ಆಂಧ್ರಪ್ರದೇಶ: ನಟ ನಾರಾ ರೋಹಿತ್ ಅವರ ತಂದೆ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರ ಕಿರಿಯ ಸಹೋದರ ನಾರಾ ರಾಮಮೂರ್ತಿ ನಾಯ್ಡು ಅವರು ಹೃದಯಾಘಾತದಿಂದ ಇಂದು(ನ.16) ಮಧ್ಯಾಹ್ನ ನಿಧನರಾದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೃದಯ-ಉಸಿರಾಟದ ಸಮಸ್ಯೆಗೆ ಸಂಬಂಧಿಸಿ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು ಅಲ್ಲದೆ ವೆಂಟಿಲೇಟರ್ ಸಹಾಯದಲ್ಲಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ರಾಮಮೂರ್ತಿ ನಾಯ್ಡು ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಚಂದ್ರಬಾಬು ನಾಯ್ಡು ಹಾಗೂ ಪುತ್ರ ನಾರಾ ಲೋಕೇಶ್ ಹೈದರಾಬಾದ್‌ಗೆ ತೆರಳಿದ್ದಾರೆ.
ಆಂಧ್ರಪ್ರದೇಶ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿರುವ ರಾಮಮೂರ್ತಿ ನಾಯ್ಡು ಅವರು 1994 ರಿಂದ 1999 ರವರೆಗೆ ಚಂದ್ರಗಿರಿ ಕ್ಷೇತ್ರದ ಶಾಸಕರಾಗಿ ತೆಲುಗು ದೇಶಂ ಪಕ್ಷವನ್ನು (ಟಿಡಿಪಿ) ಪ್ರತಿನಿಧಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಪಕ್ಷದ ತಳಮಟ್ಟದ ಅಸ್ತಿತ್ವವನ್ನು ಬಲಪಡಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಅಷ್ಟುಮಾತ್ರವಲ್ಲದೆ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ, ಅವರು ವಿವಿಧ ಚಲನಚಿತ್ರಗಳೊಂದಿಗೆ ತೆಲುಗು ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ.
ನಾರಾ ರಾಮಮೂರ್ತಿ ನಾಯ್ಡು ಅವರಿಗೆ ನಟ ನಾರಾ ರೋಹಿತ್ ಮತ್ತು ನಾರಾ ಗಿರೀಶ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ನಾರಾ ರಾಮಮೂರ್ತಿ ನಾಯ್ಡು ಅವರ ಅಂತಿಮ ಸಂಸ್ಕಾರ ನಾಳೆ (ನ.17) ಅವರ ಹುಟ್ಟೂರಾದ ಚಿತ್ತೂರು ಜಿಲ್ಲೆಯ ನಾರಾವರಿಪಲ್ಲೆಯಲ್ಲಿ ನಡೆಯಲಿದೆ.
ಇದನ್ನೂ ಓದಿ: Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು