Advertisement

ಕಲುಷಿತಗೊಳ್ಳುತ್ತಿದ್ದಾಳೆ ಹೇಮಾವತಿ

08:53 PM Dec 22, 2019 | Lakshmi GovindaRaj |

ಚನ್ನರಾಯಪಟ್ಟಣ: ತಾಲೂಕಿನ ಘನ್ನಿ ಸಮೀಪದಲ್ಲಿ ಹರಿಯುತ್ತಿರುವ ಹೇಮಾವತಿ ನದಿ ವಾಮಾಚಾರ ಕೇಂದ್ರವಾಗಿರುವುದಲ್ಲದೇ ಪಟ್ಟಣ ಸೇರಿದಂತೆ ಅನೇಕ ಕಡೆಯಲ್ಲಿನ ಕೋಳಿ ಅಂಗಡಿಗಳ ತ್ಯಾಜ್ಯವೂ ನದಿ ನೀರಿಗೆ ಸೇರುತ್ತಿರುವುದರಿಂದ ಹೇಮಾವತಿ ಕಲುಷಿತಗೊಳ್ಳುತ್ತಿದ್ದಾಳೆ.

Advertisement

ಅಧಿಕಾರಿಗಳ ನಿರ್ಲಕ್ಷ್ಯ: ಮಾವಾಚಾರ ನಡೆಯುವ ಸಮೀಪದಲ್ಲಿಯೇ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ನಗರಕ್ಕೆ ಕುಡಿಯುವ ನೀರು ಒದಗಿಸುವ ಯಂತ್ರಾಗಾರವಿದೆ. ಆದರೂ ಸಾರ್ವಜನಿಕರು ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆ ದಿವಸ ತಡರಾತ್ರಿಯಲ್ಲಿ ವಾಮಾಚಾರ ಮಾಡಿ ವಾಮಾಚಾರಕ್ಕೆ ಬಳಸುವ ಹಂದಿ, ಕೋಳಿ, ಕುರಿ ರಕ್ತವನ್ನು ನದಿಯಲ್ಲಿ ಬಿಡುವುದಲ್ಲದೇ ವಾಮಾಚಾರಕ್ಕೆ ಬಳಕೆಯಾಗುವ ಮೊಟ್ಟೆ, ತೆಂಗಿನಕಾಯಿ, ಬಟ್ಟೆ ಸೆರಿದಂತೆ ಇತರ ಎಲ್ಲಾ ವಸ್ತುಗಳನ್ನು ನದಿ ನೀರಿನಲ್ಲಿ ತೇಲಿ ಬಿಡುತ್ತಾರೆ. ಈ ಬಗ್ಗೆ ಗಮನ ಹರಿಸಬೇಕಿರುವ ಜಲಸಂಪನ್ಮಾಲು ಇಲಾಖೆ ಹಾಗೂ ಸಮೀಪದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.

ಮಾಂತ್ರಿಕರು ಇಷ್ಟ ಪಡುವ ಜಾಗ: ಪ್ರತಿ ಅಮವಾಸೆ ಹುಣ್ಣಿಮೆ ರಾತ್ರಿಯಲ್ಲಿ ಮಾಂತ್ರಿಕರ ಕೈ ಚಳಕ ನಡೆಯುವ ನದಿ ತೀರ ಇದಾಗಿದ್ದು, ಮಾಟ ಮಂತ್ರದಂತಹ ವಾಮಾಚಾರ ಕೃತ್ಯವು ಯಾರ ಭಯವಿಲ್ಲದೆ ನಡೆಯುತ್ತದೆ. ಪಟ್ಟಣದಿಂದ ಹೊಳೆನರಸೀಪುರಕ್ಕೆ ತೆರಳಲು ಮಾರ್ಗದಲ್ಲಿ ನೂರಾರು ಮೀಟರ್‌ ಉದ್ದದ ಮೇಲ್ಸೇತುವೆ ನಿರ್ಮಿಸಿದ್ದು ಸೇತುವೆ ಕೆಳಗೆ ವಾಮಾಚಾರ ನಡೆಸಲಾಗುತ್ತದೆ. ಈ ಸ್ಥಳಕ್ಕೆ ಸಾರ್ವಜನಿಕರು ಹಗಲಿನಲ್ಲಿ ತೆರಳಲು ಭಯ ಪಡುವಂತಾಗಿದೆ.

ಭಯ ಹುಟ್ಟಿಸುವ ಜಾಗ: ನದಿ ದಡದಲ್ಲಿ ಒಮ್ಮೆ ಅಡ್ಡಾಡಿದರೆ ಸಾರಾರು ನಿಂಬೆಹಣ್ಣು, ಅರಿಶಿನ-ಕುಂಕುಮ, ಕೋಳಿಮೊಟ್ಟೆ, ಅರೆಬರೆ ಉರಿದ ಕರ್ಪೂರ, ಊದುಬತ್ತಿ, ಒಡೆದ ತೆಂಗಿನಕಾಯಿ, ಬಾಳೆಕಂದು, ಕೋಳಿ, ಕುರಿ ಹಾಗೂ ಹಂದಿಯ ರುಂಡಗಳು ಕಾಣಿಸುತ್ತವೆ. ಇದರಿಂದ ಮಹಿಳೆಯರು ಹಾಗೂ ಮಕ್ಕಳು ನದಿ ತೀರಕ್ಕೆ ತೆರಳಲು ಭಯ ಪಡುತ್ತಾರೆ, ಇನ್ನು ಸಮೀಪದ ಗ್ರಾಮಸ್ಥರು ತಮ್ಮ ರಾಸುಗಳ ನೀರು ಕುಡಿಸಲು ತೆರಳಲಾಗದೆ ಮನೆ ಸಮೀಪವೇ ರಾಸುಗಳಿಗೆ ನೀರು ಕುಡಿಸುತ್ತಾರೆ.

ಉದ್ಯಮಿಗಳು, ರೋಗ ಪೀಡಿತರಿಂದ ವಾಮಾಚಾರ: ಪಟ್ಟಣದಲ್ಲಿ ನೂತನ ಉದ್ಯಮ ಪ್ರಾರಂಭಿಸುವ ಕೆಲವರು ತಮ್ಮ ಉದ್ಯಮಕ್ಕೆ ಯಶಸ್ಸು ಸಿಗಲೆಂದು ನದಿ ತೀರದಲ್ಲಿ ವಾಮಾಚಾರ ಮಾಡಿಸುತ್ತಾರೆ. ಇದಲ್ಲದೇ ಅನಾರೋಗ್ಯಕ್ಕೆ ತುತ್ತಾದರು ಬೇಗ ಗುಣಮುಖರಾಗಲೆಂದು ಇದೇ ಸ್ಥಳದಲ್ಲಿ ಕುರಿ, ಕೋಳಿ ಬಲಿ ಕೊಡುತ್ತಾರೆ

Advertisement

ಮೂಕ ಪ್ರೇಕ್ಷಕರಾಗಿದ್ದಾರೆ: ಚನ್ನರಾಯಪಟ್ಟಣ ಹಾಗೂ ಅರಸೀಕರೆ ಎರಡೂ ನಗರದಲ್ಲಿ ವಾಸವಾಗಿರುವ ಲಕ್ಷಾಂತರ ಜನರಿಗೆ ಇಲ್ಲಿಂದ ಕುಡಿಯುವ ನೀರು ಸರಬರಾಜು ಮಾಡುವ ಯಂತ್ರಾಗಾರ ಇದ್ದರೂ, ವಾಮಾಚಾರ ಮಾಡುವವರಿಗೆ ಇದರ ಅರಿವಿಲ್ಲದೇ ರಕ್ತ ಹಾಗೂ ಇತರ ತ್ಯಾಜ್ಯವನ್ನು ನದಿಗೆ ಹರಿಸುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡುವ ಗೋಜಿಗೆ ಜನತೆ ಹೋಗಿಲ್ಲ. ವಾಮಾಚಾರದ ಬಗ್ಗೆ ಪ್ರಶ್ನೆ ಮಾಡುವುದರಿಂದ ತಮಗೂ ಕೆಡಕಾಗಬಹುದು ಎಂಬ ಮನಸ್ಥಿತಿ ಎಲ್ಲರಲ್ಲೂ ಮನೆ ಮಾಡಿದ್ದು ಮೂಕ ಪ್ರೇಕ್ಷಕರಾಗಿದ್ದಾರೆ.

ತ್ಯಾಜ್ಯ ಎಸೆಯುತ್ತಾರೆ: ಪಟ್ಟಣ ಹಾಗೂ ಶ್ರೀನಿವಾಸಪುರ ಸಮೀಪದಲ್ಲಿ ಹಲವು ಕುರಿ, ಕೋಳಿ ಮಾಂಸದ ಅಂಗಡಿಗಳಿದ್ದು, ಅಲ್ಲಿ ಉತ್ಪತ್ತಿ ಆಗುವ ತ್ಯಾಜ್ಯವನ್ನು ರಾತ್ರಿ ವೇಳೆ ನದಿ ನೀರಿಗೆ ಎಸೆಯಲಾಗುತ್ತಿದೆ. ಕೆಲ ಆಟೋದವರು ನಿತ್ಯವೂ ಕೋಳಿ ಮಾಂಸದ ಅಂಗಡಿಯಲ್ಲಿ ತ್ಯಾಜ್ಯವನ್ನು ಸಂಗ್ರಹಣೆ ಮಾಡಿ ನದಿ ತೀರಕ್ಕೆ ತೆರಳಿ ಸೇತುವೆ ಮೇಲೆ ನಿಂತು ನದಿ ನೀರಿಗೆ ತ್ಯಾಜ್ಯವನ್ನು ಎಸೆಯುತ್ತಾರೆ. ಇದರಿಂದ ಕೋಳಿ ತ್ಯಾಜ್ಯ ಹೇಮಾವತಿ ನದಿ ಒಡಲು ಸೇರುತ್ತಿದೆ.

ನಿರಂತವಾಗಿ ನೀರು ಹರಿಯುತ್ತಿದೆ: ಹೇಮಾವತಿ ಅಣೆಕಟ್ಟಯಿಂದ ನಿರಂತರವಾಗಿ ನೀರು ಹರಿಯುತ್ತಿರುವುದರಿಂದ ನದಿ ಸೇತುವೆ ಮೇಲೆ ಸಂಚರಿಸುವವರಿಗೆ ಕೊಳೆತ ನೀರು ಕಾಣಿಸುವುದಿಲ್ಲ. ನದಿ ಒಳಕ್ಕೆ ಇಳಿದು ನೋಡಿದರೆ ಮಾತ್ರ ನೀರಿನಲ್ಲಿ ಬೆರೆತಿರುವ ತಾಜ್ಯ ಗೋಚರವಾಗುತ್ತದೆ. ಹೇಮಾವತಿ ತನ್ನೊಡಲಲ್ಲಿ ಸೇರಿದ ಕಲ್ಮಷವನ್ನು ತನ್ನಷ್ಟಕ್ಕೆ ತಾನೇ ತೊಡೆದು ಹಾಕಿ ಶುದ್ಧೀಕರಣಗೊಳ್ಳುವ ನೈಸರ್ಗಿಕ ಪ್ರಕ್ರಿಯೆ ಜರುಗುವುದರಿಂದ ನೀರಿನಲ್ಲಿ ಕಲುಷಿತ ವಾಸನೆ ಬರುತ್ತಿಲ್ಲ, ನೀರು ಹರಿಯದೆ ಇದ್ದರೆ ಕಲುಷಿತವಾದ ನೀರನ್ನು ಸಾರ್ವಜನಿಕರು ಸೇವಿಸಬೇಕಿತ್ತು.

ಹೇಮಾವತಿ ನದಿಯಿಂದ ನೀರು ಎತ್ತವ ಸ್ಥಳದಲ್ಲಿ ಶುಚಿತ್ವದ ಕೊರತೆ ಇರುವುದರಿಂದ ಶಿಲ್ಟ್ ತೆಗೆಸಲಾಗಿದೆ. ಆಗಾಗ ಪೌರಕಾರ್ಮಿಕರಿಂದ ಸ್ವಚ್ಛಗೊಳಿಸಲಾಗುತ್ತದೆ. ನದಿ ದಡದಲ್ಲಿ ಗಿಡಗಳು ಬೃಹದಾಕಾರವಾಗಿ ಬೆಳೆದಿರುವುದರಿಂದ ಅದರ ಮರೆಯಲ್ಲಿ ವಾಮಾಚಾರ ನಡೆಯುತ್ತಿರಬಹುದು. ಗಿಡ ತೆರವು ಮಾಡಿದರೆ ವಾಮಾಚಾರ ಕಡಿಮೆಯಾಗುತ್ತದೆ.
-ಎಂ.ಕುಮಾರ್‌, ಪುರಸಭೆ ಮುಖ್ಯಾಧಿಕಾರಿ

ನಲ್ಲೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಜನ ಜಾನುವಾರ ಕುಡಿಯುವ ನೀರು ಕಲುಷಿತವಾಗುತ್ತಿದ್ದರು ಕಣ್ಣು ಮುಚ್ಚಿ ಕುಳಿತಿರುವುದು ಖಂಡನೀಯ, ಪರಿಸರವಾದಿಗಳು ಹಾಗೂ ಸಂಘ ಸಂಸ್ಥೆಯವರು ವೇದಿಕೆ ಮೇಲೆ ಭಾಷಣ ಮಾಡಿದರೆ ಸಾಲದು ನದಿ ತೀರದಲ್ಲಿ ನಡೆಯುವ ವಾಮಾಚಾರ ನಿಲ್ಲಿಸಲು ಮುಂದಾಗಬೇಕು.
-ಗಿರೀಶ್‌, ಘನ್ನಿ ಗ್ರಾಮವಾಸಿ

* ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next