Advertisement

ಹೆಗ್ಗಡೆ ಸೇವಾ ಸಂಘ ಮುಂಬಯಿ ವಾರ್ಷಿಕ ಕ್ರೀಡೋತ್ಸವ ಉದ್ಘಾಟನೆ

06:54 AM Jan 08, 2019 | Team Udayavani |

ಮುಂಬಯಿ: ಮಕ್ಕಳು ಶಿಕ್ಷಣ ದೊಂದಿಗೆ ಕ್ರೀಡೆಗೆ  ಮಹತ್ವ  ನೀಡಬೇಕು. ಕ್ರೀಡೆಯಲ್ಲಿ ಉತ್ತಮ ಸಾಧನೆಗೈದರೆ ಅದು ನಮ್ಮ ಮುಂದಿನ ಬೆಳವಣಿಗೆಗೆ ಪೂರಕವಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಕ್ರೀಡೆ ಬಹಳಷ್ಟು ಉಪಕಾರಿಯಾಗಿದೆ. ಸಮಾಜದವರು ಇಂದಿನ ಕ್ರೀಡಾಕೂಟದಲ್ಲಿ ಶಿಸ್ತು ಬದ್ಧವಾಗಿ ಪಥಸಂಚಲನದಲ್ಲಿ ಭಾಗಿಯಾಗಿರುವುದನ್ನು ಕಂಡಾಗ ಸಂತೋಷವಾಗುತ್ತಿದೆ ಎಂದು ಹೆಗ್ಗಡೆ ಭವನ ಕಟ್ಟಡ ನಿರ್ಮಾಣ ಸಮಿತಿಯ ಮಾಜಿ ಅಧ್ಯಕ್ಷ ಭೋಜ ಸಿ. ಹೆಗ್ಡೆ ಅವರು ನುಡಿದರು.

Advertisement

ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಸದಸ್ಯರಿಗಾಗಿ ಹಾಗೂ ಸಮಾಜ ಬಾಂಧವರಿಗಾಗಿ ವಾರ್ಷಿಕ ಕ್ರೀಡೋತ್ಸವವು  ಜ. 6 ರಂದು ಐರೋಲಿ ಸೆಕ್ಟರ್‌ 15ರ ನವಿ ಮುಂಬಯಿ ಮುನ್ಸಿಪಾಲ್‌ ಮೈದಾನದಲ್ಲಿ ಬೆಳಗ್ಗೆಯಿಂದ  ಸಂಜೆಯವರೆಗೆ ಸಂಘದ ಅಧ್ಯಕ್ಷ  ವಿಜಯ್‌ ಬಿ. ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡೋತ್ಸವದ   ಉದ್ಘಾಟನಾ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಘದ ಪ್ರತಿಯೊಂದು ಸಮಾಜಪರ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಬೇಕು ಎಂದರು.

ಇನ್ನೋರ್ವ ಅತಿಥಿ  ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ವಿಠಲ್‌ ಎಸ್‌. ಹೆಗ್ಡೆ ಅವರು ಮಾತನಾಡಿ, ಸಮಾಜ ಬಾಂಧವರು ಈ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಅಭಿನಂದನೀಯ. ನಿಮ್ಮೆಲ್ಲರ ಕ್ರೀಡಾಸ್ಫೂರ್ತಿಯನ್ನು ಕಂಡು ಪುಳಕಿತಗೊಂಡಿದ್ದೇನೆ. ಈ ಕ್ರೀಡಾಕೂಟದ ಪ್ರಯೋಜನವನ್ನು ನಾವೆಲ್ಲರೂ ಪಡೆದುಕೊಂಡಾಗ ಭವಿಷ್ಯದಲ್ಲಿ ಉತ್ತಮ ಕ್ರೀಡಾ ಪಟುಗಳಾಗಿ ಬೆಳೆಯಲು ಪೂರಕವಾಗುತ್ತದೆ ಎಂದು ನುಡಿದು ಶುಭಹಾರೈಸಿದರು.

ಸದಸ್ಯ ಬಾಂಧವರು ಬೆಳಗ್ಗೆ 7.30 ಕ್ಕೆ ಹೆಗ್ಗಡೆ ಭವನದಿಂದ ಐರೋಲಿ ಸೆಕ್ಟರ್‌ 15ರ ಮುನ್ಸಿಪಲ್‌ ಮೈದಾನದ ತನಕ ಕ್ರೀಡಾಳುಗಳನ್ನು  ಮತ್ತು ಅತಿಥಿಗಳನ್ನು   ವೈವಿಧ್ಯಮಯ ವಿಭಿನ್ನ ಶೈಲಿಯ ಭಾರತೀಯ ಸಂಸ್ಕೃತಿಯ ಪಥಸಂಚಲನದ ಮೂಲಕ ಕರೆತಂದರು. ಪುಣೆಯ ಉದ್ಯಮಿ ವಿನಯ್‌ ಶ್ಯಾಮ್‌ ಹೆಗ್ಡೆ ಅವರು ದೀಪಪ್ರಜ್ವಲಿಸಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು.  ಸಂಘದ ಗೌರವ ಅಧ್ಯಕ್ಷ ಸಂಜೀವ ಹೆಗ್ಡೆ, ಕಾರ್ಯದರ್ಶಿ ಶಂಕರ್‌ ಹೆಗ್ಡೆ, ಕೋಶಾಧಿಕಾರಿ ರಮೇಶ್‌  ಹೆಗ್ಡೆ, ಉಪಾಧ್ಯಕ್ಷ  ಸುರೇಶ್‌ ಎಸ್‌. ಹೆಗ್ಡೆ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ್‌ ಎಸ್‌. ಹೆಗ್ಡೆ, ಜೊತೆ ಕಾರ್ಯದರ್ಶಿ ಹಾಗೂ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ  ರವಿ ಎಸ್‌. ಹೆಗ್ಡೆ, ಜೊತೆ ಕೋಶಾಧಿಕಾರಿ ಚಂದ್ರಶೇಖರ್‌ ಬಿ. ಹೆಗ್ಡೆ,  ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿಷೇಕ್‌ ಎಸ್‌. ಹೆಗ್ಡೆ,  ಕ್ಯಾಟರಿಂಗ್‌ ಸಮಿತಿಯ ಕಾರ್ಯಾಧ್ಯಕ್ಷ ಬಿ. ಗೋಪಾಲ್‌ ಹೆಗ್ಡೆ,  ಸದಸ್ಯತ್ವ ಸಮಿತಿಯ ಕಾರ್ಯಾಧ್ಯಕ್ಷ ಜಯರಾಮ್‌ ಹೆಗ್ಡೆ ಕಲ್ಯಾಣ್‌, ಕಟ್ಟಡ ಸ್ವತ್ಛತಾ ಸಮಿತಿಯ  ಕಾರ್ಯಾಧ್ಯಕ್ಷ ಕೆ. ಪ್ರಸನ್ನ ಹೆಗ್ಡೆ,  ಶೈಕ್ಷಣಿಕ ಸಮಿತಿಯ ಕಾರ್ಯಾಧ್ಯಕ್ಷೆ  ಲೀಲಾವತಿ ರವೀಂದ್ರ ಹೆಗ್ಡೆ ಮತ್ತು ಆಡಳಿತ ಮಂಡಳಿ ಸದಸ್ಯರು, ಮಹಿಳಾ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

ಸಂಘದ ಜೊತೆ ಕಾರ್ಯದರ್ಶಿ ಹೆರ್ಮುಂಡೆ ರವಿ ಎಸ್‌. ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಸಮಾಜ ಬಾಂಧ‌ವರ ವಯೋಮಿತಿಗೆ ಅನುಗುಣವಾಗಿ ವಿವಿಧ ಕ್ರೀಡಾ ಸ್ಪರ್ಧೆ ನಡೆಯಿತು. ಕಾರ್ಯಕ್ರಮದಲ್ಲಿ  ಕಾರ್ಕಳ ನುರ್ಲಬೈಲು ದಿ| ಶ್ಯಾಮ್‌ ಹೆಗ್ಡೆ ಇವರ ಸ್ಮರಣಾರ್ಥ ಉದ್ಯಮಿ ವಿನಯ್‌ ಹೆಗ್ಡೆ ಪುಣೆ  ಇವರ ಪ್ರಾಯೋಜಕತ್ವದಲ್ಲಿ ಪುರುಷರಿಗಾಗಿ ಕ್ರಿಕೆಟ್‌ ಪಂದ್ಯಾಟ  ಮತ್ತು ಮಹಿಳೆಯರಿಗಾಗಿ ಥ್ರೋ ಬಾಲ್‌ ಪಂದ್ಯಾಟ ನಡೆಯಿತು. ಅಲ್ಲದೆ ಮಹಿಳೆಯರಿಗಾಗಿ ಮತ್ತು ಪುರುಷರಿಗಾಗಿ ಹಗ್ಗ ಜಗ್ಗಾಟ ಪಂದ್ಯಾಟಗಳು ನೆರವೇರಿತು. ದಿನಪೂರ್ತಿ ನಡೆದ ಕ್ರೀಡೋತ್ಸವದಲ್ಲಿ ನಗರ, ಉಪನಗರಗಳಿಂದ ಸಾವಿರಾರು ಸಮಾಜ ಬಾಂಧವರು ಪಾಲ್ಗೊಂಡಿದ್ದರು.

Advertisement

ಸಮಾಜದ ಮಕ್ಕಳು ಕ್ರೀಡಾಕ್ಷೇತ್ರದಲ್ಲಿ ಮುಂದೆ  ಬರಬೇಕು ಹಾಗೂ ಒಬ್ಬರನ್ನೊಬ್ಬರು ಅರಿತುಕೊಳ್ಳಬೇಕು ಎಂಬ ದೃಷ್ಟಿಯಿಂದ ನಾವು ಈ ಕ್ರೀಡೋತ್ಸವವನ್ನು ಪ್ರತೀ ವರ್ಷ ಆಯೋಜಿಸುತ್ತಿದ್ದೇವೆ. ಇದಕ್ಕೆ ಸಮಾಜ ಬಾಂಧವರ ಪ್ರೋತ್ಸಾಹ, ಸಹಕಾರ ದೊರೆಯುತ್ತಿರುವುದು ಸಂತೋಷವಾಗುತ್ತಿದೆ. ಸಂಘವು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಅಪಾರ ಸಾಧನೆಯನ್ನು ಮಾಡುತ್ತಿದೆ. ಸಂಘದ ಪ್ರತಿಯೊಂದು ಯೋಜನೆಗಳ ಉಪಯೋಗವು ಸಮಾಜ ಬಾಂಧವರಿಗೆ ಸಿಗಬೇಕು ಎನ್ನುವ ದೃಷ್ಟಿಯಿಂದ ಸಮಾಜ ಬಾಂಧವರು ಸಂಘದ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಳ್ಳಬೇಕು. ಆಗ ಮಾತ್ರ ಸಂಘದ ಧ್ಯೇಯೋದ್ದೇಶಗಳು ಈಡೇರಲು ಸಾಧ್ಯವಿದೆೆ.
ವಿಜಯ್‌ ಬಿ. ಹೆಗ್ಡೆ , ಅಧ್ಯಕ್ಷರು, ಹೆಗ್ಗಡೆ ಸೇವಾ ಸಂಘ ಮುಂಬಯಿ

 ಚಿತ್ರ-ವರದಿ: ಸುಭಾಷ್‌ ಶಿರಿಯಾ.

Advertisement

Udayavani is now on Telegram. Click here to join our channel and stay updated with the latest news.

Next