ಹುಣಸೂರು: ಈ ಬಾರಿ ಪ್ರವಾಹದಿಂದ ರೈತರು ಬೆಳೆ ನಷ್ಟಕ್ಕೊಳಗಾಗಿದ್ದು, ಖರೀದಿ ಕಂಪನಿಗಳು ತಂಬಾಕಿಗೆ ಉತ್ತಮ ಬೆಲೆ ನೀಡುವ ಮೂಲಕ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು. ತಾಲೂಕಿನ ಕಟ್ಟೆಮಳಲವಾಡಿಯ ಮೂರು ತಂಬಾಕು ಹರಾಜು ಮಾರುಕಟ್ಟೆಗಳಲ್ಲಿ ಪ್ರಸಕ್ತ ಸಾಲಿನ ತಂಬಾಕು ಹರಾಜು ಪ್ರಕ್ರಿಯೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮಂಡಳಿ ಅಧಿಕಾರಿಗಳ ಜೊತೆಗೂಡಿ ಬೇಲ್‌ಗಳಿಗೆ ಪೂಜೆ ಸಲ್ಲಿಸಿ, ಇ-ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
175 ರೂ.ಗೆ ಮಾರಾಟ: ಕಳೆದ ವರ್ಷ 165 ರೂ.ನಿಂದ ಆರಂಭಗೊಂಡು ಅತಿ ಹೆಚ್ಚು ಅಂದರೆ 188 ರೂ.ವರೆಗೆ ಮಾರಾಟವಾಗಿತ್ತು. ಸರಾಸರಿ 142.30 ರೂ.ದರ ದೊರಕಿತ್ತು. ಪ್ರತಿ ವರ್ಷ ಪ್ರತಿ ಕೆ.ಜಿ.ಗೆ ಐದು ರೂ.ನಂತೆ ಹೆಚ್ಚಿಸುತ್ತಿದ್ದ ಕಂಪನಿಗಳು, ಇದೇ ಮೊದಲ ಬಾರಿಗೆ ಒಮ್ಮೆಲೆ ಕೆ.ಜಿ.ಗೆ ಹತ್ತು ರೂ. ಹೆಚ್ಚಿಸಿದೆ. ಮೊದಲ ದಿನ ಉತ್ತಮ ತಂಬಾಕು ಕೆ.ಜಿ.ಗೆ 175 ರೂ.ಗಳಿಗೆ ಮಾರಾಟವಾಗಿದ್ದು, ಆಶಾದಾಯಕ ಬೆಲೆ ದೊರೆತಿದೆ. ಈ ಬಾರಿ ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಮನೆ-ಬೆಳೆ ನಷ್ಟವಾಗಿದೆ. ಈ ಬಾರಿ ಕನಿಷ್ಠ 150 ರೂ. ಸರಾಸರಿ ಬೆಲೆ ಬರುವಂತೆ ಖರೀದಿ ಮಾಡಬೇಕೆಂದು ಮನವಿ ಮಾಡಿದರು.
ಕಿರುಕುಳ ಬೇಡ ಎಚ್ಚರಿಕೆ: ಮಾರುಕಟ್ಟೆಯಲ್ಲಿ ಗುಣಮಟ್ಟದ ನೆಪದಲ್ಲಿ ರೈತರಿಗೆ ಅನಗತ್ಯ ಕಿರುಕುಳ ನೀಡಬಾರದು. ಮಂಡಳಿ ಅಧಿಕಾರಿಗಳು, ಕಂಪನಿಗಳವರು ರೈತ ಪರವಾಗಿರಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ನಮ್ಮ ಜವಾಬ್ದಾರಿ ಹೆಚ್ಚಿದೆ. ಯಾವುದೇ ಅನ್ಯಾಯವಾಗಲು ಬಿಡಲ್ಲ, ಉತ್ತಮ ಬೆಲೆ ನೀಡಿ ಎಂದು ಕೋರಿದರು.
9 ಕಂಪನಿಗಳು ಭಾಗಿ: ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಐಟಿಸಿ, ಡೆಕ್ಕನ್, ಜಿಪಿಐ, ಎಂಪಿಎಸ್, ಅಲಯನ್ಸ್-1, ಎಂ.ಎಲ್, ಮದನಪಲ್ಲಿ, ಪ್ರಗತಿ ಸೇರಿದಂತೆ 9 ಕಂಪನಿಗಳು ಭಾಗವಹಿಸಿದ್ದವು. ಮೂರು ಮಾರುಕಟ್ಟೆಗಳಲ್ಲಿ ತಲಾ 18 ಬೇಲ್‌ಗಳನ್ನು ಮಾರಾಟಕ್ಕಿಡಲಾಗಿತ್ತು.
ಈ ಸಂದರ್ಭದಲ್ಲಿ ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಎಸ್.ಪಾಟೀಲ್, ಹರಾಜು ಅಧೀಕ್ಷಕರಾದ ವೀರಭದ್ರಯ್ಯ, ಪುರುಷೋತ್ತಮ ರಾಜೇಅರಸ್, ಜಿಪಂ ಸದಸ್ಯೆ ಸಾವಿತ್ರಿ, ತಾಪಂ ಅಧ್ಯಕ್ಷೆ ಪದ್ಮಮ್ಮ, ಗ್ರಾಪಂ ಅಧ್ಯಕ್ಷೆ ಚೆಲುವಮ್ಮ, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಣ್ಣೇಗೌಡ, ರೈತ ಸಂಘದ ತಾಲೂಕು ಕಾರ್ಯದರ್ಶಿ ರಾಮೇಗೌಡ, ಪಿರಿಯಾಪಟ್ಟಣದ ಸೋಮಶೇಖರ್, ಜಿಪಂ ಮಾಜಿ ಸದಸ್ಯ ನಾಗರಾಜಮಲ್ಲಾಡಿ, ಮುಖಂಡರಾದ ಎಸ್.ಬಿ.ಮೂರ್ತಿ, ಚಂದ್ರೇಗೌಡ, ಪಾಲಶೆಟ್ಟಿ, ಅಶೋಕ, ಹರೀಶ್, ಧರ್ಮೇಶ್ ಇತರರಿದ್ದರು.
ತಂಬಾಕು ಹರಾಜು ಪ್ರಕ್ರಿಯೆಯಲ್ಲಿ ಸಣ್ಣಪುಟ್ಟ ಕಂಪನಿಗಳು ಸಹ ಹೆಚ್ಚು ಖರೀದಿ ಮಾಡುವ ಮೂಲಕ ರೈತರಿಗೆ ನೆರವಾಗಬೇಕು. ಅದರಲ್ಲೂ ಐಟಿಸಿ, ಪಿಎಸ್‌ಎಸ್, ಡೆಕ್ಕನ್ ಮತ್ತಿತರ ದೊಡ್ಡ ಕಂಪನಿಗಳು ಈ ಬಾರಿಯಂತೂ ಉತ್ತಮ ಬೆಲೆ ನೀಡಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರಿಗೆ ಸ್ಪಂದಿಸಬೇಕು.
-ಪ್ರತಾಪ್ ಸಿಂಹ, ಸಂಸದ