ ಸಂಘದ ಪದಾಧಿಕಾರಿಗಳು ಚರ್ಚಿಸಿ ಕ್ರಮ ಕೈಗೊಳ್ಳಲು ತನ್ನ ಸ್ವಂತ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿರುವುದು ಅತ್ಯಂತ ಸೂಕ್ತ ಮತ್ತು ಸಮಯೋಚಿತ ಕಾರ್ಯ. ಈ ಕಾರ್ಯಕ್ಕೆ ನಿವೇಶನವನ್ನು ಕೊಟ್ಟಿರುವ ಕೆಂದನಹಳ್ಳಿ ಗ್ರಾಮಸ್ಥರು ಅಭಿನಂದನಾರ್ಹರು ಎಂದರು.
ಹೋರಾಟದ ಫಲ: ಹೇಮಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಬ್ಯಾಡರಹಳ್ಳಿ ಸಿ. ಚಂದ್ರಪ್ಪ ಮಾತನಾಡಿ, 2013ರಲ್ಲಿ ಆರಂಭವಾದ ಹೋರಾಟದ ಫಲವಾಗಿ ಈ ಭಾಗದಲ್ಲಿ ಹೇಮಾವತಿ ನೀರು ಹರಿಯುತ್ತಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಸೋಮೇಶ್ವರನಾಥ ಸ್ವಾಮೀಜಿ ಅವರನ್ನು ಕೆಂದನಹಳ್ಳಿ ಗ್ರಾಮಸ್ಥರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ತಾಪಂ ಅಧ್ಯಕ್ಷ ದಾಸೇಗೌಡ, ಸಂಘದ ಗೌರವಾಧ್ಯಕ್ಷ ಪಿ.ಜೆ.ನಾರಯಣ ಮಾತನಾಡಿದರು. ನೀರು ಬಳಕೆದಾರರ ಸಂಘದ ಉಪಾಧ್ಯಕ್ಷ ಪಿ.ಜೆ. ಉಮೇಶ್, ಖಜಾಂಚಿ ಎಚ್.ಎಂ.ವೆಂಕಟೇಶ್, ಕಾರ್ಯದರ್ಶಿ ಕೆ.ನರಸಿಂಹೇಗೌಡ ಸೇರಿದಂತೆ ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.