Advertisement

ಹದಗೆಟ್ಟ ಕುಚ್ಚೂರು ಕುಡಿಬೈಲು ಗ್ರಾಮೀಣ ರಸ್ತೆ

10:42 PM Sep 16, 2020 | mahesh |

ಹೆಬ್ರಿ: ಹೆಬ್ರಿ ತಾಲೂಕು ವ್ಯಾಪ್ತಿಯ ಕುಚ್ಚಾರು ಗ್ರಾಮದ ಕುಡಿಬೈಲು ಗ್ರಾಮೀಣ ರಸ್ತೆ ಇದು ವರೆಗೆ ಡಾಮರು ಕಾಣದೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ಕುಚ್ಚಾರಿನಿಂದ ಸೊಳ್ಳೆಕಟ್ಟೆಗೆ ಸಂಪರ್ಕ ಕಲ್ಪಿಸುವ ಕೇವಲ 2 ಕಿ.ಮೀ. ರಸ್ತೆ ಇದುವರೆಗೆ ಡಾಮರು ಕಂಡಿಲ್ಲ. ಈ ಭಾಗದಲ್ಲಿ ಸುಮಾರು 500ಕ್ಕೂ ಹೆಚ್ಚು ಹಿಂದುಳಿದ ವರ್ಗಗಳ ನಿವಾಸಿಗಳು ಸೇರಿದಂತೆ ಗ್ರಾಮಸ್ಥರು ವಾಸವಾಗಿದ್ದಾರೆ. ಸ್ಥಳೀಯಾಡಳಿತ ಗುಂಡಿಗಳಿಗೆ ಕೇವಲ ಮಣ್ಣು ಹಾಕಿ ಸುಮ್ಮನಾಗುತ್ತದೆ. ಆದರೆ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿಯೇ ಹರಿದು ಮಣ್ಣು ಸಂಪೂರ್ಣ ಕೊಚ್ಚಿಕೊಂಡು ಹೋಗಿ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ಈ ಕೆಸರಿನ ರಸ್ತೆ ಮೇಲೆ ದ್ವಿಚಕ್ರ ವಾಹನ ಸವಾರರು ಹಾಗೂ ಇತರ ವಾಹನಗಳು ಸಂಚರಿಸಲಾಗದೆ ಅನೇಕ ಅನಾಹುತಗಳು ಸಂಭವಿಸಿವೆ. ಈ ಬಗ್ಗೆ ಸ್ಥಳೀಯರು ಹಾಗೂ ಕುಚ್ಚಾರು ಕುಡಿಬೈಲು ಶಾಂತಿನಿಕೇತನ ತಂಡದ ಸದಸ್ಯರು ಹಲವು ಬಾರಿ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿ ಶಾಶ್ವತ ದುರಸ್ತಿ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆಯಲ್ಲೇ ಹರಿಯುವ ನೀರು
ಕೇವಲ ಮಣ್ಣಿನಿಂದ ನಿರ್ಮಾಣವಾದ ಈ ರಸ್ತೆ ಮಳೆಗಾಲದಲ್ಲಿ ಹೊಂಡಗಳಾಗಿ ರಸ್ತೆಯಲ್ಲಿ ನೀರು ಹರಿದು ರಸ್ತೆ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಗೆ ಡಾಮರು ಕಾಮಗಾರಿ ಮಾಡುವಂತೆ ಹಲವಾರು ಬಾರಿ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಮನವಿ ನೀಡಿದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಯುವ ತಂಡದಿಂದ ಶ್ರಮದಾನ
ಶಾಂತಿನಿಕೇತನ ಯುವ ವೃಂದದ ಸದಸ್ಯರು ಕೂಡಿಕೊಂಡು ಸೆ. 20ರಂದು ಶ್ರಮದಾನಕ್ಕೆ ಯೋಜನೆ ಹಾಕಿಕೊಂಡಿದ್ದಾರೆ.

ಗೋಳು ಕೇಳುವವರ್ಯಾರು?
ಚುನಾವಣ ಸಂದರ್ಭದಲ್ಲಿ ಮನೆ ಮನೆ ಬಂದು ಮತ ಕೇಳಿ ಹೋಗುತ್ತಾರೆ. ಆದರೆ ಸಮಸ್ಯೆಯ ಬಗ್ಗೆ ಸ್ಪಂದಿಸುವುದಿಲ್ಲ. ತೀರ ಗ್ರಾಮೀಣ ಪ್ರದೇಶವಾದ ಕುಚ್ಚಾರು ಕುಡಿಬೈಲು ಪ್ರದೇಶದ ಪ್ರಮುಖ ಸಮಸ್ಯೆಯಾದ ಸಮರ್ಪಕ ರಸ್ತೆ ನಿರ್ಮಾಣವಾಗದಿರುವುದು ಬೇಸರದ ಸಂಗತಿ. ಕೂಡಲೇ ರಸ್ತೆ ನಿರ್ಮಾಣವಾಗದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸಮಸ್ಯೆ ಬಗೆಹರಿಸಿ
ಈ ಪರಿಸರದಲ್ಲಿ ಸುಮಾರು 500ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ದಿನನಿತ್ಯ ವಿದ್ಯಾರ್ಥಿಗಳು ಶಾಲೆಗೆ ಹಾಗೂ ಕಾರ್ಮಿಕರು ಗೇರು ಬೀಜ ಕಾರ್ಖಾನೆ ಸೇರಿದಂತೆ ಕೂಲಿ ಕೆಲಸಕ್ಕೆ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಮಳೆಗಾಲ ಬಂತೆಂದರೆ ಇಲ್ಲಿಯ ಗೋಳು ಹೇಳ ತೀರದು. ದಯವಿಟ್ಟು ಸಂಬಂಧಪಟ್ಟವರು ಈ ರಸ್ತೆ ಸಮಸ್ಯೆಯನ್ನು ಬಗೆಹರಿಸಿ.
-ರಾಜೇಶ್‌, ಅಧ್ಯಕ್ಷರು, ಶಾಂತಿನಿಕೇತನ ಯುವ ವೃಂದ ಕುಚ್ಚೂರು ಕುಡಿಬೈಲು

1.15 ಕೋ. ರೂ. ಅನುದಾನ ಬಿಡುಗಡೆ
ಕುಚ್ಚೂರು ಕುಡಿಬೈಲು ಭಾಗದ 500 ಮೀ.ರಸ್ತೆ ಕಾಂಕ್ರೀಟ್‌ ಕಾಮಗಾರಿಯಾಗಿದೆ. ಅಲ್ಲದೆ ಕುಡಿಬೈಲ್ಲಿನಲ್ಲಿ ನಡೆಯುವ ಸಮಾರಂಭಕ್ಕೆ ಹೋಗುವ ಮಾರ್ಗಕ್ಕೆ ಈಗಾಗಲೇ ಜಲ್ಲಿ ತಂದು ಸಮತಟ್ಟು ಮಾಡಲಾಗಿದೆ.ಸೊಳ್ಳೆಕಟ್ಟೆ ಹಾಲಿಕೋಡ್ಲು ಮಣ್ಣು ರಸ್ತೆಗೆ ಪಿಆರ್‌ಡಿ ಯೋಜನೆಯಡಿ 1.15 ಕೋ. ರೂ. ಅನುದಾನ ಮಂಜೂರುಗೊಂಡಿದ್ದು ಕೊರೊನಾ ಹಿನ್ನೆಲೆ ಕಾಮಗಾರಿ ಮಾಡಲು ಆಗಿಲ್ಲ. ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದ್ದು ಸಮಸ್ಯೆ ಬಗೆಹರಿಯಲಿದೆ.
-ಅಮೃತಕುಮಾರ್‌ ಶೆಟ್ಟಿ, ಹೆಬ್ರಿ ತಾ.ಪಂ. ಸದಸ್ಯರು.        

 

 

Advertisement

Udayavani is now on Telegram. Click here to join our channel and stay updated with the latest news.

Next