ನಟಿ ತಾರಾ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಹೆಬ್ಬೆಟ್ ರಾಮಕ್ಕ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿರೋದು ನಿಮಗೆ ಗೊತ್ತಿರಬಹುದು. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಏಪ್ರಿಲ್ 27 ರಂದು ತೆರೆಕಾಣುತ್ತಿದೆ. ತಾರಾ ಕೂಡಾ ಚಿತ್ರದ ಪಾತ್ರದಿಂದ ಖುಷಿಯಾಗಿದ್ದಾರೆ. ತುಂಬಾ ನೈಜವಾದ ಪಾತ್ರವಾಗಿದ್ದು, ಇವತ್ತಿನ ಸಮಾಜದಲ್ಲಿ ಕಾಣಸಿಗುವಂತಯಹ ಪಾತ್ರವಾಗಿರುವುದರಿಂದ ಜನ ಇಷ್ಟಪಡುತ್ತಾರೆಂಬ ವಿಶ್ವಾಸ ಅವರಿಗಿದೆ.
“ಈ ಹಿಂದೆ ನನ್ನ “ಹಸೀನಾ’ ಚಿತ್ರ ಬಿಡುಗಡೆಯಾದಾಗ ಎಲ್ಲರೂ ನನ್ನನ್ನು ಹಸೀನಾ ಎಂದು ಕರೆಯಲಾರಂಭಿಸಿದರು. ಈಗ “ಹೆಬ್ಬೆಟ್ ರಾಮಕ್ಕ’ ಬಿಡುಗಡೆಯಾಗುತ್ತಿದೆ. ಈ ಚಿತ್ರ ತೆರೆಕಂಡ ನಂತರ ನನ್ನನ್ನು ಹೆಬ್ಬೆಟ್ ರಾಮಕ್ಕ ಎಂದೇ ಕರೆಯಬಹುದು’ ಎನ್ನುವುದು ತಾರಾ ಮಾತು. “ಹೆಬ್ಬೆಟ್ ರಾಮಕ್ಕ’ ಚಿತ್ರ ಒಳ್ಳೆಯ ಸಮಯಕ್ಕೆ ಬಿಡುಗಡೆಯಾಗುತ್ತಿದೆ ಎಂಬುದು ತಾರಾ ಮಾತು.
ಅದಕ್ಕೆ ಕಾರಣ ಚುನಾವಣೆ. ಈ ಚಿತ್ರದಲ್ಲಿ ರಾಜ್ಯದಲ್ಲಿ ಮಹಿಳಾ ಮೀಸಲಾತಿ ಎಷ್ಟರಮಟ್ಟಿಗೆ ಜಾರಿಗೆ ಬಂದಿದೆ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿ ಸರಿಯಾಗಿ ಸದ್ಬಳಕೆಯಾಗುತ್ತಿದೆಯಾ, ಆನಕ್ಷರಸ್ಥ ಮಹಿಳೆಯರು ಚುನಾವಣೆಯಲ್ಲಿ ಗೆದ್ದು ಆ ಸ್ಥಾನವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ವಿಷಯಗಳ ಕುರಿತಾಗಿ ಚಿತ್ರ ಸುತ್ತುತ್ತದೆ. ಹಾಗಾಗಿ, ಚಿತ್ರ ಸದ್ಯದ ಪರಿಸ್ಥಿತಿಗೆ ಹೆಚ್ಚು ಪ್ರಸ್ತುತವಾಗಿದೆ ಎಂಬುದು ತಾರಾ ಮಾತು.
ಸದ್ಯ ತಾರಾ ಅವರಿಗೆ ಒಳ್ಳೆಯ ಪಾತ್ರಗಳು ಹುಡುಕಿಕೊಂಡು ಬರುತ್ತಿರುವ ಖುಷಿ ಇದೆ. “ಒಳ್ಳೆಯ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. “ಪಾರ್ವತಮ್ಮ’ ಎಂಬ ಸಿನಿಮಾವೊಂದು ಬಂದಿದೆ. ತುಂಬಾ ಚೆನ್ನಾಗಿದೆ. ಐಎಎಸ್ ಆಫೀಸರ್ ಪಾತ್ರ. ಕಥೆ ಕೇಳಿದ್ದೇನೆ. ಆ ಚಿತ್ರದಲ್ಲೂ ನಟಿಸುವ ಸಾಧ್ಯತೆ ಇದೆ. ಇದು ಕೂಡಾ ಹೊಸಬರ ಸಿನಿಮಾ. ಹೊಸಬರು ಸಾಕಷ್ಟು ತಯಾರಿಯೊಂದಿಗೆ ಬರುತ್ತಾರೆ’ ಎನ್ನುತ್ತಾರೆ ತಾರಾ.