Advertisement

ಹೆಬ್ರಿ ಆರೋಗ್ಯ ಕೇಂದ್ರ: ಖಾಯಂ ವೈದ್ಯರ ಕೊರತೆ, ರೋಗಿಗಳ ಪರದಾಟ

05:23 PM Dec 15, 2021 | Team Udayavani |

ಹೆಬ್ರಿ : ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಬೇಕಾಗಿದ್ದ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ಕೊರತೆಯಿಂದಾಗಿ ರೋಗಿಗಳಿಗೆ ಸರಿಯಾದ ಚಿಕಿತ್ಸೆಗಳಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಈ ಹಿಂದೆ ಇದ್ದವರು ವರ್ಗಾವಣೆಗೊಂಡ ಬಳಿಕ ಇದುವರೆಗೆ ಮೆಡಿಸಿನ್‌ ವಿಭಾಗದ ವೈದ್ಯಾಧಿಕಾರಿಗಳು ಬರಲಿಲ್ಲ. ಈಗಿರುವ ವೈದ್ಯಾಧಿಕಾರಿ ಡೆಂಟಲ್‌ ವೈದ್ಯ ರಾ ಗಿ ರುವುದರಿಂದ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆಗೆ ಸಿಗುತ್ತಿಲ್ಲ. ಗುತ್ತಿಗೆ ಆಧಾರದ ವೈದ್ಯರಿಂದ ಲೂ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿವೆ.

ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ
ಒಂದೆಡೆ ಕೊರೊನಾ ಹಾಗೂ ಓಮಿಕ್ರಾನ್‌ನಿಂದಾಗಿ ಜನ ಭಯಭೀತರಾಗಿದ್ದಾರೆ. ತುರ್ತು ಚಿಕಿತ್ಸೆಗಾಗಿ ಸಂಜೆ ಅಥವಾ ರಾತ್ರಿ ಹೊತ್ತು ಆಸ್ಪತ್ರೆಗೆ ಬಂದರೆ ಇಲ್ಲಿ ವೈದ್ಯರಿಲ್ಲ ಎಂದು ರೋಗಿಗಳ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇತರ ದಿನಗಳಲ್ಲಿ ಬಂದರೂ ನೋಂದಣಿ, ರಕ್ತ ಪರೀಕ್ಷೆ, ಔಷಧಾಲಯದಲ್ಲಿ ಗಂಟೆಗಟ್ಟಲೆ ಕಾಯ ಬೇಕಾಗುತ್ತದೆ ಎಂದು ರೋಗಿಗಳು ದೂರಿದ್ದಾರೆ. ಡಿ.11ರಂದು ಆರೋಗ್ಯ ಕೇಂದ್ರದಲ್ಲಿ ಯಾರೂ ವೈದ್ಯರಿಲ್ಲದೆ ಹೆಬ್ರಿ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ನೂರಾರು ಜನರು ಚಿಕಿತ್ಸೆ ಸಿಗದೆ ಪರದಾಡಿದ್ದಾರೆ.

ಕಟ್ಟಡ ಮಾತ್ರ ಸೌಲಭ್ಯವಿಲ್ಲ
ಕಳೆದ 3ವರ್ಷಗಳ ಹಿಂದೆ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದೆಯೇ ಹೊರತು ಇಲ್ಲಿ ಯಾವುದೇ ಆಧುನಿಕ ಚಿಕಿತ್ಸಾ ಸೌಲಭ್ಯಗಳಿಲ್ಲ. ಇದೀಗ ತಾಲೂಕು ಕೇಂದ್ರ ವಾದ ಹೆಬ್ರಿಯಲ್ಲಿ ಖಾಸಗಿ ಸೇರಿದಂತೆ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಆಧುನಿಕ ಸೌಲಭ್ಯದ ಆಸ್ಪತ್ರೆಗಳಿಲ್ಲ. ಅಪಘಾತ ಅಥವಾ ತುರ್ತು ಸ್ಕಾನಿಂಗ್‌ ಮಾಡಿಸಬೇಕಾದರೆ ಮಣಿಪಾಲ ಅಥವಾ ಉಡುಪಿಯನ್ನೆ ಅವಲಂಬಿಸಬೇಕಾಗಿದೆ.ಈ ಕೇಂದ್ರದಲ್ಲಿ ಅಥವಾ ಖಾಸಗಿಯಾಗಿ ಸ್ಕ್ಯಾನಿಂಗ್‌ ಸೆಂಟರ್‌ ನಿರ್ಮಾಣವಾಗಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಹೆಚ್ಚುತ್ತಿರುವ ರೋಗಿಗಳು
ತಾಲೂಕಾಗಿ ಮಾರ್ಪಟ್ಟ ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರ ಹೊರನೋಟಕ್ಕೆ ಸುಸಜ್ಜಿತವಾಗಿದ್ದು ಇದನ್ನು ನೋಡಿದ ಜನರು ಚಿಕಿತ್ಸೆಗೆಂದು ಬಂದು ಕಾಯುವ ಹಾಗೂ ಸರಿಯಾಗಿ ಚಿಕಿತ್ಸೆ ಸಿಗದೆ ಹಿಂದಿರುಗುವ ಪರಿಸ್ಥಿತಿ ನಿರ್ಮಾಣ ವಾಗಿದೆ.ಪ್ರಸ್ತುತ ಹೆಬ್ರಿ ಆರೋಗ್ಯ ಕೇಂದ್ರಕ್ಕೆ ತಿಂಗಳಿಗೆ ಸುಮಾರು 4 ಸಾವಿರದಿಂದ 5 ಸಾವಿರ ರೋಗಿಗಳು ಬರುತ್ತಿದ್ದಾರೆ.ರೋಗಿಗಳಿಗೆ ಅಗತ್ಯವಾದ ಮೆಡಿಸಿನ್‌ ಲಭ್ಯವಿಲ್ಲದೆ ಹೊರ ವಲಯದಲ್ಲಿ ಹುಡುಕುವ ಪರಿಸ್ಥಿತಿ ಉಂಟಾಗಿದೆ.

Advertisement

ರಜಾ ದಿನಗಳಲ್ಲಿ ವೈದ್ಯರಿಲ್ಲ
ಈ ಕೇಂದ್ರದಲ್ಲಿ ಕಚೇರಿ ಸಮಯ ಹೊರತುಪಡಿಸಿ ರಾತ್ರಿ ಹೊತ್ತು ಹಾಗೂ ಅದಿತ್ಯವಾರದ ದಿನ ಅಪಘಾತ ಅಥವಾ
ತುರ್ತುಚಿಕಿತ್ಸೆಗೆ ಆಸ್ಪತ್ರೆಗೆ ಬಂದರೆ ವೈದ್ಯರು ಲಭ್ಯವಿರುವುದಿಲ್ಲ. ಇಲ್ಲಿ ಮೂಲಭೂತ ಸಮಸ್ಯೆ ಇದ್ದರೂ ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹುದ್ದೆಗಳು ಖಾಲಿ
ಮೆಡಿಸಿನ್‌ ವಿಭಾಗದ ಆಡಳಿತ ವೈದ್ಯಾಧಿಕಾರಿ, ಮಕ್ಕಳ, ಹೆರಿಗೆ,ಅರಿವಳಿಕೆ ತಜ್ಞರ ಈ 4 ಖಾಯಂ ವೈದ್ಯರ ಹುದ್ದೆಗಳು
ಖಾಲಿ ಇದೆ. ಆಧುನಿಕ ಸೌಲಭ್ಯದ ಚಿಕಿತ್ಸಾ ವಿಧಾನ, ಅತೀ ಅಗತ್ಯ ಔಷಧಗಳು ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ. ಅಲ್ಲದೆ ಖಾಯಂ ಮೆಡಿಸಿನ್‌ ವೈದ್ಯರಿಲ್ಲದ ಪರಿಣಾಮ ಮರಣೋತ್ತರ ಪರೀಕ್ಷೆಗೆ ಸಮಸ್ಯೆಯಾಗಿದೆ.

ಪ್ರಯೋಜನಕ್ಕೆ ಬಾರದ ಸೌಲಭ್ಯ
ಈ ಕೇಂದ್ರದಲ್ಲಿ ಲಕ್ಷಾಂತರ ಖರ್ಚು ಮಾಡಿ ಆಕ್ಸಿಜನ್‌ ಘಟಕ ನಿರ್ಮಾಣವಾಗಿದೆ.ಆದರೆ ಇದರಿಂದ ಜನರಿಗೆ ಯಾವ ಪ್ರಯೋಜನವು ಇಲ್ಲ.ಕೋವಿಡ್‌ ರೋಗಿ ತುರ್ತು ಚಿಕಿತ್ಸೆಗಾಗಿ ಇಲ್ಲಿಗೆ ಬಂದರೂ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗುತ್ತದೆ.

ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಲಿ
ಉಳಿದ ಸೌಲಭ್ಯ ಕಲ್ಪಿಸಿ ತಾಲೂಕು ಆಸ್ಪತ್ರೆಯನ್ನಾಗಿ ಮಾಡಿದಲ್ಲಿ ಇಲ್ಲಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುವುದು ಇಲ್ಲಿನ ನಾಗರಿಕರ ಅಭಿಪ್ರಾಯವಾಗಿದೆ.

ಶೀಘ್ರ ಮಕ್ಕಳ ವೈದ್ಯರು ಬೇಕು
ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 18 ಉಪಕೇಂದ್ರಗಳಿದ್ದು ಅದ ರಲ್ಲಿ 16 ಇದೀಗ ತಾಲೂಕು ಆದ ಬಳಿಕ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಒಳಪಡುತ್ತದೆ. ತೀರ ಅಗತ್ಯವಿರುವ ಮಕ್ಕಳ ವೈದ್ಯರಿಲ್ಲ ಎಂಬ ಕೊರತೆ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಅಲ್ಲದೆ ಇದೀಗ ಮಕ್ಕಳಿಗೆ ತೀರ ಸಮಸ್ಯೆಯಾಗಿ ಪರಿಣಮಿಸಲಿರುವ ವೈರಸ್‌ನಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾದರೆ ತಾಲೂಕು ಕೇಂದ್ರವಾದ ಹೆಬ್ರಿಯ ಸುತ್ತಮುತ್ತ ಮಕ್ಕಳ ಖಾಸಗಿ ವೈದ್ಯರೂ ಇಲ್ಲ ಎನ್ನುವುದು ಬೇಸರದ ಸಂಗತಿ ಎಂದು ಸಾರ್ವಜನಿಕರು ಹೇಳುತ್ತಾರೆ.

ಉಗ್ರ ಪ್ರತಿಭಟನೆ
ಕೋಟ್ಯಂತರ ರೂ. ವೆಚ್ಚ ದಲ್ಲಿ ನಿರ್ಮಾಣವಾದ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ ಊಟಕ್ಕೆ ಇಲ್ಲದ ಉಪ್ಪಿನಕಾಯಿಯಂತಾಗಿದೆ. ಆಕ್ಸಿಜನ್‌ ಘಟಕ, ಕೋವಿಡ್‌ ಕೇರ್‌ ಸೆಂಟರ್‌ ಅನ್ನು ಆರೋಗ್ಯ ಸಚಿವರೇ ಬಂದು ಉದ್ಘಾಟನೆ ಮಾಡಿದ್ದಾರೆ.ಆದರೆ ಇದರಿಂದ ಜನರಿಗೆ ಯಾವ ಪ್ರಯೋಜನವೂ ಆಗಿಲ್ಲ. ಸಂಜೆ 4 ಗಂಟೆ ಮೇಲೆ ಆಸ್ಪತ್ರೆಯಲ್ಲಿ ವೈದ್ಯರು ಸಿಗುವುದಿಲ್ಲ. ರಾತ್ರಿ ಹೊತ್ತು ಅಂತೂ ಯಾರೂ ಇಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಯಾಕೆ ಮೌನವಾಗಿದ್ದಾರೆ. ಸಮಸ್ಯೆ ಶೀಘ್ರ ಬಗೆಹರಿಯದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಹೆಬ್ರಿಯ ಶ್ರೀಕಾಂತ್‌ ಪೂಜಾರಿ ಕುಚ್ಚಾರು ತಿಳಿಸಿದ್ದಾರೆ.

ಖಾಯಂ ವೈದ್ಯರ ಕೊರತೆ
ಖಾಯಂ ವೈದ್ಯರ ಕೊರತೆ ಇದೆ. ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಿಸಲು ಈಗ ಅವಕಾಶವಿಲ್ಲ. ಇಲ್ಲಿನ ಸಮಸ್ಯೆ ಬಗ್ಗೆ ಈ ವಾರದಲ್ಲಿ ಸ್ಥಳಕ್ಕೆ ಬಂದು ಸಭೆ ನಡೆಸಿ ಅಭಿವೃದ್ಧಿ ಹಾಗೂ ಸುಧಾರಣೆ ಬಗ್ಗೆ ಚರ್ಚಿಸಲಾಗುವುದು.ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸುವ ಬಗ್ಗೆ ಪ್ರಯತ್ನಿಸಲಾಗುವುದು.
-ನಾಗಭೂಷಣ ಉಡುಪ
ಜಿಲ್ಲಾ ಆರೋಗ್ಯ ಅಧಿಕಾರಿ

-ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next