Advertisement

ಅಜ್ಜ ಎಂಬ ದೇವತೆಗೆ ಸಾವಿರ ನಮಸ್ಕಾರ

03:45 AM Mar 08, 2017 | Harsha Rao |

ಜಟಕಾಬಂಡಿಯಾಗಿತ್ತು ನನ್ನ ಬದುಕು. ಬಂಡಿಯಂತೆ ಜೀವನಕ್ಕೆ ಎರಡು ಚಕ್ರಗಳ ಅವಶ್ಯಕತೆ ಬಂತು. ಆ ಬಂಡಿಯ ಚಕ್ರಗಳೇ ಒಂದು ನನ್ನಜ್ಜ, ಮತ್ತೂಂದು ನನ್ನ ಜೀವ. ಸೋಲುವ ಮನಸ್ಸು ನನ್ನದಾಗಿತ್ತು. ಗೆಲ್ಲಿಸುವ ಮನಸ್ಸು ಅವರದಾಗಿತ್ತು. ನನ್ನನ್ನು ಸಾಕಿ, ಬೆಳೆಸಿ, ಪ್ರೀತಿಯಿಂದ ಊಟ ಮಾಡಿಸಿ ನನಗೆ ಅಪ್ಪ- ಅಮ್ಮನನ್ನು ಮರೆಸುವ ಪ್ರೀತಿ ನೀಡಿದ್ದು ನನ್ನ ಅಜ್ಜ ಎಂದು ಹೇಳಲು ಹೆಮ್ಮೆಯಾಗುತ್ತದೆ. . ನಾನು ಅಜ್ಜನಿಗೆ ಮೊಮ್ಮಗಳು ಅಗಿರಲಿಲ್ಲ, ಮಗಳಾಗಿದ್ದೆ.  

Advertisement

ಬೆಳಿಗ್ಗೆ ಎದ್ದೇಳುವುದು ಸ್ವಲ್ಪ ತಡವಾದ್ರೂ ನನ್ನ ರೂಮಿನತ್ತ ಬಡಿಗೆ ಹಿಡಿದು ಕುಂಟುತ್ತಾ ಬರುವ ಶಬ್ದ ಹಿಂದೆಯೇ, “ಏಳೇಳು ಗಂಗವ್ವಾ ಎಷ್ಟೊತ್ತ ಮಲಗಿ, ಆನಿಯ ಬಂದಾವು ಅಂಗಳದಾಗ ನಿಂತಾವು, ಒಂಟಿಯು ಬಂದಾವು ಕಂಟ್ಯಾಗ ನಿಂತಾವು’ ಎನ್ನುವ ಹಾಡು ಕೇಳುತ್ತಿತ್ತು. ಮೆಲ್ಲನೇ ಬಂದು ಮುಖದ ಮೇಲಿರುವ ಚಾದರ ತೆಗೆದು ಎದ್ದೇಳು ಯವ್ವಾ… ಎನ್ನುವ ಮಾತು ಸ್ಪೂರ್ತಿಯಾಗಿತ್ತು. 

ಊರಲ್ಲಿ ಕುಳಿತು ನನ್ನ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿರುವ ಅಜ್ಜ. ನಾನು ಇದ್ದಲ್ಲೇ ಬಂದು ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ನನ್ನ ಜೀವ. ನನಗಾಗಿ ಹಂಬಲಿಸುತ್ತಿರುವ ಅಜ್ಜನದ್ದೂ ಒಂದಾಸೆಯಾದರೆ ನನ್ನ ಜೀವದ್ದೂ ಮತ್ತೂಂದಾಸೆ. ಹುಟ್ಟಿನಿಂದ ಬೆಳೆದು ಬಂದದ್ದೂ ಒಂದು ದಾರಿ. ಬೆಳೆದು ಹೋಗುತ್ತಿರುವುದೂ ಮತ್ತೂಂದು ದಾರಿ. ಅಜ್ಜನ ಪ್ರೀತಿಯಲ್ಲಿ ಬೆಳೆದು ದೊಡ್ಡವಳಾದೆ. ನನ್ನ ಜೀವದ ಆಸರೆಯಲ್ಲಿ ಬದುಕುತ್ತಿದ್ದೇನೆ. ಅಜ್ಜ ನನಗೆ ಪ್ರೀತಿಯಿಂದ ದಾನೇಶಿ ಎಂದು ಕರೆಯುತ್ತಿದ್ದ ನನ್ನಜ್ಜ ಒಂದು ದಿನ ಆಸ್ಪತ್ರೆಯಲ್ಲಿ ಮಲಗಬೇಕಾದ ಪರಿಸ್ಥಿತಿ ಬಂತು.  

ಅದು ಜೂನ್‌ ತಿಂಗಳ ಒಂದು ದಿನ. ನನ್ನಜ್ಜ ದೇವರ ಹತ್ತಿರಕ್ಕೆ ಹೋಗಿ ಮತ್ತೆ ಮೊಮ್ಮಗಳನ್ನು ನೋಡುವ ಆಸೆಯಿಂದ ಬಂದರು. ಮತ್ತೆ ಅವರೊಟ್ಟಿಗೆ ಎರಡು ವರ್ಷ ತುಂಬಾ ನಕ್ಕು- ನಲಿದೆ. ಕೊನೆಯ ವಾರದಲ್ಲಿ ಕಣ್ಣು ತುಂಬಿಕೊಂಡು ನನ್ನಜ್ಜ, ನೀನು ನನ್ನ ಎರಡನೇ ತಾಯಿಯೆಂದು ಕರೆದರು. ನನ್ನಜ್ಜನೊಡನೆ ನಾನು ಕಣ್ಣೀರಿನ ಹೊಳೆಯನ್ನೇ ಹರಿಸಿದೆ. ನಾನೇ ಅಜ್ಜನಿಗೆ ಊಟ ಮಾಡಿಸುತ್ತಿದ್ದೆ, ಗುಳಿಗೆ ಕೊಡುತ್ತಿದ್ದೆ, ಕೈ ಕಾಲು ಒತ್ತುತ್ತಿದ್ದೆ. ಲಾಲಿ ಹಾಡನ್ನು ಹಾಡಿ ಮಲಗಿಸುತ್ತಿದ್ದೆ. ಆ ದಿನಗಳಲ್ಲಿ ನಾನು ತಾಯ್ತನ ಪಡೆದು ನನ್ನ ಮಗುವನ್ನು ನೋಡಿದ್ದೇ ಅದೇ ನನ್ನ ಪ್ರೀತಿಯ ಅಜ್ಜ. ಈ ಜನ್ಮವೂ ಸಾಲದು ನಿನ್ನ ಪ್ರೀತಿ ಪಡೆದ ಋಣವ ತುಂಬಲು. ಅಂದುಕೊಂಡು ಸುಮ್ಮನಾದೆ.  

ತಾರೀಖು ಅಕ್ಟೋಬರ್‌ 17. ಅವತ್ತು ಅಜ್ಜ ಶಾಶ್ವತವಾಗಿ ವಿಶ್ರಾಂತಿ ಪಡೆದರು. ನಮ್ಮೆಲ್ಲರಿಂದ ಅಗಲಿದರು. ಅಂದೇ ನನ್ನ ಮನಸ್ಸಿಗೆ ಅನಿಸಿತು, ಆ ನಾಲ್ಕು ಮಂದಿ ಹೊತ್ತುಕೊಂಡು ಹೋಗುತ್ತಿದ್ದ ಆ ಅಂಬಾರಿಯ ಮೇಲೆ ನಾನು ಇರಬೇಕಿತ್ತು ಅಂತ. ಆಗ ಮತ್ತೇ ನನ್ನಜೀವನದಲ್ಲಿ ಪ್ರೀತಿಯ ರಥ ಎಳೆಯಿತು. ನನ್ನೊಡನಿದ್ದ ನನ್ನಜ್ಜ ಈಗ ನನ್ನ ಪ್ರೀತಿಯ ಜೀವದಲ್ಲಿ ಬೆರೆತಿದ್ದಾರೆ. ನನ್ನ ಜೀವ ನನಗೆ ಪ್ರೀತಿಯಿಂದ ಚಿನ್ನು ಎಂದು ಕರೆದರೆ, ನಾನು ಆ ಜೀವಕ್ಕೇ ಅಪ್ಪಾಜಿ ಎನ್ನುತ್ತಿದ್ದೆ.  

Advertisement

ನನ್ನ ಜೀವದ ಜೀವವಾಗಿದ್ದ ಅಜ್ಜನ ಜೊತೆ ಜೊತೆಯಲ್ಲಿ ಪ್ರೀತಿಯಿಂದ ಮಾತನಾಡಬೇಕೆನ್ನುವ ಮೊದಲೇ ಆ ಹಿರಿ ಜೀವದ ಕಣ್ಣು ಕೆಂಪಾಗಿ ನಿದ್ದೆಯಲ್ಲಿ ಬೆಂದು ಹೋಗುತ್ತಿತ್ತು. ಇದರ ಮಧ್ಯೆ ನಿದ್ದೆ ಬೇಕಾ? ನಾನು ಬೇಕಾ? ಎನ್ನುವ ಹಾಸ್ಯದ ಮಾತು ನನ್ನದಾಗಿತ್ತು. ಈಗ ಅನ್ನಿಸುತ್ತಿದೆ: ನನಗೆ ಜೀವನವೇ ಬೇಸರವಾದಾಗ ನನ್ನ ಜೀವನಕ್ಕೇ ಆಸರೆಯಾದ ಜೀವ ನೀನಜ್ಜಾ. ನಿನಗೆ ನಾನು ಕೃತಜ್ಞಳು. ನನ್ನ ಆಯಸ್ಸು ಇರುವವರೆಗೆ ನನಗೆ ನಿನ್ನ ಪ್ರೀತಿ ಬೇಕು. ಜೀವನಕ್ಕೇ ಬೆಲೆ ಸಿಕ್ಕಿದ್ದು ನಿನ್ನಿಂದ. ಜೀವನ ಏನೆಂಬುದ ಕಲಿತಿದ್ದೂ ನಿನ್ನಿಂದ. ನೀನು ನನ್ನ ಪಾಲಿಗೆ ತಂದೆ, ತಾಯಿ, ಬಂಧು ಬಳಗ, ಗುರು, ದೇವತೆ ಎಲ್ಲವೂ… ಆ ದೇವರಿಗೆ ಸಾವಿರ, ಸಾವಿರ ನಮಸ್ಕಾರ.

– ದಾನೇಶ್ವರಿ ಪಿ. ಮರನೂರ

Advertisement

Udayavani is now on Telegram. Click here to join our channel and stay updated with the latest news.

Next