Advertisement

ಮಳೆ ಅಬ್ಬರ: ನದಿಗಳು ಭರ್ತಿ, 2 ಬಲಿ

11:52 AM Jul 08, 2018 | Team Udayavani |

ಪುತ್ತೂರು: ಮಳೆಯ ನಕ್ಷತ್ರ ಪುನರ್ವಸು ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಪುನರ್ವಸು ನಕ್ಷತ್ರ ಆರಂಭಗೊಂಡ 48 ಗಂಟೆಗಳ ಅವಧಿಯಲ್ಲಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ತಾಲೂಕಿನ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಗುರುವಾರ ಬೆಳಗ್ಗಿನಿಂದ ಉತ್ತಮ ಮಳೆಯಾಗಿದೆ. ಕುಂಬ್ರ, ಈಶ್ವರ ಮಂಗಲ, ಸುಳ್ಯಪದವು, ಬೆಟ್ಟಂಪಾಡಿ, ಪುರುಷರಕಟ್ಟೆ, ಉಪ್ಪಿನಂಗಡಿ, ನೆಲ್ಯಾಡಿಗಳಲ್ಲಿ ಉತ್ತಮ ಮಳೆಯಾಗಿದೆ. ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ಶುಕ್ರವಾರ ರಾತ್ರಿ ಸಿಡಿಲು, ಮಿಂಚಿನ ಆರ್ಭಟವೂ ಇತ್ತು. ಮಳೆಯ ಭೀಕರತೆಯನ್ನು ಮನಗಂಡು ಶನಿವಾರ ಪುತ್ತೂರು ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ ಅವರು ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ರಜೆ ಘೋಷಿಸಿದ್ದರು. 

Advertisement

ಗ್ರಾಮಾಂತರ ಭಾಗಗಳಲ್ಲಿ ಪ್ರಾಕೃತಿಕ ಹಾನಿಯಿಂದ ತೊಂದರೆ ಸಂಭವಿಸದಂತೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ಪಕ್ಕದ ಮನೆಗಳಿಗೆ ಶುಕ್ರವಾರ ರಾತ್ರಿ ನೀರು ನುಗ್ಗಿದೆ. ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ಬಳಿಯೂ ನೀರು ನುಗ್ಗಿ ಹಾನಿ ಸಂಭವಿಸಿದೆ. ತೆಂಕಿಲದ ಬಳಿ ಧರೆ ಕುಸಿತ ಉಂಟಾಗಿದೆ. ಮಂಜಲ್ಪಡ್ಪು  ಸಮೀಪವೂ ಧರೆ ಕುಸಿದು ರಸ್ತೆಗೆ ಮಣ್ಣು ಬಿದ್ದಿದೆ. ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗಿನ 24 ಗಂಟೆಗಳ ಅವಧಿಯಲ್ಲಿ ತಾಲೂಕಿನಾದ್ಯಂತ ಗರಿಷ್ಠ ಪ್ರಮಾಣದಲ್ಲಿ 1,130.3 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ಜೂ. 13 ಹಾಗೂ 14ರಂದು 846 ಮಿ.ಮೀ. ಮಳೆ ಬಿದ್ದಿರುವುದು ಈ ಮಳೆಗಾಲದ ಗರಿಷ್ಠ ಪ್ರಮಾಣವಾಗಿತ್ತು.

ಪುತ್ತೂರು ನಗರದಲ್ಲಿ 227 ಮಿ.ಮೀ., ಉಪ್ಪಿನಂಗಡಿಯಲ್ಲಿ 177.4 ಮಿ.ಮೀ., ಶಿರಾಡಿಯಲ್ಲಿ 173.4 ಮಿ.ಮೀ., ಕೊಯಿಲದಲ್ಲಿ 180.3 ಮಿ.ಮೀ., ಐತೂರುನಲ್ಲಿ 215 ಮಿ.ಮೀ., ಕಡಬದಲ್ಲಿ 157.2 ಮಿ.ಮೀ. ಮಳೆ ಸುರಿದಿದೆ. ತಾಲೂಕಿನಲ್ಲಿ ಒಟ್ಟು ಸರಾಸರಿ 188.3 ಮಿ.ಮೀ. ಮಳೆಯಾಗಿದೆ.

ಇಬ್ಬರ ಸಾವು
ಸಾಲ್ಮರ ಸಮೀಪದ ಹೆಬ್ಟಾರಬೈಲುನಲ್ಲಿ ಮನೆಗೆ ಪಕ್ಕ ಇದ್ದ ಧರೆ ಕುಸಿತದಿಂದಾಗಿ ಶುಕ್ರವಾರ ರಾತ್ರಿ ಮಲಗಿದ್ದ ಅಜ್ಜಿ, ಮೊಮ್ಮಗ ಅಸುನೀಗಿದ್ದಾರೆ. ಘಟನ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.

ಸುಳ್ಯ: ತುಂಬಿ ಹರಿದ ಪಯಸ್ವಿನಿ
ಸುಳ್ಯ: ತಾಲೂಕಿನಲ್ಲಿ ದಿನವಿಡೀ ಧಾರಕಾರ ಮಳೆ ಸುರಿದಿದೆ. ತೋಡು, ಹೊಳೆ, ನದಿಗಳು ತುಂಬಿ ತುಳುಕಿದ್ದು, ನಗರ ಮತ್ತು ಗ್ರಾಮಾಂತರ ರಸ್ತೆಗಳು ತೋಡಿನಂತಾಗಿದ್ದವು. ಯಾವುದೇ ಹಾನಿ ಉಂಟಾದ ಕುರಿತು ವರದಿಯಾಗಿಲ್ಲ. ನಗರದ ಪೈಚಾರು, ಹಳೆಗೇಟು, ಹೊರವಲಯದ ಕನಕಮಜಲು ಸಹಿತ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲೇ ಮಳೆ ನೀರು ಸಾಗಿ ವಾಹನ ಸವಾರರು ಅಕ್ಷರಶಃ ಪರದಾಟ ನಡೆಸಿದರು. ಗ್ರಾಮಾಂತರ ಭಾಗದ ಕಚ್ಚಾ ರಸ್ತೆಗಳಲ್ಲೂ ವಾಹನ ಓಡಾಟ, ಪಾದಚಾರಿಗಳ ಸಂಚಾರ ದುಸ್ತರವೆನಿಸಿತ್ತು.

Advertisement

ತುಂಬಿದ ಪಯಸ್ವಿನಿ
ಆರೇಳು ವರ್ಷಗಳಲ್ಲಿ ನದಿ, ಹೊಳೆಗಳಲ್ಲಿ ನೀರಿನ ಹರಿವಿನ ಮಟ್ಟ ಸಾಕಷ್ಟು ಏರಿಕೆ ಕಂಡಿತ್ತು. ಭಾಗಮಂಡಲದಲ್ಲಿ ಧಾರಾಕಾರ ಮಳೆ ಉಂಟಾದ ಕಾರಣ, ಪಯಸ್ವಿನಿ ತುಂಬಿ ಹರಿಯಿತು. ಕುಮಾರಧಾರೆಯಲ್ಲಿಯೂ ಹರಿವಿನ ಮಟ್ಟ ಹೆಚ್ಚಿತ್ತು. ಗೌರಿ ಹೊಳೆಯಲ್ಲಿ ನೀರು ತುಂಬಿ ಕುಂಡಡ್ಕ, ಚೆನ್ನಾವರ ಪರಿಸರದ ಕೃಷಿ ತೋಟಗಳಿಗೆ ನುಗ್ಗಿತ್ತು. ಸುಳ್ಯ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಸಂಜೆ ತನಕವೂ ಮಳೆ ಅಬ್ಬರ ಕಡಿಮೆ ಆಗಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next